ಸಂಸದ ಸುನೀಲ್ ಬೋಸ್ ಮನವಿಗೆ ಕೇಂದ್ರ ಹಸಿರು ನಿಶಾನೆ

ಮಣಿಕಂಠ ಜನತಾ ರಾಯಭಾರಿ
1 Min Read

ಚಾಮರಾಜನಗರ: ಜಿಲ್ಲೆಯ ಅತ್ಯಂತ ಹಿಂದುಳಿದ ಕಾಡಂಚಿನ ಗ್ರಾಮಗಳು ಮತ್ತು ಬುಡಕಟ್ಟು (ಗಿರಿಜನ) ಪ್ರದೇಶಗಳಿಗೆ ಮೂಲ ಸೌಕರ್ಯಗಳಾದ ವಿದ್ಯುತ್ ಹಾಗೂ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸುವ ಪ್ರಸ್ತಾವನೆಗಳಿಗೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ ಹಸಿರು ನಿಶಾನೆ ಸಿಕ್ಕಿದೆ.

ಈ ಕುರಿತು ಚಾಮರಾಜನಗರ ಲೋಕಸಭಾ ಕ್ಷೇತ್ರದ ಸದಸ್ಯರಾದ ಸುನಿಲ್ ಬೋಸ್ ಅವರು ಸಲ್ಲಿಸಿದ್ದ ಪ್ರಸ್ತಾವನೆಗೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವರಾದ ಭೂಪೇಂದ್ರ ಯಾದವ್ ಅವರು ಪತ್ರದ ಮೂಲಕ ಅಧಿಕೃತವಾಗಿ ಸಕಾರಾತ್ಮಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ವಿದ್ಯುತ್ ಸೌಲಭ್ಯಕ್ಕೆ ಒಪ್ಪಿಗೆ : ಜಿಲ್ಲೆಯ ಕಾಡಂಚಿನ ಗ್ರಾಮಗಳು ಮತ್ತು ಗಿರಿಜನ ಪ್ರದೇಶಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಪ್ರಸ್ತಾವನೆಗೆ ಕಳೆದ ಮಾರ್ಚ್ 21 ರಂದು ನಡೆದ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯ (ಎಸ್.ಸಿ.ಎನ್.ಬಿ.ಡಬ್ಲ್ಯೂ.ಎಲ್) 90ನೇ ಸಭೆಯಲ್ಲಿ ಅನುಮೋದನೆ (ಶಿಫಾರಸು) ನೀಡಲಾಗಿದೆ. ಇದರಿಂದಾಗಿ ದಶಕಗಳಿಂದ ಕತ್ತಲಲ್ಲಿದ್ದ ಬುಡಕಟ್ಟು ಕುಟುಂಬಗಳ ಮನೆಗಳಿಗೆ ಶೀಘ್ರದಲ್ಲೇ ಬೆಳಕು ಬರಲಿದೆ.

ನಳದ ನೀರು: ಕುಡಿಯುವ ನೀರಿನ ಸೌಲಭ್ಯದ ಪ್ರಸ್ತಾವನೆಗಳ ಪೈಕಿ, ನಳದ ಮೂಲಕ ಕುಡಿಯುವ ನೀರು ಪೂರೈಸುವ ಯೋಜನೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿಯ 88ನೇ ಸಭೆಯಲ್ಲೇ ಅನುಮೋದನೆ ದೊರೆತಿದೆ.

ಕ್ಷೇತ್ರದ ಬಾಕಿ ಉಳಿದಿರುವ ಇತರ ಗ್ರಾಮಗಳ ಕುಡಿಯುವ ನೀರಿನ ಯೋಜನೆಗಳ ಪ್ರಸ್ತಾವನೆಗಳನ್ನು ರಾಷ್ಟ್ರೀಯ ವನ್ಯಜೀವಿ ಮಂಡಳಿಯ (ಎಸ್.ಸಿ.ಎನ್.ಬಿ.ಡಬ್ಲ್ಯೂ.ಎಲ್) ಮುಂಬರಲಿರುವ ಮುಂದಿನ ಸಭೆಯಲ್ಲೇ ಪರಿಶೀಲನೆಗೆ ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ.

ಕಾಡಂಚಿನ ಪ್ರದೇಶಗಳಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು ವನ್ಯಜೀವಿ ಕಾಯ್ದೆಯಡಿ ಕಠಿಣ ನಿಯಮಗಳಿರುವುದರಿಂದ ಈ ಯೋಜನೆಗಳು ವಿಳಂಬವಾಗಿದ್ದವು. ಈಗ ಸಂಸದರಾದ ಸುನಿಲ್ ಬೋಸ್ ಅವರ ನಿರಂತರ ಕ್ರಮದ ಫಲವಾಗಿ ಕೇಂದ್ರ ಸಚಿವಾಲಯದಿಂದ ಶೀಘ್ರ ಅನುಮೋದನೆ ದೊರೆತಿದ್ದು, ಜಿಲ್ಲೆಯ ಜನರ ಪರವಾಗಿ ಕೇಂದ್ರ ಸಚಿವರಿಗೆ ಸಂಸದರು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

Share this Article
Leave a comment