ಚಾಮರಾಜನಗರ: ಕಾಗಲವಾಡಿ ಗ್ರಾಮದ ಜೀತ ಮುಕ್ತರಿಗೆ ನೀಡಿರುವ ಜಮೀನನ್ನು ಖಾತೆ ಮಾಡಿಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ಚಾಮರಾಜನಗರ ತಹಸೀಲ್ದಾರ್ ಗಿರಿಜಾ ಅವರಿಗೆ ಜಿಲ್ಲಾಧಿಕಾರಿ ಶ್ರೀ ರೂಪಾ ಅವರು ತರಾಟೆಗೆ ತೆಗೆದುಕೊಂಡರು.
ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ವಿವಿಧ ದೂರುಗಳನ್ನು ಇತ್ಯರ್ಥಪಡಿಸುವ ಸಂಬಂಧ ಮಂಗಳವಾರ ಆಯೋಜಿಸಿದ್ದ ಸಭೆಯಲ್ಲಿ ಕಾಗಲವಾಡಿ ಗ್ರಾಮದ ರೈತ ಮುಖಂಡ ರುದ್ರೇಶ್ ಗುಂಡಣ್ಣ ಮಾತನಾಡಿ, ಕಾಗಲವಾಡಿ ಗ್ರಾಮದ 25 ಜೀತಮುಕ್ತರಿಗೆ ಹರದನಹಳ್ಳಿ ಫಾರೆಸ್ಟ್ ವಾಪ್ತಿಯ ಸರ್ವೇ ನಂ. 1 ಮತ್ತು 3 ರಲ್ಲಿ ಸಾಗುವಳಿ ಚೀಟಿ ನೀಡಲಾಗಿದೆ. ನಾವು ಅಂದಿನಿಂದಲೂ ಅನುಭೋಗದಲ್ಲಿ ಇದ್ದೇವೆ. ಆದರೆ ಇತ್ತೀಚೆಗೆ ಅಯ್ಯನಪುರ ಗ್ರಾಮದ ಕೆಲವರು ಜಮೀನನ್ನು ಒತ್ತುವರಿ ಮಾಡಿಕೊಂಡಿರುವುದಲ್ಲದೇ, ನಮ್ಮ ಮೇಲೆ ಗಲಾಟೆಗೂ ಬಂದಿದ್ದರು ಎಂದರು.

ಇದಕ್ಕೇ ಸಂಬಂಧಿಸಿದಂತೆ ತಹಸೀಲ್ದಾರ್ ಗಿರಿಜಾ ಅವರು ಪ್ರತಿಕ್ರಿಯಿಸಿ, ಈಗಾಗಲೇ ಒತ್ತುವರಿ ಮಾಡಿಕೊಂಡಿದ್ದವರು ನ್ಯಾಯಾಲಯಕ್ಕೆ ಹೋಗಿದ್ದು, 2 ಕೇಸ್ ಇತ್ಯರ್ಥವಾಗಿದೆ. ಒಂದು ಕೇಸ್ ಹೈಕೋರ್ಟ್ ನಲ್ಲಿ ಬಾಕಿ ಇದೆ. ಹರದನಹಳ್ಳಿ ಫಾರೆಸ್ಟ್ ಸರ್ವೇ ನಂಬರ್ 3 ರಲ್ಲಿ 20 ಎಕರೆಯನ್ನು ಒತ್ತುವರಿ ಮಾಡಿಕೊಂಡಿದ್ದರು. ಈಗಾಗಲೇ ಟ್ರಂಚ್ ಹೊಡೆಸಿ ಗಡಿಯನ್ನು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ವೇಳೆ ಜಿಲ್ಲಾಧಿಕಾರಿ ಶ್ರೀ ರೂಪಾ ಅವರು ಮಾತನಾಡಿ, ಎಚ್.ಡಿ.ಫಾರೆಸ್ ಸರ್ವೇ ನಂ. 3 ರಲ್ಲಿ ಜೀತಮುಕ್ತರಿಗೆ ನೀಡಿರುವ ಜಮೀನನ್ನು ಇಷ್ಟಾದರೂ ಯಾಕೇ ಖಾತೆ ಮಾಡಿಕೊಟ್ಟಿಲ್ಲ ಎಂದು ತಹಸೀಲ್ದಾರ್ ಗಿರಿಜಾ ಅವರನ್ನು ತರಾಟೆಗೆ ತೆಗೆದುಕೊಂಡರು. ಯಾವುದೇ ಕೆಲಸ ಹೇಳಿದರೂ 15 ದಿನ ಅನ್ನುತ್ತೀರಿ ಎಂದು ಗರಂ ಆದರು. ಈ ವಾರದಲ್ಲೇ ಉಪವಿಭಾಗಾಧಿಕಾರಿ ಅವರು ಸೂಚನೆಯನ್ನು ಕೊಡುತ್ತಾರೆ. ಮುಂದಿನ ವಾರದಲ್ಲಿ ಜೀತಮುಕ್ತರಿಗೆ ಖಾತೆ ಮಾಡಿಕೊಡಬೇಕು ಎಂದು ತಾಕೀತು ಮಾಡಿದರು.