ಮಣಿಕಂಠ ಆಲೂರು ಚಾಮರಾಜನಗರ
ಚಾಮರಾಜನಗರ: 2026-27 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಶಿಕ್ಷಣ ಇಲಾಖೆ ಹಲವಾರು ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಶಾಲೆ ಆರಂಭಕ್ಕೂ ಮುನ್ನವೇ ಪಠ್ಯ ಪುಸ್ತಕಗಳು ಮಕ್ಕಳ ಕೈ ಸೇರಲಿದೆ.
ಪ್ರತಿ ವರ್ಷ ಜೂನ್ ತಿಂಗಳಲ್ಲಿ ಶಾಲೆ ಆರಂಭವಾಗುವ ಹೊತ್ತಿಗೆ ಸಂಪೂರ್ಣವಾಗಿ ಪಠ್ಯಪುಸ್ತಕ ವಿತರಣೆ ಆಗುತ್ತಿರಲಿಲ್ಲ. ಇದರಿಂದ ಮಕ್ಕಳಿಗೆ ತೊಂದರೆಯಾಗುತ್ತಿತ್ತು. ಶಿಕ್ಷಕರು ಕೂಡ ಪಠ್ಯ ಪುಸ್ತಕಗಳಿಗಾಗಿ ಕಚೇರಿಗಳಿಗೆ ಅಲೆಯಬೇಕಿತ್ತು. ಈ ಬಾರಿ ಶಿಕ್ಷಣ ಇಲಾಖೆ ಪಠ್ಯಪುಸ್ತಕಗಳನ್ನು ಪೂರೈಸುತ್ತಿದ್ದು, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಶಾಲೆಗಳಿಗೆ ಅಗತ್ಯ ಪುಸ್ತಕಗಳನ್ನು ತಲುಪಿಸಲು ಮುಂದಾಗಿದೆ.
ಜಿಲ್ಲೆಗೆ ಈಗಾಗಲೇ ಶೇ.75 ರಷ್ಟು ಪಠ್ಯಪುಸ್ತಕಗಳು ಬಂದಿದ್ದು, ಎಲ್ಲ 5 ಶೈಕ್ಷಣಿಕ ವಲಯಗಳಲ್ಲಿ ವಿತರಣೆ ಮಾಡಲಾಗುತ್ತಿದೆ. ಮೇ 29 ರೊಳಗೆ ಮಕ್ಕಳಿಗೆ ಪಠ್ಯಪುಸ್ತಕಗಳನ್ನು ತಲುಪಿಸಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚಂದ್ರಪಾಟೀಲ್ ಅವರು “ಜನತಾ ರಾಯಭಾರಿ”ಗೆ ಮಾಹಿತಿ ನೀಡಿದರು.

ಪುಸ್ತಕಗಳನ್ನು ಕೊಂಡೊಯ್ಯುತ್ತಿರುವ ಶಿಕ್ಷಕರು:
ಚಾಮರಾಜನಗರ, ಕೊಳ್ಳೇಗಾಲ, ಗುಂಡ್ಲುಪೇಟೆ, ಯಳಂದೂರು ಹಾಗೂ ಹನೂರು ತಾಲೂಕಿನ ವ್ಯಾಪ್ತಿಯಲ್ಲಿರುವ ಶಾಲೆಗಳಿಗೆ ಈಗಾಗಲೇ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಪಠ್ಯ ಪುಸ್ತಕಗಳನ್ನು ವಿತರಣೆ ಮಾಡಲಾಗುತ್ತಿದೆ. ಕಳೆದ ಎರಡು-ಮೂರು ದಿನಗಳಿಂದಲೇ ಖಾಸಗಿ ಶಾಲೆಗಳು ಹಾಗೂ ಸರ್ಕಾರಿ ಶಾಲೆಗಳ ಶಿಕ್ಷಕರು ಬಿಇಓ ಕಚೇರಿಗಳಿಗೆ ತೆರಳಿ ಪುಸ್ತಕಗಳನ್ನು ಶಾಲೆಗಳಿಗೆ ಕೊಂಡೊಯ್ಯುತ್ತಿದ್ದಾರೆ. ಈಗಾಗಲೇ ಹೆಚ್ಚಿನ ಶಾಲೆಗಳಲ್ಲಿ ದಾಖಲಾತಿ ಆಂದೋಲನ ಪ್ರಾರಂಭವಾಗಿದ್ದು, ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವಂತೆ ಹಲವಾರು ಶಿಕ್ಷಕರು ಜಾಗೃತಿಯನ್ನು ಮೂಡಿಸುತ್ತಿದ್ದಾರೆ.
ಮೇ 29 ರೊಳಗೆ ಪೂರ್ಣ:
ಜಿಲ್ಲೆಗೆ ಈಗಾಗಲೇ ಶೇ.75 ಕ್ಕಿಂತಲೂ ಹೆಚ್ಚು ಪುಸ್ತಕಗಳು ಬಂದಿದ್ದು, ಶಾಲೆಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಮೇ 29 ರೊಳಗೆ ಸಂಪೂರ್ಣವಾಗಿ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ಪುಸ್ತಕಗಳನ್ನು ಪೂರೈಕೆ ಮಾಡಲಾಗುತ್ತಿದೆ. ಪಠ್ಯ ಪುಸ್ತಕದ ಜೊತೆಗೆ ಸಮವಸ್ತ್ರ ಮತ್ತು ಶೂ ವಿತರಣೆ ಮಾಡಿದರೇ ಮಕ್ಕಳಿಗೆ ಮತ್ತಷ್ಟು ಅನುಕೂಲವಾಗಲಿದೆ.

ಈಗಾಗಲೇ ಪಠ್ಯ ಪುಸ್ತಕಗಳು ಬಂದಿದ್ದು, ಆಯಾ ತಾಲೂಕಿನ ತಹಸೀಲ್ದಾರ್ ಗಳಿಗೆ ಜವಾಬ್ದಾರಿಯನ್ನು ವಹಿಸಲಾಗಿದೆ. ಮೇ 29 ರೊಳಗೆ ಸಂಪೂರ್ಣವಾಗಿ ಪಠ್ಯ ಪುಸ್ತಕ ವಿತರಣೆಯನ್ನು ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ.
|ಚಂದ್ರಪಾಟೀಲ್, ಉಪನಿರ್ದೇಶಕ, ಶಾಲಾ ಮತ್ತು ಶಿಕ್ಷಣ ಇಲಾಖೆ, ಚಾಮರಾಜನಗರ
ಸರ್ಕಾರ ಸಕಾಲದಲ್ಲಿ ಮಕ್ಕಳಿಗೆ ಪಠ್ಯ ಪುಸ್ತಕಗಳನ್ನು ವಿತರಣೆ ಮಾಡುತ್ತಿರುವುದು ಸಹಕಾರಿಯಾಗಿದೆ. ಅದೇ ರೀತಿ ಸಕಾಲಕ್ಕೆ ಸಮವಸ್ತ್ರ ಮತ್ತು ಶೂ ವಿತರಣೆ ಮಾಡಬೇಕು. ಖಾಸಗಿ ಶಾಲೆಗಳು ಯಾವುದೇ ಕಾರಣಕ್ಕೂ ಶುಲ್ಕ ಹೆಚ್ಚಳ ಮಾಡಬಾರದು.
|ಕ್ವಾಲಿಟಿ ನವೀನ್, ತಾಲೂಕು ಅಧ್ಯಕ್ಷ, ಕರವೇ (ಪ್ರವೀಣ್ ಶೆಟ್ಟಿ ಬಣ), ಚಾಮರಾಜನಗರ