ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಪ್ರತಿಷ್ಠಿತ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ೨೨ನೇ ನಿರ್ದೇಶಕರಾಗಿ ಹಿರಿಯ ಜಾನಪದ ಪ್ರಾಧ್ಯಾಪಕ ಪ್ರೊ.ನಂಜಯ್ಯ ಹೊಂಗನೂರು ಮಂಗಳವಾರ ಸಂಜೆ ಅಧಿಕಾರ ಸ್ವೀಕರಿಸಿದರು.
ಪ್ರೊ.ಎನ್.ಕೆ. ಲೋಲಾಕ್ಷಿ ಅವರು ಪ್ರೊ.ನಂಜಯ್ಯ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಸಂಸ್ಥೆಯ ಅಧೀಕ್ಷಕಿ ಹೇಮಲತಾ ಅವರು ಅಧಿಕಾರ ಸ್ವೀಕಾರದ ಪ್ರಕ್ರಿಯೆಗಳನ್ನು ನಡೆಸಿಕೊಟ್ಟರು. ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು, ಸಂಶೋಧಕರು, ವಿದ್ಯಾರ್ಥಿಗಳು ನೂತನ ನಿರ್ದೇಶಕರಿಗೆ ಅಭಿನಂದನೆ ಸಲ್ಲಿಸಿದರು.
ಚಾಮರಾಜನಗರ ಜಿಲ್ಲೆಯ ಚಾಮರಾಜನಗರ ತಾಲ್ಲೂಕಿನ ಹೊಂಗನೂರು ಕುಗ್ರಾಮದಲ್ಲಿ ಜನಿಸಿದ ಪ್ರೊ.ಎಂ.ನಂಜಯ್ಯ ಹೊಂಗನೂರು ಅವರು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವಿದ್ಯಾರ್ಥಿಯಾಗಿ ಪ್ರಾಧ್ಯಾಪಕರಾಗಿ, ಪ್ರಸಾರಾಂಗದ ನಿರ್ದೇಶಕರಾಗಿ ಅದಕ್ಕೆ ಘನತೆ ತುಂಬುವ ಎತ್ತರಕ್ಕೆ ಬೆಳೆದಿದ್ದಾರೆ.

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಜಾನಪದ ವಿಭಾಗ ಮುಚ್ಚಿಹೋಗುವ ಹಂತದಲ್ಲಿದ್ದಾಗ ಮರುಜೀವ ಕೊಟ್ಟು ಅನೇಕ ವಿದ್ಯಾರ್ಥಿಗಳ ಏಳಿಗೆಗೆ ಕಾರಣಕರ್ತರಾಗಿದ್ದಾರೆ.. ಜಾನಪದ ವಿಭಾಗದಲ್ಲಿ ಸುಮಾರು ೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಡಾಕ್ಟರೇಟ್ ಪದವಿ ಪಡೆದರೆ, ಇವರ ಮಾರ್ಗದರ್ಶನದಲ್ಲಿಯೇ ೨೨ ವಿದ್ಯಾರ್ಥಿಗಳು ಪಿಎಚ್.ಡಿ ಪದವಿ ಪಡೆದಿದ್ದಾರೆ.
ಅಧಿಕಾರ ಹಸ್ತಾಂತರಿಸಿ ಪ್ರೊ.ಎನ್.ಕೆ. ಲೋಲಾಕ್ಷಿ ಮಾತನಾಡಿ, ಕನ್ನಡ ಸಂಸ್ಥೆಯ ವಿದ್ಯಾರ್ಥಿಗಳಾದ ನಾನು ನಂಜಯ್ಯ ಅವರಿಗೆ ಸಂಸ್ಥೆಯೊಂದಿಗೆ ತಾದ್ಯಾತ್ಮವಾದ ಸಂಬಂಧವಿದೆ. ಇಲ್ಲಿಯ ಋಣ ತೀರಿಸಲು ಶ್ರಮಿಸಿದ್ದೇವೆ. ಕುವೆಂಪು ಮೊದಲ ವಿದ್ಯಾರ್ಥಿ ದೇಜಗೌ, ಹಾಮಾ ನಾಯಕ, ಜಿಶಂ ಪರಮಶಿವಯ್ಯ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಕರ್ನಾಟಕ ಕಟ್ಟಿದ ಸಂಸ್ಥೆಯಲ್ಲಿ ಕೆಲಸ ಮಾಡುವಾಗ ಭಯ ಇರುತ್ತದೆ ಎಂದು ಹೇಳಿದರು.
ಪ್ರಸಾರಾಂಗದ ನಿರ್ದೇಶಕರಾಗಿ ನಂಜಯ್ಯ ಅವರು ಅಧಿಕಾರದಲ್ಲಿ ದಕ್ಷತೆ, ಪ್ರಾಮಾಣಿಕತೆಯನ್ನು ಸಾಬೀತು ಮಾಡಿದ್ದಾರೆ. ಸದೃಢವಾಗಿ ಸಂಸ್ಥೆ ಕಟ್ಟಬಲ್ಲ ಶಕ್ತವಾದ ನಿರ್ದೇಶಕರು ಸಿಕ್ಕಿದ್ದಾರೆ ಎಂದು ಶುಭ ಹಾರೈಸಿದರು. ಪ್ರೊ.ಶಶಿಕಲಾ ಇದ್ದರು.
ಸಂಸ್ಥೆಯ ವೆಬ್‌ಸೈಟ್, ಲೋಗೋ ನಿರ್ಮಾಣ: ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವೆಬ್‌ಸೈಟ್ ಮತ್ತು ಲೋಗೋವನ್ನು ಶೀಘ್ರದಲ್ಲಿಯೇ ರಚಿಸಲಾಗುವುದು ಎಂದು ನೂತನ ನಿರ್ದೇಶಕ ಪ್ರೊ.ನಂಜಯ್ಯ ಹೊಂಗನೂರು ಹೇಳಿದರು.
ಭೌತಶಾಸ್ತ್ರ ಅಧ್ಯಯನ ವಿಭಾಗ, ಮಹಾರಾಜ ಕಾಲೇಜು, ಪ್ರಸಾರಾಂಗಕ್ಕೆ ಲೋಗೊ ಇರುವಂತೆಯೇ ಕನ್ನಡ ಸಂಸ್ಥೆಗೂ ಲೋಗೋ ರೂಪಿಸಬೇಕು. ಜಾಗತಿಕ ಮಟ್ಟದಲ್ಲಿ ಕನ್ನಡ ಅಧ್ಯಯನ ಸಂಸ್ಥೆಯ ಶ್ರೇಷ್ಠವಾದ ಕೆಲಸಗಳು ತಿಳಿಸಲು ವೆಬ್‌ಸೈಟ್ ಅಗತ್ಯವಾಗಿ ರೂಪಿಸಬೇಕಾಗಿದೆ ಎಂದರು.

ಸಂಸ್ಥೆ ಕಟ್ಟಲು ಅನೇಕ ಆಲೋಚನೆಗಳಿವೆ. ಶತಮಾನದ ಕಾರ್ಯಕ್ರಮ ರೂಪಿಸಬೇಕು. ಸಂಸ್ಥೆಗೆ ಡಿಸೆಂಬರ್ ೬ಕ್ಕೆ ೬೦ ವರ್ಷದ ಆಚರಣೆ ಮಾಡಬೇಕು. ಸಂಸ್ಥೆಯ ಆರಂಭದಿAದ ಇಲ್ಲಿಯವರೆಗೂ ನಡೆದಿರುವ ಎಲ್ಲ ಕಾರ್ಯಗಳನ್ನು ಸ್ಮರಿಸುವ ಪುಸ್ತಕ ತರಬೇಕು. ಹಸ್ತಪ್ರತಿ, ವಿಶ್ವಕೋಶ, ಅನುವಾದ, ದಾಸ ಸಾಹಿತ್ಯದಲ್ಲಿ ಕೆಲಸಗಳಾಗಬೇಕಿದೆ ಎಂದರು.
೧೮೩ರಲ್ಲಿ ಜಾನಪದ ವಿದ್ಯಾರ್ಥಿಯಾಗಿ ಪ್ರವೇಶ ಪಡದೆ. ಅಲ್ಲಿಂದಲೂ ಸಂಸ್ಥೆಯ ಸುತ್ತಾಡುತ್ತಲೇ ಇದ್ದೇನೆ. ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಿದ್ದೇನೆ. ಸಂಸ್ಥೆಯ ಕಟ್ಟಲು ಹಿಂದಿನ ಎಲ್ಲ ನಿರ್ದೇಶಕರು ಕೆಲಸ ಮಾಡಿದ್ದಾರೆ. ಪ್ರೊ.ಲೋಲಾಕ್ಷಿ ಅವರು ಗುರುತರವಾದ ಕೆಲಸ ಮಾಡಿದ್ದಾರೆ. ಅಧಿಕಾರ ಅಹಂಕಾರ ಅಲ್ಲ. ಜವಾಬ್ದಾರಿ. ಎಲ್ಲರೂ ಒಳಗೊಂಡು ಕನ್ನಡ ಸಂಸ್ಥೆಯನ್ನು ಕಟ್ಟಲು ಅಧ್ಯಾಪಕರು, ಸಂಶೋಧಕರು, ವಿದ್ಯಾರ್ಥಿಗಳು ಮುಕ್ತ ಸಹಕಾರ ನೀಡಬೇಕು ಎಂದು ಕೋರಿದರು.