ನವದೆಹಲಿ: ಸಾಮಾಜಿಕ ಮಾಧ್ಯಮದಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಹುಟ್ಟುಹಾಕಿ ವೈರಲ್ ಆಗಿರುವ ಅಭಿಜೀತ್ ದೀಪ್ಕೆ, ಜೂ.6, 2026 ರಂದು ಅಮೆರಿಕದಿಂದ ಭಾರತಕ್ಕೆ ಮರಳಲಿದ್ದಾರೆ. ನೀಟ್ ಸೇರಿದಂತೆ ವಿವಿಧ ಪರೀಕ್ಷೆಗಳ ಅಕ್ರಮಗಳ ವಿರುದ್ಧ ದೆಹಲಿಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ಅವರು ಕರೆ ನೀಡಿದ್ದಾರೆ.
ಅಭಿಜೀತ್ ದೀಪ್ಕೆ ಇನ್‌ಸ್ಟಾಗ್ರಾಮ್ ವಿಡಿಯೊದಲ್ಲಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದಾರೆ. “ಸಂವಿಧಾನದ ಹಾದಿಯಲ್ಲಿ ನಾವೆಲ್ಲರೂ ಒಟ್ಟಾಗಿ ಧ್ವನಿ ಎತ್ತಿದರೆ, ಸರ್ಕಾರ ಕೇಳಲೇಬೇಕು” ಎಂದು ಬೆಂಬಲಿಗರು, ವಿದ್ಯಾರ್ಥಿಗಳಿಗೆ ಮನವಿ ಮಾಡಿದ್ದಾರೆ.
ಭಾರತಕ್ಕೆ ಮರಳಿದರೆ ಬಂಧನವಾಗಬಹುದು ಎಂಬ ಭಯ ದೀಪ್ಕೆ ಪೋಷಕರನ್ನು ಕಾಡುತ್ತಿದೆ. ಕಳೆದೆರಡು ದಿನಗಳಿಂದ ನಿದ್ರೆಯೇ ಇಲ್ಲ. ಇಂದಿನ ರಾಜಕಾರಣದ ಸ್ಥಿತಿ ನೋಡಿ ಭಯವಾಗುತ್ತದೆ ಎಂದಿದ್ದಾರೆ ತಂದೆ ಭಗ್ವಾನ್ ದೀಪ್ಕೆ. ತಾಯಿ ಅನಿತಾ, ಅವನು ಸುರಕ್ಷಿತವಾಗಿ ಮನೆಗೆ ಬಂದರೆ ಸಾಕು, ರಾಜಕೀಯ ಪ್ರವೇಶಿಸಲು ಬಿಡುವುದಿಲ್ಲ ಎಂದಿದ್ದಾರೆ.
ಜೂ.6ರಂದು ದೆಹಲಿಗೆ ಆಗಮಿಸಲಿರುವ ದೀಪ್ಕೆ, GenZ ಯುವಕರನ್ನು ಒಗ್ಗೂಡಿಸಿ NEET ಅಕ್ರಮಗಳ ವಿರುದ್ಧ ಬೃಹತ್ ಪ್ರತಿಭಟನೆಗೆ ಯೋಜಿಸಿದ್ದಾರೆ. ದೀಪ್ಕೆ ಬಂಧನದ ಭೀತಿ ನಡುವೆಯೇ ಈ ಪ್ರತಿಭಟನೆ ನಡೆಯಲಿದೆಯೇ ಎಂಬ ಕುತೂಹಲ ಮೂಡಿದೆ. ಸಾಮಾಜಿಕ ಮಾಧ್ಯಮದ ವಿಡಂಬನೆಯಿಂದ ಶುರುವಾದ ‘ಕಾಕ್ರೋಚ್ ಜನತಾ ಪಾರ್ಟಿ’ ಈಗ ರಸ್ತೆ ಹೋರಾಟದ ಹಾದಿಯಲ್ಲಿದೆ. ಜೂ.6ರಂದು ಅಭಿಜೀತ್ ದೀಪ್ಕೆ ಭಾರತಕ್ಕೆ ಮರಳಿದರೆ, ದೆಹಲಿ ಮತ್ತೊಂದು ವಿದ್ಯಾರ್ಥಿ ಚಳವಳಿಗೆ ಸಾಕ್ಷಿಯಾಗಲಿದೆ.