ಚಾಮರಾಜನಗರ: ಪ್ರಸ್ತುತ ಸಂದರ್ಭದಲ್ಲಿ ವಿದ್ಯಾರ್ಥಿಗಳು ವೈಚಾರಿಕ ಚಿಂತನೆಗಳಿಗೆ ಆದ್ಯತೆ ನೀಡುವ ಮೂಲಕ ಉನ್ನತ ಶಿಕ್ಷಣವನ್ನು ಪಡೆದುಕೊಳ್ಳಬೇಕು ಎಂದು ಟಿ.ನರಸೀಪುರ ಬೌದ್ಧ ವಿಹಾರದ ಭೋದಿರತ್ನ ಭಂತೇಜಿ ತಿಳಿಸಿದರು.
ತಾಲೂಕಿನ ಹರದನಹಳ್ಳಿ ಸಮೀಪದ ಜ್ಞಾನ ದೀಪ ಪಬ್ಲಿಕ್ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಶಾಲಾ ಕಟ್ಟಡ ಉದ್ಘಾಟನೆ ಹಾಗೂ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈ ನೆಲದಲ್ಲಿ ಪ್ರತಿಯೊಬ್ಬ ಸಾಧಕರಿಗೂ ಅಡೆತಡೆಗಳು ಇರುತ್ತದೆ. ಯತಾಸ್ಥಿತಿವಾದಿಗಳು ತಾವು ಮಾಡದ್ದನ್ನು ಬೇರೆಯವರು ಮಾಡಿದರೇ ಸಹಿಸುವುದಿಲ್ಲ. ಅದಕ್ಕೆ ಸೊಪ್ಪು ಹಾಕದೇ ವೈಚಾರಿಕ ಚಿಂತನೆಗಳ ಆಧಾರದ ಮೇಲೆ ನಾವು ಸಾಗಬೇಕಿದೆ ಎಂದರು.
ಪ್ರಸ್ತುತ ಎಐ ಯುಗ ಬಹಳ ವೇಗವಾಗಿ ಸಾಗುತ್ತಿದೆ, ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣವನ್ನು ನೀಡಬೇಕು. ಜ್ಞಾನ ದೀಪ ಪಬ್ಲಿಕ್ ಶಾಲೆ ಹೆಸರಿನಂತೆ ಉನ್ನತ ಆದರ್ಶಗಳನ್ನು ವಿದ್ಯಾರ್ಥಿಗಳಿಗೆ ತುಂಬಬೇಕು. ಪ್ರಸ್ತುತ ಬುದ್ಧ, ಬಸವ, ಅಂಬೇಡ್ಕರ್ ಅವರ ಪರಿವರ್ತನಾ ಚಿಂತನೆಯಲ್ಲಿ ಸಾಗುವ ಶಾಲೆಗಳ ಅಗತ್ಯ ಹೆಚ್ಚಾಗಿದೆ ಎಂದು ತಿಳಿಸಿದರು.

ಜ್ಞಾನ ದೀಪ ಪಬ್ಲಿಕ್ ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ಆರ್.ಪಿ.ನಂಜುಂಡಸ್ವಾಮಿ, ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ ಇಂಗ್ಲೀಷ್ ಮಾಧ್ಯಮದಲ್ಲಿ ಶಾಲೆಯನ್ನು ತೆರೆದಿದ್ದೇನೆ. ನಾನು ಮತ್ತು ನನ್ನ ಮಡದಿ ಶಿಕ್ಷಕ ತರಬೇತಿ ಮಾಡಿದ್ದರಿಂದ ಶಾಲೆಯನ್ನು ತೆರೆಯಲು ಸಹಕಾರಿಯಾಯಿತು. ಮುಂದಿನ ದಿನಗಳಲ್ಲಿ 6-8 ನೇ ತರಗತಿ ತೆರೆಯಲು ಅನುಮತಿ ದೊರಕಿದೆ. ಮುಂದಿನ ದಿನಗಳಲ್ಲಿ ಮಕ್ಕಳಿಗೆ ಸರ್ಕಾರಿ ಶಾಲೆಯಂತೆ ಮಧ್ಯಾಹ್ನದ ವೇಳೆಯಲ್ಲಿ ಶುಚಿ ಊಟವನ್ನು ಕೊಡಲು ಚಿಂತನೆ ನಡೆಸಲಾಗಿದೆ ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಪುಟ್ಟಸ್ವಾಮಿ ರಾಮಸಮುದ್ರ ಮಾತನಾಡಿ, ಪ್ರತಿಯೊಬ್ಬರಿಗೂ ಶಿಕ್ಷಣವೇ ಆಧಾರಸ್ತಂಭವಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸ್ಫೂರ್ತಿಯಾಗಿ ಪಡೆದುಕೊಂಡು ಪ್ರತಿಯೊಬ್ಬರು ಅತ್ಯುತ್ತಮ ಶಿಕ್ಷಣವನ್ನು ಪಡೆದುಕೊಳ್ಳಬೇಕು. ನಮ್ಮ ಜೀವನದಲ್ಲಿ ಕಷ್ಟಗಳು ಬಂದಾಗ ಅದನ್ನು ಧೈರ್ಯದಿಂದ ಎದುರಿಸಬೇಕು. ಕಷ್ಟಗಳನ್ನು ಎದುರಿಸಿದಾಗ ಮಾತ್ರ ಉನ್ನತ ಸ್ಥಾನ ತಲುಪಲು ಸಾಧ್ಯವಾಗುತ್ತದೆ ಎಂದರು.
ವಕೀಲ ಪ್ರಸನ್ನಕುಮಾರ್ ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ಶಾಲೆಯನ್ನು ಪ್ರಾರಂಭಿಸುವುದು ಅತ್ಯಂತ ಕಷ್ಟದ ಕೆಲಸವಾಗಿದೆ. ಇಂತಹ ಸಂದರ್ಭದಲ್ಲಿ ತಳಸಮುದಾಯದ ಹೋರಾಟಗಾರ ನಂಜುಂಡಸ್ವಾಮಿ ಅವರು ಅವರು ಇಂಗ್ಲಿಷ್ ಮಾಧ್ಯಮದ ಶಾಲೆಯನ್ನು ಪ್ರಾರಂಭಿಸಿರುವುದು ಅತ್ಯಂತ ಹೆಮ್ಮೆಯ ವಿಚಾರವಾಗಿದೆ. ನಾವೆಲ್ಲರೂ ನಮ್ಮ ಸಮುದಾಯದ ಸಾಧಕರಿಗೆ ಬೆನ್ನೆಲುಬಾಗಿ ನಿಲ್ಲಬೇಕಿದೆ ಎಂದರು.
ಪ್ರಸ್ತುತ ಜ್ಞಾನ ದೀಪ ಪಬ್ಲಿಕ್ ಶಾಲೆ ಹರದನಹಳ್ಳಿ ಹೋಬಳಿ ವ್ಯಾಪ್ತಿಗೆ ಸೀಮಿತವಾಗಿರಬಹುದು. ಆದರೆ ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತದೆ. ಶಿಕ್ಷಣ ಜಾತಿ ಮತ್ತು ಧರ್ಮದ ಆಧಾರದಲ್ಲಿ ನಿರ್ಧಾರವಾಗಬಾರದು. ನಾವು ಶಿಕ್ಷಣ ಕ್ಷೇತ್ರದಲ್ಲಿ ಪ್ರತಿಯೊಬ್ಬರಿಗೂ ಪ್ರೋತ್ಸಾಹ ಮಾಡಬೇಕಿದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಾನಪದ ಗಾಯಕ ಸುರೇಶ್ ನಾಗ್, ಮುಖಂಡ ರಮೇಶ್, ಕನ್ನಡಪರ ಹೋರಾಟಗಾರ ನಮ್ಮನೆ ಪ್ರಶಾಂತ್, ಜ್ಯೋತಿಗೌಡನಪುರ ನಾಗರಾಜ್, ಪ್ರಾರ್ಥನಾ ಮಂದಿರದ ಅನಿಲ್ ಫ್ಯಾಸ್ಟರ್, ಜ್ಞಾನ ದೀಪ ಸಂಸ್ಥೆಯ ಅಧ್ಯಕ್ಷರು ಹಾಗೂ ಮುಖ್ಯ ಶಿಕ್ಷಕರಾದ ಜಯಲಕ್ಷ್ಮೀ, ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.