ದೆಹಲಿ: ನಾನು ವಿ.ಸೋಮಣ್ಣ ಅವರನ್ನು ಸೋಲಿಸಿ ಶಾಸಕನಾದವನು, ರಾಜ್ಯದಲ್ಲಿ ಏಕೈಕ ಉಪ್ಪಾರ ಶಾಸಕನಾಗಿರುವ ಕಾರಣಕ್ಕೆ ಸಚಿವ ಸ್ಥಾನ ಸಿಗುತ್ತದೆ ಎಂಬು ನಿರೀಕ್ಷೆ ಇದೆ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದ್ದಾರೆ.
ದೆಹಲಿಯಲ್ಲಿ ಸುದ್ದಿವಾಹಿನಿಯೊಂದಿಗೆ ಮಾತನಾಡಿ, ಕಳೆದ ಬಾರಿ ನನಗೆ ಸಚಿವ ಸ್ಥಾನ ಕೈ ತಪ್ಪಿದ್ದು, ಈ ಬಾರಿ ಸಚಿವ ಸ್ಥಾನ ದೊರೆಯುತ್ತದೆ ಎಂಬ ನಿರೀಕ್ಷೆ ಇದೆ. ನಾಲ್ಕು ಬಾರಿ ನಿರಂತರವಾಗಿ ಗೆಲುವು ಸಾಧಿಸಿದ್ದೇನೆ. ಅದಲ್ಲದೇ ವಿ.ಸೋಮಣ್ಣ ಅಂತಹ ಘಟಾನುಘಟಿ ನಾಯಕರನ್ನು ಸೋಲಿಸಿ ಗೆಲುವು ಸಾಧಿಸಿದ್ದೇನೆ. ಈ ನಿಟ್ಟಿನಲ್ಲಿ ಸಚಿವ ಸ್ಥಾನ ನೀಡಬೇಕು ಎಂದರು.

ನಾಯಕತ್ವ ಬದಲಾವಣೆಯ ಕುರಿತು ಮಾತನಾಡಿದ ಅವರು, ನನಗೇ ನಾಯಕತ್ವ ಬದಲಾವಣೆಯ ಸಂಬಂಧ ಯಾವುದೇ ವಿಚಾರ ಗೊತ್ತಿಲ್ಲ. ಆದರೆ ಸಚಿವ ಸಂಪುಟ ವಿಸ್ತರಣೆಯಾಗುತ್ತದೆ ಎಂಬ ಭಾವನೆ ಇದೆ. ಈಗಾಗಲೇ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕಿದರೇ ಪಕ್ಷದ ಪ್ರಮುಖ ನಾಯಕರನ್ನು ಭೇಟಿ ಮಾಡುತ್ತೇನೆ ಎಂದರು.
ನಾನು ರಾಜ್ಯದಲ್ಲಿ ಉಪ್ಪಾರ ಸಮುದಾಯದ ಏಕೈಕ ಶಾಸಕನಾಗಿದ್ದು, 1974-75 ರಿಂದಲೂ ಕಾಂಗ್ರೆಸ್ ಪಕ್ಷದಲ್ಲಿ ದುಡಿದಿದ್ದೇನೆ. ಈ ಬಾರಿ ಜಿಲ್ಲೆಗೆ ಅವಕಾಶ ಕೈ ತಪ್ಪಿದ್ದು, ಜಿಲ್ಲೆಯಲ್ಲಿ ನಾನೇ ಹಿರಿಯ ಶಾಸಕನಾಗಿದ್ದೇನೆ. ಈ ನಿಟ್ಟಿನಲ್ಲಿ ಸಚಿವ ಸ್ಥಾನ ದೊರೆಯುವ ವಿಶ್ವಾಸವಿದೆ ಎಂದರು.