ಕೇಸರಿ ಶಾಲು ಧರ್ಮವಲ್ಲ ಎಂಬ ಶಾಸಕರ ಹೇಳಿಕೆಗೆ ಖಂಡನೆ 

ಮಣಿಕಂಠ ಜನತಾ ರಾಯಭಾರಿ
2 Min Read

ಚಾಮರಾಜನಗರ: ಚಾ.ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರು “ಕೇಸರಿ ಶಾಲು ಯಾವುದೇ ಧರ್ಮವಲ್ಲ ಎಂಬ ಹೇಳಿಕೆ ಅಲ್ಪಸಂಖ್ಯಾತರ ಓಲೈಕೆಯನ್ನು ತೋರಿಸುತ್ತದೆ ಎಂದು ಚುಡಾ ಮಾಜಿ ಅಧ್ಯಕ್ಷ ಕುಲಗಾಣ ಶಾಂತಿ ಮೂರ್ತಿ ಖಂಡಿಸಿದ್ದಾರೆ.

ಕೇಸರಿ ಧ್ವಜ, ಶಾಲು ಅಥವಾ ಬಣ್ಣ ಹಿಂದು ಧರ್ಮದ ಸಂಕೇತವಾಗಿದೆ. ಹಿಂದೂ ಧರ್ಮದಲ್ಲಿ ಕೇಸರಿ ಬಣ್ಣಕ್ಕೆ ಅತ್ಯಂತ ಪವಿತ್ರ ಹಾಗೂ ಸರ್ವೋಚ್ಚ ಸ್ಥಾನವಿದೆ. ಇದು ಕೇವಲ ಒಂದು ಬಣ್ಣವಲ್ಲ, ಬದಲಿಗೆ ಭಾರತೀಯ ಸಂಸ್ಕೃತಿ, ಆಧ್ಯಾತ್ಮಿಕತೆ, ತ್ಯಾಗ ಮತ್ತು ಧರ್ಮದ ಸನಾತನ ಸಂಕೇತವಾಗಿದೆ. ಸಹಸ್ರಾರು ವರ್ಷಗಳಿಂದ ಸಾಧು-ಸಂತರು, ಮುನಿಗಳು ಈ ಕೇಸರಿ ಧ್ವಜದ ಅಡಿಯಲ್ಲಿ ಧರ್ಮದ ರಕ್ಷಣೆ ಮತ್ತು ಸಮಾಜದ ಜಾಗೃತಿಗಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ. ಇದರ ಮಹತ್ವ ಮತ್ತು ಇತಿಹಾಸವಿರುವ ಕೇಸರಿ ಬಣ್ಣದ ಬಗ್ಗೆ ಕಾಂಗ್ರೆಸ್ಸಿಗರು ಪದೇ ಪದೇ ಹಗುರವಾಗಿ ಮಾತನಾಡುತ್ತಿದ್ದು, ಚಾಮರಾಜನಗರ ವಿಧಾನಸಭಾಕ್ಷೇತ್ರದ ಶಾಸಕರು ಸಹ ಅದೇ ಚಾಳಿಯನ್ನು ಪ್ರಾರಂಭಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಕೇಸರಿ ಬಣ್ಣವು ಪ್ರಜ್ವಲಿಸುವ ಅಗ್ನಿ (ಬೆಂಕಿ)ಯನ್ನು ಪ್ರತಿನಿಧಿಸುತ್ತದೆ. ಹಿಂದೂ ಧರ್ಮದಲ್ಲಿ ಅಗ್ನಿಗೆ ಪ್ರಮುಖ ಸ್ಥಾನವಿದೆ. ಅಗ್ನಿಯು ಕತ್ತಲೆಯನ್ನು ದೂರ ಮಾಡಿ ಬೆಳಕನ್ನು ನೀಡುತ್ತದೆ. ಜ್ಞಾನದ ಅಗ್ನಿಯಲ್ಲಿ ಅಜ್ಞಾನವು ಸುಟ್ಟು ಬೂದಿಯಾಗಲಿ ಎಂಬುದರ ಸಂಕೇತವೇ ಕೇಸರಿ. ಯಜ್ಞದಲ್ಲಿ ನಾವು ಎಲ್ಲವನ್ನೂ ಸಮರ್ಪಿಸುವಂತೆ, ಲೌಕಿಕ ಆಸೆ-ಆಕಾಂಕ್ಷೆಗಳನ್ನು ತೊರೆದು ಸಮಾಜಕ್ಕಾಗಿ, ಭಗವಂತನಿಗಾಗಿ ಜೀವನವನ್ನು ಸಮರ್ಪಿಸುವುದೇ ವೈರಾಗ್ಯ, ಸಾಧು-ಸಂತರು ಕೇಸರಿ ವಸ್ತ್ರ ಧರಿಸುವ ಮೂಲಕ ತಾವು ಸಂಸಾರದ ಮೋಹವನ್ನು ತ್ಯಜಿಸಿ ಸಮಾಜ ಕಲ್ಯಾಣಕ್ಕೆ ಬದ್ಧರಾಗಿದ್ದೇವೆ ಎಂಬುದನ್ನು ಸಾರುತ್ತಾರೆ ಎಂದು ತಿಳಿಸಿದ್ದಾರೆ.

ಕೇಸರಿ ಎಂಬುದು ಕೇವಲ ಒಂದು ಬಣ್ಣವಲ್ಲ, ಅದು ಭಾರತದ ಆತ್ಮ. ಅದು ಜ್ಞಾನ, ಶಾಂತಿ, ತ್ಯಾಗ, ಶೌರ್ಯ ಮತ್ತು ಧರ್ಮದ ಸಂಕೇತ. ಸಮಾಜವನ್ನು ಅಂಧಕಾರದಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಈ ಭವ್ಯ ಪರಂಪರೆಯನ್ನು ಇಂದಿಗೂ ಸಾಧು-ಸಂತರು ತಮ್ಮ ನಿಸ್ವಾರ್ಥ ಸೇವೆಯ ಮೂಲಕ ಜೀವಂತವಾಗಿಟ್ಟಿದ್ದಾರೆ. ಆದರೆ ಹಿಂದು ವಿರೋಧಿಗಳು ಯಾವಾಗಲು ಹಿಂದು ಧರ್ಮದ ಬಗ್ಗೆ ಮಾತ್ರ ಗೊಂದಲವುಂಟು ಮಾಡುವ ಹೇಳಿಕೆಗಳನ್ನು ನೀಡುತ್ತಿರುವುದು ಅವರ ಅಧಿಕಾರದ ವ್ಯಾಮೋಹವನ್ನು ತೋರಿಸುತ್ತಿದೆ.ವಿಪರ್ಯಾಸವೆಂದರೆ ಕ್ರೈಸ್ತ ಮತದ ವಿರುದ್ಧ ಹೇಳಿಕೆ ಕೊಡುವ ಒಬ್ಬ ಕ್ರೈಸ್ತ ನಮ್ಮಲ್ಲಿ ಸಿಗುವುದಿಲ್ಲ, ಇಸ್ಲಾಂ ಮತದ ವಿರುದ್ಧ ಮಾತನಾಡುವ ಒಬ್ಬ ಮುಸಲ್ಮಾನ ನಮಗೆ ಸಿಗುವುದಿಲ್ಲ. ಹಿಂದೂಗಳಾಗಿ ಹಿಂದು ಧರ್ಮದ ಬಗ್ಗೆ ಹಗುರವಾಗಿ, ಅಪಹಾಸ್ಯಮಾಡುವ, ಹಿಂದು ದೇವತೆಗಳನ್ನು ನಿಂದಿಸುವ ಅನೇಕರು ಹಿಂದುಗಳೇ ಆಗಿರುವುದು ವಿಪರ್ಯಾಸ ಎಂದು ಬೇಸರ ಹೊರಹಾಕಿದ್ದಾರೆ.

ಕೇವಲ ರಾಜಕಾರಣಕ್ಕೋಸ್ಕರ, ಅಧಿಕಾರಕ್ಕೋಸ್ಕರ ಸ್ವಾಭಿಮಾನವನ್ನು ಬಿಟ್ಟು ಕೇವಲ ಓಲೈಕೆಯ ಹಿಂದೆಯೇ ಹೋದರೆ ನಾಳಿನ ದುಸ್ಥಿತಿಗೆ ತಮ್ಮ ಹೇಳಿಕೆಗಳೇ ಕಾರಣಕರ್ತರುಗಳಾಗಲಿದ್ದಾರೆ.ಅಧಿಕಾರ ಶಾಶ್ವತವಲ್ಲ ಇಂದಿನ ನಿಮ್ಮ ಹೇಳಿಕೆಗಳು ಮುಂದಿನ ನಮ್ಮ ಪೀಳಿಗೆಗೆ ಅಪಾಯಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಶಾಸಕರು ಕ್ಷಮೆಯಾಚಿಸಬೇಕು ಎಂದು ಕುಲಗಾಣ ಶಾಂತಿ ಮೂರ್ತಿ ಅವರು ಒತ್ತಾಯಿಸಿದ್ದಾರೆ.

 

Share this Article
Leave a comment