ಬೆಂಗಳೂರು: ಬಹುನಿರೀಕ್ಷಿತ ಜಾತಿವಾರು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಅಧಿಕೃತವಾಗಿ ಸ್ವೀಕರಿಸಿದ್ದು, ಮುಸ್ಲಿಮರು ಅತಿ ದೊಡ್ಡ ಸಮುದಾಯವಾಗಿ ಹೊರಹೊಮ್ಮಿದ್ದಾರೆ.
ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿದ ವರದಿ ಪ್ರಕಾರ ಮುಸ್ಲಿಮರು 75.25 ಲಕ್ಷ, ಪರಿಶಿಷ್ಟ ಜಾತಿ (SC) ಅಂದಾಜು 1.08 ಕೋಟಿ, ಪರಿಶಿಷ್ಟ ಪಂಗಡ (ST) ಅಂದಾಜು 42 ಲಕ್ಷ , ಒಕ್ಕಲಿಗರು ಅಂದಾಜು 70 ಲಕ್ಷ , ಲಿಂಗಾಯತರು ಅಂದಾಜು 65 ಲಕ್ಷ ಇದ್ದಾರೆ. ಪರಿಶಿಷ್ಟ ಜಾತಿ/ಪಂಗಡಗಳು ಒಟ್ಟು ಗುಂಪುಗಳಾಗಿ ಮೊದಲ ಸ್ಥಾನದಲ್ಲಿದ್ದರೆ, ಏಕ ಜಾತಿಯಾಗಿ ಮುಸ್ಲಿಮರು ರಾಜ್ಯದಲ್ಲಿ ಅತಿ ದೊಡ್ಡ ಸಮುದಾಯವಾಗಿ ಹೊರಹೊಮ್ಮಿದ್ದಾರೆ.

ಮೊದಲ ಬಾರಿ ಸಿಎಂ ಆಗಿದ್ದಾಗ ಕಾಂತರಾಜು ಆಯೋಗದಿಂದ ಜಾತಿಗಣತಿ ನಡೆಸಲಾಗಿತ್ತು. 10 ವರ್ಷಗಳ ಬಳಿಕ ಈಗ ವರದಿ ಬಹಿರಂಗಗೊಂಡು ಸರ್ಕಾರದಿಂದ ಅಧಿಕೃತವಾಗಿ ಸ್ವೀಕೃತವಾಗಿದೆ. ವರದಿಯನ್ನು ಸಚಿವ ಸಂಪುಟದಲ್ಲಿ ಮಂಡಿಸಿ ಚರ್ಚಿಸಿದ ಬಳಿಕ ಅನುಷ್ಠಾನಕ್ಕೆ ತರಲಾಗುತ್ತದೆ. ಸಾಮಾಜಿಕ ನ್ಯಾಯ ಒದಗಿಸಲು ವೈಜ್ಞಾನಿಕ ದತ್ತಾಂಶ ಅಗತ್ಯ. ಜಾತಿಗಣತಿ ವರದಿ ಆಧಾರದಲ್ಲಿ ಪ್ರಾತಿನಿಧ್ಯಕ್ಕೆ ತಕ್ಕಂತೆ ಪಾಲು ನೀಡಲಾಗುವುದು. ಯಾರಿಗೂ ಅನ್ಯಾಯ ಆಗಲು ಬಿಡುವುದಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ವರದಿ ಆಧಾರದಲ್ಲಿ ಶಿಕ್ಷಣ, ಉದ್ಯೋಗ, ರಾಜಕೀಯ ಮೀಸಲಾತಿ ಬದಲಾಗುವ ಸಾಧ್ಯತೆ. OBC ಪಟ್ಟಿ, ಪ್ರವರ್ಗ 2A, 2B ಮೀಸಲಾತಿಯಲ್ಲಿ ಬದಲಾವಣೆ ಆಗಬಹುದು. ಸದ್ಯ ಮುಸ್ಲಿಮರಿಗೆ ಪ್ರವರ್ಗ 2B ಅಡಿ ಶೇ.4 ಮೀಸಲಾತಿ ಇದೆ. ಜನಸಂಖ್ಯೆ 75.25 ಲಕ್ಷ ಇರುವುದರಿಂದ ಮೀಸಲಾತಿ ಹೆಚ್ಚಳದ ಬೇಡಿಕೆ ಜೋರಾಗಬಹುದು.
ಇನ್ನೂ ಬಿಜೆಪಿ, ಜೆಡಿಎಸ್ ಇದು ಮತಬ್ಯಾಂಕ್ ರಾಜಕಾರಣ ಎಂದು ಟೀಕಿಸಿವೆ. ಲಿಂಗಾಯತ, ಒಕ್ಕಲಿಗ ಸಂಘಟನೆಗಳು ತಮ್ಮ ಜನಸಂಖ್ಯೆ ಕಡಿಮೆ ತೋರಿಸಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿವೆ. ಒಟ್ಟಾರೆಯಾಗಿ 10 ವರ್ಷಗಳ ನಂತರ ಜಾತಿಗಣತಿ ವರದಿ ಅಧಿಕೃತವಾಗಿ ಹೊರಬಿದ್ದು, 75.25 ಲಕ್ಷ ಜನಸಂಖ್ಯೆಯೊಂದಿಗೆ ಮುಸ್ಲಿಮರು ರಾಜ್ಯದ ಅತಿ ದೊಡ್ಡ ಏಕ ಜಾತಿ ಎಂಬುದು ದೃಢಪಟ್ಟಿದೆ. ಇದರಿಂದ ರಾಜ್ಯ ರಾಜಕಾರಣದಲ್ಲಿ ಮೀಸಲಾತಿ ಮತ್ತು ಸಾಮಾಜಿಕ ನ್ಯಾಯದ ಹೊಸ ಚರ್ಚೆ ಶುರುವಾಗಿದೆ.