ಮೈಸೂರು: ರಾಜ ಪ್ರಭುತ್ವದಲ್ಲಿ ಪ್ರಜಾಪ್ರಭುತ್ವದ ಕೆಲಸ ಮಾಡಿದವರು ನಾಲ್ವಡಿ ಕೃಷ್ಣರಾಜ ಒಡೆಯರ್. ಆದರ್ಶ ರಾಜ ಹೇಗಿರಬೇಕು ಎಂಬುದಕ್ಕೆ ನಾಲ್ವಡಿ ಉತ್ತಮ ಮಾದರಿಯಾಗಿ ನೋಡಬಹುದು ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.
ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರು ಮತ್ತು ಆಧುನಿಕ ಮೈಸೂರು ಕೃತಿ ಬಿಡುಗಡೆ ಮಾಡಿ ಮಾತನಾಡಿದರು.
ನಾಲ್ವಡಿಯರು ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕವಾಗಿ ಅನೇಕ ಸಾಧನೆ ಮಾಡಿದ್ದಾರೆ. ನಾಲ್ವಡಿಯವರು ತೋರಿದ ಧಾರ್ಮಿಕ ಸಾಮರಸ್ಯ ವರ್ತಮಾನಕ್ಕೆ ದೊಡ್ಡಮೌಲ್ಯ. ದೇಶಕ್ಕೆ ಬೇಕಾಗಿರುವುದು ಸೌಹಾರ್ದತೆ, ಸಮಾನತೆ. ಪ್ರಜಾಪ್ರಭುತ್ವದಲ್ಲಿ ಚುನಾವಣೆ ತಾಂತ್ರಿಕ ಅಂಶ. ತಾತ್ವಿಕ ಅಂಶಗಳಾದ ಸಮಾನತೆ, ಸೌಹಾರ್ದತೆ, ತಾತ್ವಿಕತೆ ಅನುಷ್ಠಾನಕ್ಕೆ ತರಬೇಕು ಎಂದರು.
ಚರಿತ್ರೆ ಬಹಳ ಬಿಕ್ಕಟ್ಟಿನಲ್ಲಿದೆ. ಚರಿತ್ರಕಾರರಲ್ಲದವರು ಚರಿತ್ರೆ ಬರೆಯುತ್ತಿದ್ದಾರೆ. ಚರಿತ್ರೆಯ ಚಾರಿತ್ರ್ಯ ಕಳೆದುಹೋಗುತ್ತಿದೆ. ಇದು ಬಹಳ ಅಪಾಯಕಾರಿ. ಜಾತಿ, ಮತ, ಧರ್ಮ, ರಾಜಕೀಯ ಪಕ್ಷöಗಳ ಪಕ್ಷöಪಾತದಿಂದ ದೂರ ಇಟ್ಟು ಚರಿತ್ರೆ ಕಟ್ಟುವ ಮನೋಧರ್ಮ ಬೇಕು ಎಂದರು.
ಚರಿತ್ರೆ ಕಟ್ಟಲು ಬೇಕಿರುವುದು ನೈತಿಕತೆ, ತೀವ್ರತರವಾದ ಕಾಳಜಿ, ಸಮಕಾಲೀನ ವಿವೇಕ, ವಿದ್ವತ್ತು ಬೇಕಾಗುತ್ತದೆ. ಚರಿತ್ರೆಯನ್ನು ಅಪವ್ಯಾಖ್ಯಾನ ಮಾಡುತ್ತಿರುವುದರಿಂದ ಇತಿಹಾಸಕಾರರು ದೊಡ್ಡ ಬಿಕ್ಕಟ್ಟು ಎದುರಿಸುತ್ತಿದ್ದಾರೆ. ಆ ಪಕ್ಷ ಈ ಪಕ್ಷ ಒಂದೊಂದು ಚರಿತ್ರೆ ಬರೆದರೆ ನಿಜವಾದ ಚರಿತ್ರೆ ಚಾರಿತ್ರ್ಯ ಕಳೆದುಕೊಂಡು ಬಿದ್ದಿರುತ್ತದೆ ಎಂದು ಎಚ್ಚರಿಸಿದರು.

ಹಿರಿಯ ವಿಮರ್ಶಕ ಪ್ರೊ.ಓ.ಎಲ್. ನಾಗಭೂಷಣ ಸ್ವಾಮಿ ಕೃತಿ ಕುರಿತು ಮಾತನಾಡಿ, ಪ್ರೊ.ಎಸ್.ಚಂದ್ರಶೇಖರ್ ಅವರ ನಾಲ್ವಡಿ ಕೃತಿಯ ಪಾತ್ರಗಳು, ಸನ್ನಿವೇಶ ಬದಲಿಸಿದರೆ ಇವತ್ತಿನ ಬದುಕಾಗುತ್ತದೆ. ಇದು ವರ್ತಮಾನಕ್ಕೆ ಹಿಡಿದ ಕನ್ನಡಿ. ನಾಲ್ವಡಿಯರಿಗೆ ಅನೇಕ ಬಿಕ್ಕಟ್ಟುಗಳಿದ್ದರೂ ಜನಪರವಾದ ಕೆಲಸ ಮಾಡಿದರು. ಆಡಳಿತ ಹಕ್ಕು, ಅಧಿಕಾರ ಎಂದುಕೊಳ್ಳದೇ ಜವಾಬ್ದಾರಿಯುತವಾಗಿ ನಿರ್ವಹಿಸಿದರು. ನಾಲ್ವಡಿ ಕಾರ್ಯನಿರ್ವಹಿಸಿದರೂ ಎಂಬ ತೂಕದ ಅನೇಕ ಮಾತುಗಳು ಕೃತಿಯಲ್ಲಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಲೇಖಕ ಪ್ರೊ.ಎಸ್.ಚಂದ್ರಶೇಖರ್ ಮಾತನಾಡಿ, ರಾಜಪ್ರಭುತ್ವ ವಿರೋಧಿಯಾದ ನಾನು ಜನತಂತ್ರದ ಪರವಾಗಿದ್ದೇನೆ. ಮೈಸೂರಿನ ಬಗ್ಗೆ ಪಿಎಚ್.ಡಿ ಮಾಡಿದ ಬಳಿಕ ನಾಲ್ವಡಿಯವರ ೫ ದಶಕಗಳಿಂದ ಬರೆಯುತ್ತಿದ್ದೇನೆ. ಇವೆಲ್ಲದರ ಒಟ್ಟಂದವಾಗಿ ಕೃತಿ ರೂಪುಗೊಂಡಿತು ಎಂದರು.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಡಾ.ನಂಜಯ್ಯ ಹೊಂಗನೂರು ಅಧ್ಯಕ್ಷತೆ ವಹಿಸಿ ಮಾತನಾಡಿ, ಮೈಸೂರು ವಿವಿ ನಿರ್ಮಾತೃ ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನವನ್ನು ಕನ್ನಡ ಸಂಸ್ಥೆಯಲ್ಲಿ ಪ್ರಥಮ ಬಾರಿಗೆ ಆಚರಿಸಲಾಗಿದೆ. ಅದು ಮುಂದುವರಿಯಲಿದೆ. ಕನ್ನಡ ಭಾಷೆ, ಸಾಹಿತ್ಯ ಸಂಸ್ಕೃತಿ ಶಿಕ್ಷಣಕ್ಕೆ ಅಪಾರ ಕೊಡುಗೆ ನೀಡಿದ ನಾಲ್ವಡಿಯವರ ಸ್ಮರಣೆ ಸದಾ ಕಾಲಕ್ಕೂ ಅವಿಸ್ಮರಣೀಯ ಎಂದರು.
ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಡಾ.ಸಂಗಮೇಶ ಉಪಾಸೆ, ಮೈಸೂರು ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಇದ್ದರು. ಬೆಂಗಳೂರು ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪ್ರಕಾಶಮೂರ್ತಿ ಪ್ರಸ್ತಾವಿಕವಾಗಿ ಮಾತನಾಡಿದರು.
ಎಲ್.ಹರ್ಷ ಸ್ವಾಗತಿಸಿದರು. ಡಾ.ಯೋಗೀಶ್ ಎನ್ ನಿರೂಪಿಸಿದರು. ಲತಾ ಮೋಹನ್ ವಂದಿಸಿದರು. ಡಾ.ಅಮ್ಮರಾಮಚಂದ್ರ, ಹುರುಗಲವಾಡಿ ರಾಮಯ್ಯ ಮತ್ತು ಸಂಗಡಿಗರು ನಾಲ್ವಡಿ ಗೀತೆಗಳನ್ನು ಹಾಡಿದರು.
ಶಿಕ್ಷಣದ ನಿರ್ಲಕ್ಷ್ಯ ಅಘಾತಕಾರಿ: ಪ್ರಜಾಪ್ರಭುತ್ವ ಸಂಸ್ಥೆಗಳು ಕುಸಿದು ಬೀಳುತ್ತಿವೆ. ವಿಶ್ವವಿದ್ಯಾನಿಲಯಗಳನ್ನು ಸರ್ಕಾರಗಳು, ರಾಜಕಾರಣಿಗಳು, ಅಧ್ಯಾಪಕರು, ವಿದ್ಯಾರ್ಥಿಗಳಿಂದ ತೀವ್ರ ನಿರ್ಲಕ್ಷ್ಯಕ್ಕೆ ಗುರಿಯಾಗಿವೆ. ಓದುವುದರಿಂದ ಏನಾಗುತ್ತದೆ ಎಂಬ ಉದಾಸೀನ ಮತ್ತು ಉಢಾಪೆ ಅಘಾತಕಾರಿ ಎಂದು ಓ.ಎಲ್.ನಾಗಭೂಷಣಸ್ವಾಮಿ ಹೇಳಿದರು. ಪಿಎಚ್.ಡಿಗೆ ಗೌರವ ಹೊರಟು ಹೋಗಿದೆ. ಜೀವನ ನಿರ್ವಹಣೆಗಾಗಿ ಪಿಎಚ್.ಡಿ ಮಾಡಲಾಗುತ್ತಿದೆ. ಗೈಡ್ಗಳು ಋಣ ಸಂದಾಯದ ಹೆಸರಿನಲ್ಲಿ ಉಡುಗೊರೆ ಕೊಡುವಂತೆ, ಕಾರು ಕೊಡಿಸುವಂತೆ, ತಮ್ಮ ಮಕ್ಕಳ ಬರ್ತಡೇ ಮಾಡುವಂತೆ ಕೇಳುತ್ತಿದ್ದಾರೆ. ಆದರೂ ನಮಗೇ ಬೇಜಾರು ಇಲ್ಲ. ವರ್ತಮಾನ ದುಃಖ ತರದಿದ್ದರೆ ಭವಿಷ್ಯ ರೂಪಿಸಲು ಸಾಧ್ಯವಿಲ್ಲ. ಚರಿತ್ರೆ ಯಾಕೇ ಬರೆಯುತ್ತಾರೆಂದರೆ ಬದಲಾಯಿಸೋಕೆ ಅಥವಾ ವಿರೋಧಿಸೋಕೆ. ಚರಿತ್ರೆಯ ಮೇಷ್ಟುçಗಳು ಸರಿಯಾಗಿ ಪಾಠ ಮಾಡಿದ್ದರೆ ನಮ್ಮ ದೇಶ ದುರ್ಗತಿಗೆ ಬರುತ್ತಿರಲಿಲ್ಲ ಎಂದು ವಿಷಾದಿಸಿದರು.