ತೆಂಕಸಿ: ತಮಿಳುನಾಡಿನ ತೆಂಕಸಿ ಜಿಲ್ಲೆಯ ಆಲಂಗುಲಂ ಸಮೀಪದ ನೆಟ್ಟೂರ್ ಗ್ರಾಮದಲ್ಲಿ ಮದುವೆ ಬ್ಯಾನರ್ ಕಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ ಮಾರಕಾಸ್ತ್ರಗಳಿಂದ ದಲಿತರ ಮೇಲೆ ದಾಳಿ ನಡೆದಿದ್ದು, ಜೋಸೆಫ್ ವಿಜಯ್ ಅವರ ಆಡಳಿತದಲ್ಲೂ ದಲಿತರ ಮೇಲೆ ದೌರ್ಜನ್ಯಕ್ಕೆ ತಡೆಯಾದಂತೆ ಕಾಣುತ್ತಿಲ್ಲ.
ತೆಂಕಸಿ ಜಿಲ್ಲೆಯ ನೆಟ್ಟೂರ್ ಗ್ರಾಮ, ಮಾಥಾ ಕೋಯಿಲ್ ಬೀದಿ, ಆಲಂಗುಲಂ ಬಳಿ ಮೇ 29 ಸಂಜೆಯಲ್ಲಿ ಮದುವೆ ಸಮಾರಂಭ ನಡೆಯುತ್ತಿದ್ದ ವೇಳೆ, 9 ಜನ ಮೇಲ್ವರ್ಗದ ಯುವಕರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ನಂಬರ್ ಪ್ಲೇಟ್ ಇಲ್ಲದ 3 ದ್ವಿಚಕ್ರ ವಾಹನಗಳಲ್ಲಿ ಬಂದಿದ್ದಾರೆ. ಯಾವುದೇ ಪ್ರಚೋದನೆ ಇಲ್ಲದೆ ಮಾರಕಾಸ್ತ್ರಗಳಿಂದ ಮನಬಂದಂತೆ ದಲಿತ ಯುವಕರ ಮೇಲೆ ದಾಳಿ ನಡೆಸಿದ್ದಾರೆ.
ದಿಡೀರ್ ದಾಳಿಯಿಂದ ದಲಿತ ಯುವಕರಾದ ರಮೇಶ್ (46), ಅರುಣ್ಮಾರನ್ (22), ರಾಯಪ್ಪನ್ (19), ಮಾರ್ಕ್ ರಮೇಶ್ (49), ರಾಮ್ಕುಮಾರ್ (19), ಮಡಸಾಮಿ (19), ಅರುಲ್ ಮರನ್, ಸಂತೋಷ್ಕುಮಾರ್ ಸೇರಿ 7 ಜನರಿಗೆ ತೀವ್ರ ಪೆಟ್ಟಾಗಿದೆ. ಇವರಲ್ಲಿ 5 ಮಂದಿ ಪರಿಶಿಷ್ಟ ಜಾತಿ (SC) ಮತ್ತು ಓರ್ವ SC-ಕ್ರೈಸ್ತ ಸಮುದಾಯಕ್ಕೆ ಸೇರಿದವರು. ಗಾಯಾಳುಗಳನ್ನು ಮೊದಲು ಆಲಂಗುಲಂ ಸರ್ಕಾರಿ ಆಸ್ಪತ್ರೆ, ನಂತರ ತಿರುನೆಲ್ವೇಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೇ 28ರಂದು ಮದುವೆ ಬ್ಯಾನರ್ ಅನ್ನು ಮಾಥಾ ಕೋಯಿಲ್ ಬೀದಿಯಲ್ಲಿ ಕಟ್ಟುವ ವಿಚಾರಕ್ಕೆ ಇತರೆ ಸಮುದಾಯದ ಯುವಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದು ಘರ್ಷಣೆಗೆ ಕಾರಣವಾಯಿತು. ಈ ಬಗ್ಗೆ ಆಲಂಗುಲಂ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಪೊಲೀಸರು ಪ್ರಕರಣ ದಾಖಲಿಸದೆ ರಾಜಿ ಸಂಧಾನ ಮಾಡಿದ್ದರು ಎಂದು ಸಿಪಿಎಂ ಆರೋಪಿಸಿದೆ.
ಇನ್ನೂ ದಲಿತ ಯುವಕರ ಮೇಲಿನ ದಾಳಿಯನ್ನು ಖಂಡಿಸಿ ದಲಿತ ಸಮುದಾಯದವರು ಆಲಂಗುಲಂ-ರೆಡ್ಡಿಯಾರ್ಪಟ್ಟಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಪೊಲೀಸರು 4 ವಿಶೇಷ ತಂಡ ರಚಿಸಿ ತನಿಖೆ ವೇಳೆಯಲ್ಲಿ ಸಿಸಿಟಿವಿ ಆಧರಿಸಿ ಇಸಕ್ಕಿಮುತ್ತು (19) ಮತ್ತು 3 ಅಪ್ರಾಪ್ತರು ಸೇರಿ 8 ಮಂದಿಯನ್ನು ಬಂಧಿಸಿದ್ದಾರೆ. ಪ್ರಕರಣದ ಮುಖ್ಯ ಆರೋಪಿ ಅಯ್ಯಪ್ಪನ್ (ನೆಟ್ಟೂರ್) ಪೊಲೀಸರ ಮೇಲೆ ದಾಳಿಗೆ ಯತ್ನಿಸಿದಾಗ ಪೊಲೀಸ್ ಗುಂಡೇಟು ತಗುಲಿ ಸೆರೆಸಿಕ್ಕಿದ್ದಾನೆ. ಒಟ್ಟು 9 ಮಂದಿ ಬಂಧನವಾಗಿದೆ.
ತೆಂಕಸಿಯಲ್ಲಿ ಮುಂದುವರಿದ ಜಾತಿ ಸಂಘರ್ಷ: ಕಳೆದ ಡಿಎಂಕೆ ಸರ್ಕಾರದಲ್ಲಿ ವಿಶ್ವವಿದ್ಯಾಲಯಗಳು ಹಾಗೂ ತೆಂಕಸಿ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ದಲಿತರ ಮೇಲಿನ ದೌರ್ಜನ್ಯ ಹೆಚ್ಚಾಗಿ ದಾಖಲಾಗಿತ್ತು. ಈ ಸಂಬಂಧ ದಲಿತ ನಿರ್ದೇಶಕ ಪಾ.ರಂಜಿತ್ ಅವರು ಡಿಎಂಕೆ ಸರ್ಕಾರವನ್ನು ದಲಿತರ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಕಟುವಾಗಿ ಖಂಡಿಸಿದರು. ಪ್ರಸ್ತುತ ಜೋಸೆಫ್ ವಿಜಯ್ ನೇತೃತ್ವದ ಸರ್ಕಾರದಲ್ಲೂ ದಲಿತರ ಮೇಲಿನ ದೌರ್ಜನ್ಯ ಮುಂದುವರಿಯುತ್ತಲೇ ಇದೆ.
ಕಳೆದ ಮಾರ್ಚ್ ತಿಂಗಳಲ್ಲಿ ಪೆರುಂಪಾತು ಗ್ರಾಮದಲ್ಲಿ ಇದೇ ರೀತಿ ಮೇಲ್ವರ್ಗದವರು ದಲಿತರ ಮೇಲೆ ದಾಳಿ ನಡೆಸಿ ಇಬ್ಬರು ಮೃತಪಟ್ಟಿದ್ದರು. ಏಪ್ರಿಲ್ ನಲ್ಲೂ ಕಾಸಿತರ್ಮಂ ಗ್ರಾಮದಲ್ಲಿ ದಲಿತ ಯುವಕ ವಿಘ್ನೇಶ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಲಾಗಿತ್ತು. ಅಯ್ಯನಾರ್ಕುಲಂ ಎಂಬ ಗ್ರಾಮದಲ್ಲಿ ದಲಿತರಿಗೆ ಕ್ಷೌರದ ಅಂಗಡಿಯಲ್ಲಿ ಕಟಿಂಗ್ ನಿರಾಕರಣೆ ಮಾಡಲಾಗಿತ್ತು. ಈ ವಿಚಾರಕ್ಕೆ ದಲಿತರ ಮೇಲೆ ದಾಳಿ ನಡೆಸಲಾಗಿತ್ತು. ಪ್ರಸ್ತುತ ತೆಂಕಸಿ ಜಿಲ್ಲೆಯಲ್ಲಿ ದಲಿತರ ಮೇಲೆ ಸರಣಿ ದಾಳಿ ನಡೆಯುತ್ತಿದ್ದು, ಪೊಲೀಸರ ವೈಫಲ್ಯದಿಂದ ಜಾತಿ ಹಿಂಸೆ ಮುಂದುವರಿದಿದೆ ಎಂಬ ಆರೋಪ ಕೇಳಿಬಂದಿದೆ.