ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ಡಿಸಿಎಂ ಹುದ್ದೆ ನೀಡುವಂತೆ ಹೆಚ್ಚಿದ ಕೂಗು

ಮಣಿಕಂಠ ಜನತಾ ರಾಯಭಾರಿ
1 Min Read

ಚಾಮರಾಜನಗರ: ರಾಜ್ಯದ ಸಮಾಜ ಕಲ್ಯಾಣ ಸಚಿವರಾಗಿ ಹಲವಾರು ಜನ ಮೆಚ್ಚಿದ ಕಾರ್ಯಕ್ರಮಗಳನ್ನು ರೂಪಿಸಿದ ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಕಲ್ಪಿಸಬೇಕು ಎಂಬ ಕೂಗು ಜಿಲ್ಲೆಯಲ್ಲಿ ಹೆಚ್ಚಾಗುತ್ತಿದೆ.

ಡಾ.ಎಚ್.ಸಿ.ಮಹದೇವಪ್ಪ ಅವರು ಸಿದ್ದರಾಮಯ್ಯ ಸಂಪುಟದಲ್ಲಿ ಸಮಾಜ ಕಲ್ಯಾಣ ಸಚಿವರಾಗಿ ಕಳೆದ ಮೂರು ವರ್ಷಗಳ ಆಡಳಿತ ಅವಧಿಯಲ್ಲಿ ತಮ್ಮ ಸೈದ್ಧಾಂತಿಕ ಬದ್ಧತೆ ಹಾಗೂ ಸ್ಪಷ್ಟ ನಿಲುವನ್ನು ನಿರೂಪಿಸುವಲ್ಲಿ ಸಂಪೂರ್ಣ ಯಶಸ್ವಿಯಾಗಿದ್ದರು. ತಮಗೆ ನೀಡಲಾದ ಹೊಣೆಗಾರಿಕೆಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸುತ್ತಲೇ, ತಮ್ಮ ಸಂವಿಧಾನಪರ ನಿಲುವನ್ನು ಅವರು ಸದಾ ಎತ್ತಿ ಹಿಡಿದಿದ್ದರು.

ರಾಜ್ಯಾದ್ಯಂತ ಹಮ್ಮಿಕೊಂಡಿದ್ದ ‘ಸಂವಿಧಾನ ಜಾಗೃತಿ ಜಾಥಾ’, ಶಾಲೆಗಳಲ್ಲಿ ‘ಸಂವಿಧಾನ ಪೀಠಿಕೆ’ ಓದು ಕಡ್ಡಾಯ ಹಾಗೂ ‘ಒಳ ಮೀಸಲಾತಿ’ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಅವರು ತೆಗೆದುಕೊಂಡ ದಿಟ್ಟ ನಿರ್ಧಾರಗಳು, ಅವರೊಬ್ಬ ಅಪ್ಪಟ ಅಂಬೇಡ್ಕರ್‌ವಾದಿ ಎಂಬುದನ್ನು ಸಾಬೀತುಪಡಿಸಿತ್ತು. ಆದರೆ ಮುಂಬರುವ ಸಚಿವ ಸಂಪುಟದಲ್ಲಿ ಅವರಿಗೆ ಯಾವುದೇ ಸಚಿವ ಸ್ಥಾನವನ್ನು ನೀಡುವುದಿಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದು, ಎಚ್.ಸಿ.ಎಂ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕು ಎಂಬ ಹೋರಾಟಗಳನ್ನು ರೂಪಿಸಲು ಅಭಿಮಾನಿಗಳು ಮುಂದಾಗಿದ್ದಾರೆ.

ನಾಳೆ (ಜೂ.1) ಒತ್ತಾಯ ಕಾರ್ಯಕ್ರಮ:
ನಿಕಟಪೂರ್ವ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಒತ್ತಾಯಿಸಿ ಜೂ.1 ರಂದು “ಡಾ.ಹೆಚ್.ಸಿ.ಮಹದೇವಪ್ಪ ಅಭಿಮಾನಿ ಬಳಗ ಮತ್ತು ಸಂಸದ ಸುನಿಲ್ ಬೋಸ್ ಅಭಿಮಾನಿ ಬಳಗ”ದ ವತಿಯಿಂದ ಬೃಹತ್ ಒತ್ತಾಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನಗರದ ಭುವನೇಶ್ವರಿ ವೃತ್ತದಲ್ಲಿ ಬೆಳಿಗ್ಗೆ 10:30 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಡಾ.ಎಚ್.ಸಿ.ಮಹದೇವಪ್ಪ ಅವರ ಅಭಿಮಾನಿಗಳು, ಪ್ರಗತಿಪರ ಚಿಂತಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಅಭಿಮಾನಿ ಬಳಗದವರು ಮನವಿ ಮಾಡಿದ್ದಾರೆ.

Share this Article
Leave a comment