ಕೇರಳಂ: ಕೇರಳ ವಿಧಾನಸಭೆಯಲ್ಲಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದ ಮಂಜೇಶ್ವರ ಶಾಸಕ ಎ.ಕೆ. ಎಂ ಅಶ್ರಫ್ ಅವರು ಮಂಗಳವಾರ ಆರಂಭಗೊಂಡ ಮೊದಲ ಅಧಿವೇಶನದಲ್ಲಿ ಬಸವಣ್ಣನವರ ವಚನವನ್ನು ಉಲ್ಲೇಖಿಸಿ ಗಮನ ಸೆಳೆದಿದ್ದಾರೆ.
ಮಾನವೀಯತೆ, ಸಮಾನತೆ ಮತ್ತು ಸೌಹಾರ್ದತೆಯ ಸಂದೇಶ ಸಾರುವ ಬಸವಣ್ಣ ಅವರ ವಚನ ಕೇರಳ ವಿಧಾನಸಭೆಯಲ್ಲಿ ಮಾರ್ಧನಿಸಿದ್ದು, ಆಡಳಿತ ಪಕ್ಷದ ಶಾಸಕರು ಮೇಜು ತಟ್ಟಿ ಅಭಿನಂದಿಸಿದ್ದಾರೆ.
ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆ ಸಂದರ್ಭದಲ್ಲಿ ಬಸವಣ್ಣ ಅವರ “ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯ, ಇವ ನಮ್ಮವ ಇವ ನಮ್ಮವ ಇವ ನಮ್ಮವನೆಂದೆನಿಸಯ್ಯ.. ಕೂಡಲಸಂಗಮದೇವ ನಿಮ್ಮ ಮನೆಯ ಮಗನೆಂದೆನಿಸಯ್ಯ ಎಂಬ ವಚನದ ಸಾಲುಗಳನ್ನು ಹೇಳುವ ಮೂಲಕ ಗಮನಸೆಳೆದಿದ್ದಾರೆ.
ಅದಲ್ಲದೇ ಬಸವಣ್ಣನವರ ಮತ್ತೊಂದು ವಚನ “ನುಡಿದರೇ ಮುತ್ತಿನ ಹಾರದಂತಿರಬೇಕು, ನುಡಿದರೇ ಮಾಣಿಕ್ಯದ ದೀಪ್ತಿಯಂತಿರಬೇಕು, ನುಡಿದರೇ ಸ್ಪಟಿಕದ ಸಲಾಕೆಯಂತಿರಬೇಕು, ನುಡಿದರೇ ಲಿಂಗ ಮೆಚ್ಚಿ ಹೌದು ಹೌದು ಎನ್ನಬೇಕು ಎಂಬ ವಚನವನ್ನು ಉಲ್ಲೇಖಿಸುವ ಮೂಲಕ ಮೆಚ್ಚುಗೆಗಳಿಸಿದ್ದಾರೆ. ಇತ್ತೀಚೆಗೆ ಎಂ.ಕೆ.ಎಂ ಅಶ್ರಫ್ ಅವರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಗಡಿನಾಡ ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದ್ದು. ಈಗ ವಿಧಾನಸಭೆಯಲ್ಲಿ ಬಸವಣ್ಣನವರ ವಚನವನ್ನು ಹೇಳುವ ಮೂಲಕ ಕನ್ನಡಿಗರ ಅಪಾರ ಮೆಚ್ಚುಗೆಗೆ ನಯಪಾತ್ರವಾಗಿದ್ದಾರೆ.
ಈ ಹಿಂದೆಯೂ ವಚನ ಉಲ್ಲೇಖ: ಕೇರಳ ವಿಧಾನಸಭೆಯಲ್ಲಿ ಎಂ.ಕೆ.ಎಂ ಅಶ್ರಫ್ ಅಲ್ಲದೇ ಈ ಹಿಂದೆಯೂ ಬಸವಣ್ಣನವರ ವಚನವನ್ನು ರಾಜ್ಯಪಾಲರೇ ಉಲ್ಲೇಖ ಮಾಡುವ ಮೂಲಕ ಗಮನಸೆಳೆದಿದ್ದರು. ಫೆ.5 2024 ರಂದು ಕೇರಳ ರಾಜ್ಯಪಾಲರಾಗಿದ್ದ ಆರಿಫ್ ಮೊಹಮ್ಮದ್ ಖಾನ್ ಅವರು ಬಜೆಟ್ ಅಧಿವೇಶನದ ಭಾಷಣದಲ್ಲಿ ಬಸವಣ್ಣನವರ “ಉಂಡ ಬಟ್ಟಲು ಬೇರೆ ಕಂಚಲ್ಲ, ನೀನು ಕಂಚು ನಾನು ಕಂಚು” ಎಂಬ ವಚನವನ್ನು ಉಲ್ಲೇಖಿಸಿದ್ದರು. ಇದು ಕೇರಳಾ ವಿಧಾನಸಭೆಯಲ್ಲಿ ಮೊದಲ ಬಾರಿಗೆ ಕನ್ನಡ ವಚನ ಮೊಳಗಿದ ಸಂದರ್ಭವಾಗಿದೆ.