ಮೈಸೂರು: ಬೇಸಿಗೆಯ ಬಿಸಿಲಿಗೆ ಮೈಯೆಲ್ಲಾ ಸುಡುವಾಗ, ಬಾಯಿಗೆ ನೀರೂರುವ ಕಪ್ಪು-ನೇರಳೆ ಬಣ್ಣದ ಹಣ್ಣು ಕಂಡರೆ ಯಾರಿಗೆ ತಾನೇ ಖುಷಿಯಾಗುವುದಿಲ್ಲ? ಜಾಮೂನ್, ನೇರಳೆ, ಕಪ್ಪು ಹಣ್ಣು ಎಂದು ಕರೆಯುವ ಈ ಚಿಕ್ಕ ಹಣ್ಣಿನೊಳಗೆ ಇಡೀ ಆರೋಗ್ಯದ ಖಜಾನೆಯೇ ಅಡಗಿದೆ. ಇದನ್ನು ಬಡವರ ಸೇಬು ಅಂತಲೂ ಸಕ್ಕರೆ ಕಾಯಿಲೆಗೆ ರಾಮಬಾಣ ಎಂದೂ ಕರೆಯುತ್ತಾರೆ.
ಹೌದು, ನೇರಳೆ ಹಣ್ಣಿನ ಅತಿದೊಡ್ಡ ಮಹತ್ವವೇ ಇದು. ಇದರ ಬೀಜ ಮತ್ತು ತೊಗಟೆಯಲ್ಲಿ ಜಂಬೋಲೈನ್ ಮತ್ತು ಎಲಾಜಿಕ್ ಆಸಿಡ್ ಎಂಬ ವಿಶೇಷ ಸಂಯುಕ್ತಗಳಿವೆ. ಇವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಪಿಷ್ಟವು ಸಕ್ಕರೆಯಾಗಿ ಪರಿವರ್ತನೆಯಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಡಯಾಬಿಟಿಸ್ ಇರುವವರು ದಿನಕ್ಕೆ 100-150 ಗ್ರಾಂ ನೇರಳೆ ಹಣ್ಣು ತಿಂದರೆ, ಇನ್ಸುಲಿನ್ ಸೂಕ್ಷ್ಮತೆಯೂ ಸುಧಾರಿಸುತ್ತದೆ. ಹಳ್ಳಿಗಳಲ್ಲಿ ನೇರಳೆ ಬೀಜದ ಪುಡಿಯನ್ನು ಸಕ್ಕರೆ ಕಾಯಿಲೆ ಮದ್ದಾಗಿ ಇಂದಿಗೂ ಬಳಸುತ್ತಾರೆ.

ನೇರಳೆಯಲ್ಲಿ ನಾರಿನಂಶ ಮತ್ತು ಟ್ಯಾನಿನ್ ಹೇರಳ. ಬೇಸಿಗೆಯಲ್ಲಿ ಬರುವ ಅಜೀರ್ಣ, ಬೇದಿ, ಹೊಟ್ಟೆ ಉಬ್ಬರಕ್ಕೆ ಇದು ತಕ್ಷಣದ ಪರಿಹಾರವಾಗಿದೆ. ಬಾಯಲ್ಲಿ ಹುಣ್ಣು, ಒಸಡಿನಿಂದ ರಕ್ತ ಬರುವ ಸಮಸ್ಯೆಗೂ ನೇರಳೆ ರಸದಿಂದ ಬಾಯಿ ಮುಕ್ಕಳಿಸಿದರೆ ಗುಣವಾಗುತ್ತದೆ. ಚರ್ಮ ಮತ್ತು ಕೂದಲಿಗೆ ನೈಸರ್ಗಿಕ ಬ್ಯೂಟಿ ಪಾರ್ಲರ್ ಎಂದೇ ನೇರಳೆ ಹಣ್ಣನ್ನು ಕರೆಯುತ್ತಾರೆ. ಈ ಹಣ್ಣು ಮೊಡವೆ, ಕಪ್ಪು ಕಲೆ ಕಡಿಮೆ ಮಾಡುತ್ತದೆ. ಚರ್ಮಕ್ಕೆ ನೈಸರ್ಗಿಕ ಹೊಳಪು ನೀಡುತ್ತದೆ. ಕೂದಲು ಉದುರುವುದನ್ನು ತಡೆಯುತ್ತದೆ
ಬಿಳಿ ಕೂದಲನ್ನು ತಡಮಾಡುತ್ತದೆ. ಬೀಟಾ-ಕ್ಯಾರೋಟಿನ್ ಕಣ್ಣಿನ ದೃಷ್ಟಿ ಚುರುಕಾಗಿಡುತ್ತದೆ.
ಅದಲ್ಲದೇ ರಕ್ತವೃದ್ಧಿಗೆ ಮತ್ತು ರೋಗ ನಿರೋಧಕ ಶಕ್ತಿಗೆ
ನೇರಳೆಯಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿದೆ. ರಕ್ತಹೀನತೆ ಇರುವವರಿಗೆ ಇದು ವರದಾನ. ರಕ್ತವನ್ನು ಶುದ್ಧೀಕರಿಸುವ ಗುಣವೂ ಇದೆ. ಇದರಲ್ಲಿರುವ ಫೈಟೋನ್ಯೂಟ್ರಿಯೆಂಟ್‌ಗಳು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತವೆ ಎಂಬ ಸಂಶೋಧನೆಯೂ ಇದೆ. ತೂಕ ಇಳಿಸುವವರಿಗೆ ಬೆಸ್ಟ್ ಫ್ರೆಂಡ್ ಇದಾಗಿದ್ದು, ಕ್ಯಾಲೋರಿ ಕಡಿಮೆ, ಫೈಬರ್ ಹೆಚ್ಚಾಗಿದೆ.
ಒಟ್ಟಾರೆಯಾಗಿ 2 ತಿಂಗಳು ಮಾತ್ರ ಸಿಗುವ ಈ ಕಾಲೋಚಿತ ಹಣ್ಣನ್ನು ಮಿಸ್ ಮಾಡಬೇಡಿ. ಒಂದು ನೇರಳೆ ದಿನಕ್ಕೆ, ಡಾಕ್ಟರ್ ದೂರಕ್ಕೆ ಎನ್ನುವ ಮಾತಿದೆ. ಈ ಬಾರಿ ಮಂಡಿ ಮೇಲೆ ಹಣ್ಣಿನ ಬುಟ್ಟಿ ಇಟ್ಟುಕೊಂಡು ನೇರಳೆ ತಿನ್ನುವಾಗ, ಅದರ ಬಣ್ಣದ ಜೊತೆಗೆ ಅದರ ಮಹತ್ವವನ್ನೂ ನೆನಪಿಸಿಕೊಳ್ಳಿ. ಇನ್ನು ಹೆಚ್ಚಿನ ಮಾಹಿತಿಗಾಗಿ “ಜನತಾ ರಾಯಭಾರಿ” ವೆಬ್ ಸೈಟ್ ಫಾಲೋ ಮಾಡಿ…