ಜಾನಪದರ ನಾಣ್ಣುಡಿಯಂತೆ ಮಕ್ಕಳನ್ನು ಬೆಳೆಸಿ- ವಕೀಲ ಶಿವರಾಂ

ಮಣಿಕಂಠ ಜನತಾ ರಾಯಭಾರಿ
2 Min Read

ಚಾಮರಾಜನಗರ: ಜಾನಪದರು ನಾಣ್ಣುಡಿಯಂತೆ ಮಕ್ಕಳನ್ನು ಬೆಳೆಸಿದ್ದೇ ಆದರೇ ಅವರು ಮಾನಸಿಕ ಬೆಳವಣಿಗೆ ಉತ್ತಮವಾಗಿರುತ್ತದೆ ಎಂದು ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಮತ್ತು ಹಿರಿಯ ವಕೀಲ ಶಿವರಾಂ ಅವರು ತಿಳಿಸಿದರು.

ನಗರದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿರುವ ಪಿಡಬ್ಲ್ಯೂಡಿ ಸರ್ಕಾರಿ ಶಾಲೆ ಆವರಣದಲ್ಲಿ ಆತ್ಮೀಯ ರಂಗ ಪ್ರಯೋಗಾಲಯ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಬೇಸಿಗೆ ಶಿಬಿರದ ಅಂಗವಾಗಿ ಶನಿವಾರ ಆಯೋಜಿಸಿದ್ದ ಮಕ್ಕಳ ಸಂತೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಬಳಕೆಯಲ್ಲಿ ಹೆಚ್ಚು ಮುಳುಗಿದ್ದಾರೆ. ಅದರಲ್ಲೂ ಈ ಬೇಸಿಗೆಯಲ್ಲಿ ಮಕ್ಕಳನ್ನು ಮನೆಯಲ್ಲಿ ಹಿಡಿದಿಟ್ಟುಕೊಳ್ಳುವುದೇ ಕಷ್ಟ. ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಬೇಸಿಗೆ ಶಿಬಿರಗಳು ಅತ್ಯಂತ ಸಹಕಾರಿಯಾಗಿದೆ ಎಂದು ತಿಳಿಸಿದರು.

ಮಕ್ಕಳು ದೇವರಿಗೆ ಸಮಾನ ಎಂದು ಕರೆಯುತ್ತಾರೆ. ಜಾನಪದರು ಮಕ್ಕಳ ಕುರಿತು ಸಾಕಷ್ಟು ನುಡಿಗಟ್ಟುಗಳನ್ನು ಕಟ್ಟಿದ್ದಾರೆ. ಅದರಂತೆ ಮಕ್ಕಳನ್ನು ಬೆಳೆಸಿದ್ದೇ ಆದರೇ ಅವರು ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಉತ್ತಮವಾಗಿರುತ್ತದೆ. ಆತ್ಮೀಯ ರಂಗ ಪ್ರಯೋಗಾಲಯ ಟ್ರಸ್ಟ್ ವತಿಯಿಂದ ಪ್ರತಿವರ್ಷವೂ ವಿಭಿನ್ನವಾಗಿ ಬೇಸಿಗೆ ಶಿಬಿರವನ್ನು ಆಯೋಜಿಸಿಕೊಂಡು ಬರುತ್ತಿರುವುದು ಮಕ್ಕಳಿಗೆ ಸಹಕಾರಿಯಾಗಿದೆ ಎಂದರು.

ಆತ್ಮೀಯ ರಂಗ ಪ್ರಯೋಗಾಲಯ ಟ್ರಸ್ಟ್ ಅಧ್ಯಕ್ಷ ಶಿವು ಜನ್ನೂರು ಮಾತನಾಡಿ, ಕಳೆದ 8 ವರ್ಷಗಳಿಂದಲೂ ನಿರಂತರವಾಗಿ ಆಯೋಜನೆ ಮಾಡಿಕೊಂಡು ಬರುತ್ತಿದೆ. ಈ ವರ್ಷ ಮಕ್ಕಳ ಮಾನಸಿಕ ಉಲ್ಲಾಸ ಮತ್ತು ಬೆಳವಣಿಗೆ ಎಂಬ ಶೀರ್ಷಿಕೆಯಡಿಯಲ್ಲಿ ಶಿಬಿರ ಹಮ್ಮಿಕೊಂಡಿದ್ದೇವೆ. ಮಕ್ಕಳು ಆಡುತ್ತಾ, ನಲಿಯುತ್ತಾ ಕಲಿಯಬೇಕು. ಇಂತಹ ಸಂದರ್ಭದಲ್ಲಿ ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರಕ್ಕೆ ಕಳುಹಿಸಿ ಪ್ರೋತ್ಸಾಹ ನೀಡುತ್ತಿರುವ ಪೋಷಕರಿಗೆ ಧನ್ಯವಾದ ತಿಳಿಸಿದರು.

ಉಪನ್ಯಾಸಕ ಬಸವಣ್ಣ ಮೂಕಹಳ್ಳಿ ಮಾತನಾಡಿ, ಔಪಚಾರಿಕ ಶಿಕ್ಷಣದಷ್ಟೇ ಮಕ್ಕಳಿಗೆ ಅನೌಪಚಾರಿಕ ಶಿಕ್ಷಣವೂ ಅಗತ್ಯವಾಗಿದೆ. ಬಯಲು ವಿಶ್ವವಿದ್ಯಾಲಯ ಇದ್ದಂತೆ, ಬಯಲಿನಲ್ಲಿ ಮಕ್ಕಳು ಜೀವನ ವಿಧಾನಗಳನ್ನು ಕಲಿಯಬಹುದಾಗಿದೆ. ಮಕ್ಕಳಲ್ಲಿರುವ ಪ್ರತಿ ಅನಾವರಣಕ್ಕೆ ಬೇಸಿಗೆ ಶಿಬಿರ ಅತ್ಯಂತ ಸಹಕಾರಿಯಾಗಿದೆ ಎಂದರು.

ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಶಂಕರ ಸಿ.ಅಂಕನಶೆಟ್ಟಿಪುರ ಮಾತನಾಡಿ, ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆ ಹಾಗೂ ಅವರಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಯ ಅನಾವರಣಕ್ಕೆ ಬೇಸಿಗೆ ಶಿಬಿರಗಳು ಸಹಕಾರಿಯಾಗಿದೆ. ಆತ್ಮೀಯ ರಂಗ ಪ್ರಯೋಗಾಲಯ ಟ್ರಸ್ಟ್ ಕಲೆ, ಸಾಹಿತ್ಯ ಮತ್ತು ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುವ ಮೂಲಕ ಉತ್ತಮ ಕೆಲಸವನ್ನು ಮಾಡುತ್ತಿದೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಆತ್ಮೀಯ ರಂಗ ಪ್ರಯೋಗಾಲಯ ಟ್ರಸ್ಟ್ ಖಜಾಂಚಿ ಶಿವಶಂಕರ್ ಚಟ್ಟು, ಸದಸ್ಯರಾದ ಮಹೇಶ್ ಕೋಲು, ರಮೇಶ್ ಪಾಪಯ್ಯ, ಮಂಜೇಶ್ ಎಂ.ಜೆ.ನಾಗವಳ್ಳಿ, ಸಿದ್ದಣ್ಣ ರಾಮಸಮುದ್ರ, ಪೋಷಕರು ಹಾಗೂ ಶಿಬಿರಾರ್ಥಿಗಳು ಭಾಗವಹಿಸಿದ್ದರು.

Share this Article
2 Comments