ಚಾಮರಾಜನಗರ: ದಿನೇದಿನೇ ಹೆಚ್ಚುತ್ತಿರುವ ಬಿಸಿಲಿನ ತಾಪದಲ್ಲಿ ದೇಹವನ್ನು ತಂಪಾಗಿಸುವ ರಾಗಿ ಅಂಬಲಿಯನ್ನು ಪುಟಾಣಿ ಆದ್ಯ ಬಾಳೆ ಮಾರಾಟ ಮಾಡುತ್ತಿದ್ದರೇ, ರಾಗಿ ಅಂಬಲಿಯ ರುಚಿ ಸವಿಯಲು ಪೋಷಕರು ಮುಗಿಬಿದ್ದರು.
ನಗರದ ಪಿಡಬ್ಲ್ಯೂಡಿ ಸರ್ಕಾರಿ ಶಾಲೆ ಆವರಣದಲ್ಲಿ ಆತ್ಮೀಯ ರಂಗ ಪ್ರಯೋಗಾಲಯ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಬೇಸಿಗೆ ಶಿಬಿರದ ಅಂಗವಾಗಿ ಆಯೋಜಿಸಿದ್ದ “ಮಕ್ಕಳ ಸಂತೆ” ಯಲ್ಲಿ ಶಿಬಿರದ ಮಕ್ಕಳು ವಿವಿಧ ತಿಂಡಿ, ತಿನಿಸು ಹಾಗೂ ಹಣ್ಣುಗಳನ್ನು ಮಾರಾಟ ಮಾಡುವ ಮೂಲಕ ವ್ಯಾವಹಾರಿಕ ಜ್ಞಾನವನ್ನು ವೃದ್ಧಿಸಿಕೊಂಡರು.

ಮಕ್ಕಳ ಸಂತೆಯಲ್ಲಿ ಭಾಗವಹಿಸಿದ್ದ ಮಕ್ಕಳು ಬಿಸಿಲಿನ ಬೇಗೆ ಹೆಚ್ಚಾಗಿದ್ದ ಕಾರಣಕ್ಕೆ ಹೆಚ್ಚಾಗಿ ಮಜ್ಜಿಗೆ, ಪಾನಕವನ್ನು ಮಾರಾಟ ಮಾಡಿದರು. ಕೆಲವು ಮಕ್ಕಳು ಮಾವಿನ ಹಣ್ಣು, ಸೌತೆಕಾಯಿ, ಸೇಬು, ಕಲ್ಲಂಗಡಿ, ದ್ರಾಕ್ಷಿ, ಸಕ್ಕರೆ ಬಾಳೇಹಣ್ಣು ಮಾರಾಟ ಮಾಡುವ ಮೂಲಕ ಗಮನಸೆಳೆದರು. ಪುಟಾಣಿ ಮಗುವೊಂದು ಚಿರಮುರಿ ಮಾರಾಟ ಮಾಡುವ ಮೂಲಕ ಹೆಚ್ಚಿನ ಸಂಪಾದನೆ ಮಾಡಿರುವುದು ನಾನೇ ಎಂದು ಹಿಗ್ಗಿದ ದೃಶ್ಯ ಪೋಷಕರ ಮೆಚ್ಚುಗೆಗೆ ಪಾತ್ರವಾಯಿತು.
ರಾಗಿ ಅಂಬಲಿ, ಉರಿದ ಕಡ್ಲೇಬೀಜ, ಹೋಳಿಗೆ, ಕರ್ಜಿಕಾಯಿ, ರವೆ ಹುಂಡೆ, ಗುಲಾಬ್ ಜಾಮೂನ್, ಪಾನಿಪುರಿ, ಬೇಲ್ ಪುರಿ ಹಾಗೂ ಇನ್ನಿತರೆ ತಿನಿಸುಗಳನ್ನು ಮಾರಾಟ ಮಾಡುವ ಮೂಲಕ ಪೋಷಕರ ಮೆಚ್ಚುಗೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ಆತ್ಮೀಯ ರಂಗ ಪ್ರಯೋಗಾಲಯ ಟ್ರಸ್ಟ್ ಅಧ್ಯಕ್ಷ ಶಿವು ಜನ್ನೂರು ಹೊಸೂರು, ಖಜಾಂಚಿ ಶಿವಶಂಕರ್ ಚಟ್ಟು, ಸದಸ್ಯರಾದ ಸಿದ್ದಣ್ಣ ರಾಮಸಮುದ್ರ, ಮಹೇಶ್ ಕೋಲು, ಮಂಜೇಶ್ ನಾಗವಳ್ಳಿ, ರಮೇಶ್ ಪಾಪಯ್ಯ ಹಾಗೂ ಇತರರು ಹಾಜರಿದ್ದರು.
ಗಮನಸೆಳೆದ ಪೋಷಕರ ಭಾಗವಹಿಸುವಿಕೆ: ಮಕ್ಕಳ ಸಂತೆಯಲ್ಲಿ ಭಾಗವಹಿಸಿದ ಪೋಷಕರು ತಮ್ಮ ಮಕ್ಕಳಿಗೆ ಸಲಹೆ ನೀಡುವ ಜೊತೆಗೆ ಇನ್ನಿತರೆ ಮಕ್ಕಳು ತಯಾರಿಸಿದ್ದ ತಿಂಡಿ-ತಿನಿಸುಗಳನ್ನು ಖರೀದಿ ಮಾಡುವ ಮೂಲಕ ಮಕ್ಕಳ ಸಂತೆಗೆ ಹೆಚ್ಚಿನ ಬೆಂಬಲ ನೀಡಿದರು. ಅದಲ್ಲದೇ ಪೋಷಕರಿಗಾಗಿ ಆಯೋಜಿಸಿದ್ದ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಎಲ್ಲರ ಗಮನಸೆಳೆದರು. ದೊಡ್ಡ ಬ್ಯಾನರ್ ಮೂಲಕ ಬಿಡಿಸಿದ್ದ ರೇಖಾ ಚಿತ್ರಗಳಿಗೆ ಪೋಷಕರು ಮತ್ತು ಮಕ್ಕಳು ಹಚ್ಚುವ ಮೂಲಕ ಸಂಭ್ರಮಿಸಿದರು.