ಚಾಮರಾಜನಗರ: ಗಲಭೆಕೋರರ ಮೇಲಿನ ಮೊಕದ್ದಮೆ ವಾಪಸ್ ಪಡೆದ ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ಸಮಾಜಕ್ಕೆ ಮಾರಕ ಎಂದು ಚುಡಾ ಮಾಜಿ ಅಧ್ಯಕ್ಷ ಪಿ.ಬಿ.ಶಾಂತಮೂರ್ತಿ ಕುಲಗಾಣ ಖಂಡಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಆಳಂದ್ನ ಲಾಡ್ಲೆ ಮಶಾಕ್ ದರ್ಗಾದಲ್ಲಿ ಮಾ.1,2022 ರ ಮಹಾಶಿವರಾತ್ರಿಯಂದು ರಾಘವ ಚೈತನ್ಯ ಶಿವಲಿಂಗದ ಶುದ್ಧಿಕರಣಕ್ಕೆ ಅವಕಾಶ ನೀಡದೆ ಕೆಲವು ಮುಸಲ್ಮಾನ ಕಿಡಿಗೇಡಿಗಳು ನಡೆಸಿದ ಕೋಮು ಗಲಭೆಗೆ ಸಂಬಂಧಿಸಿದ 7 ಪ್ರಮುಖ ಪ್ರಕರಣಗಳು ಸೇರಿದಂತೆ ಒಟ್ಟು 52 ಮೊಕದ್ದಮೆಗಳನ್ನು ಸಚಿವ ಸಂಪುಟ ಸಭೆಯಲ್ಲಿ ವಾಪಸ್ ಪಡೆಯಲು ತೀರ್ಮಾನಿಸಿದ್ದಾರೇ. ಇದು ರಾಜ್ಯದಲ್ಲಿ ಕಾನೂನಿನ ಆಡಳಿತಯಂತ್ರ ಮುರಿದುಬಿದ್ದು ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿರುವುದನ್ನು ತೋರಿಸುತ್ತದೆ ಎಂದು ದೂರಿದ್ದಾರೆ.
ಜನಪರ ವಿಚಾರಗಳಿಗೆ ಹೋರಾಟ ಮಾಡಿದ ರೈತರು, ಕನ್ನಡ ಪರ ಹೋರಾಟಗಾರರ ಹೆಸರಿನಲ್ಲಿ ಇವರ ಜೊತೆಯಲ್ಲಿ ಸಮಾಜ ಘಾತುಕರನ್ನು, ಸಮಾಜದಲ್ಲಿ ಶಾಂತಿ ಕದಡಿ ಹಿಂದು ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡುವ ಭಯೋತ್ಪಾದಕರನ್ನು, ಗಲಭೆಕೋರರನ್ನು ಪಾರು ಮಾಡುವ ಕುತಂತ್ರವನ್ನು ಮಾಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಪರೋಕ್ಷವಾಗಿ ಗಲಭೆಕೋರರನ್ನು ರಕ್ಷಿಸುವ ಮೂಲಕ ಮುಂದೆ ರಾಜಾರೋಷವಾಗಿ ತಪ್ಪು ಮಾಡಲು ಪ್ರರೇಪಿಸಿದಂತಾಗಿದೆ ಎಂದು ಆರೋಪಿಸಿದ್ದಾರೆ.

ಜಾತ್ಯತೀತ ಹೆಸರಿನಲ್ಲಿ ಆಡಳಿತ ಮಾಡುತ್ತಿರುವ ಕಾಂಗ್ರೇಸ್ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಿಗಳಿಂದ ಅವರ ಅಧಿಕಾರವನ್ನು ಬಲವಂತವಾಗಿ ದುರುಪಯೋಗ ಪಡಿಸಿಕೊಂಡು ಹಿಂದುಗಳಿಗೆ, ಹಿಂದುಪರ ಹೋರಾಟಗಾರರಿಗೆ ಅನಗತ್ಯವಾಗಿ ಕಿರುಕುಳ ನೀಡುತ್ತಿದೆ. ಗಡಿಪಾರು ಮಾಡುವುದು ರೌಡಿ ಶೀಟರ್ ಗಳನ್ನಾಗಿ ಮಾಡುವಂತೆ ಒತ್ತಡ ಹೇರುವುದು ಪರಸ್ಪರ ಹಿಂದು ಧರ್ಮವನ್ನು ಜಾತಿ ಆಧಾರದಲ್ಲಿ ವಿಂಗಡಿಸಿ ಬ್ರಿಟೀಷರ ಆಡಳಿತದಂತೆ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದೆ ಎಂದಿದ್ದಾರೆ.
ಈ ವಿಚಾರದಲ್ಲಿ ಕಾಂಗ್ರೇಸ್ ಪಕ್ಷದ ಜನಪ್ರತಿನಿಧಿಗಳು ಮತ್ತು ಮುಖಂಡರುಗಳು ಕೂಡ ಸಮಾಜದ ಹಿತ ದೃಷ್ಟಿಯಿಂದ ಸ್ವಾರ್ಥ ರಹಿತವಾಗಿ ಸರ್ಕಾರದ ಗಮನಕ್ಕೆ ತರಬೇಕಾಗಿದೆ. ಇನ್ನಾದರೂ ಕಾಂಗ್ರೆಸ್ ಸರ್ಕಾರ ವೋಟ್ ಬ್ಯಾಂಕ್ ರಾಜಕಾರಣಕ್ಕೋಸ್ಕರ ಹಿಂದುಗಳನ್ನು ಒಡೆದು ಆಳುವ ರೀತಿಯನ್ನು ಬಿಡಬೇಕು ಎಂದು ಆಗ್ರಹಿಸಿದ್ದಾರೆ.