ಚಾಮರಾಜನಗರ: ಸಾಹಿತಿ ದೇವನೂರು ಮಹಾದೇವ ಅವರು ಸಮಕಾಲೀನ ಸಮಸ್ಯೆಗಳಿಗೆ ಧ್ವನಿಯಾಗಿದ್ದಾರೆ ಎಂದು ಕವಿ ಮದ್ದೂರು ದೊರೆಸ್ವಾಮಿ ತಿಳಿಸಿದರು.
ಯಳಂದೂರು ತಾಲೂಕಿನ ಆಲ್ಕೆರೆ ಅಗ್ರಹಾರ ಗ್ರಾಮದಲ್ಲಿ ಮಾನವ ಬಂಧುತ್ವ ವೇದಿಕೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹಯೋಗದಲ್ಲಿ ದೇವನೂರು ಮಹಾದೇವ ಅವರ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿದ್ದ ನೋಟ್ ಬುಕ್ ಮತ್ತು ಲೇಖನ ಸಾಮಗ್ರಿ ವಿತರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ದೇವನೂರು ಮಹಾದೇವ ನಮ್ಮ ನಡುವಿನ ಸಾಮಾಜಿಕ ಸಮಾನತೆಯ ಅಸ್ಮಿತೆಯಾಗಿದ್ದಾರೆ. ಒಬ್ಬ ನಿಜವಾದ ಬರಹಗಾರ ಸಾಮಾನ್ಯ ಜನರ ಒಡನಾಡಿಯಾಗಿ ಅವರ ದುಃಖ ದುಮ್ಮಾನಗಳಿಗೆ ಸ್ಪಂದಿಸುತ್ತಾನೆ. ಅಂತಹ ಬರಹಗಾರರಲ್ಲಿ ದೇವನೂರು ಮಹಾದೇವ ಅಗ್ರಮಾನ್ಯರಾಗಿದ್ದಾರೆ ಎಂದರು.
ದೇವನೂರರು ಸಮಕಾಲೀನ ಸಮಸ್ಯೆಗಳಿಗೆ ದನಿಯಾಗಿ, ಅವುಗಳಿಗೆ ಪರಿಹಾರ ಸೂಚಿಸುವ ವಿಶೇಷ ವ್ಯಕ್ತಿತ್ವ ಹೊಂದಿದ್ದಾರೆ. ಸರಳವಾಗಿ ಜೀವಿಸುತ್ತಾ ಶೋಷಿತ ವರ್ಗಗಳ ಹಕ್ಕು ಬಾಧ್ಯತೆ ಗಳಿಗೆ ಚ್ಯುತಿ ಬಂದಾಗ ಸರ್ಕಾರವನ್ನು ಎಚ್ಚರಿಸುವ ಶೋಷಿತ ಸಮುದಾಯಗಳಿಗೆ ಟೊಂಕಕಟ್ಟಿ ನಿಂತ ದೇವನೂರು, ಮಾತೃ ಹೃದಯದ ಮಾನವತಾವಾದಿಯಾಗಿದ್ದಾರೆ ಎಂದರು.
ದೇವನೂರು ಮಹಾದೇವ ಸರಳ ಸಜ್ಜನಿಕೆ, ಮೌನ ಪ್ರತಿಭಟನೆ, ರಕ್ತರಹಿತಕ್ರಾಂತಿ, ಅಹಿಂಸಾವಾದ, ಸಮತಾವಾದ ಇಂದಿನ ಸಮಾಜಕ್ಕೆ ಆದರ್ಶವಾಗಬೇಕಿದೆ. ಅದಕ್ಕಾಗಿ ಶೋಷಿತ ವರ್ಗಗಳು ಉನ್ನತ ಶಿಕ್ಷಣ ಪಡೆದು ಮಾನವತ್ವದ ಜೊತೆಗೆ ಬದುಕು ಕಟ್ಟಿ ಕೊಳ್ಳಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಾನವ ಬಂಧುತ್ವ ವೇದಿಕೆ ತಾಲೂಕು ಸಂಚಾಲಕರಾದ ಕವಿ ಮತ್ತು ಪ್ರಗತಿಪರ ಚಿಂತಕ ಎಸ್.ಸುಂದರ್ ಕಲಿವೀರ್, ಉಪನ್ಯಾಸಕ ಶಿವರಾಜ್, ಸಿದ್ದರಾಜು, ಲಕ್ಷ್ಮಣ್, ರೇವಣ್ಣ, ನಾಯಕ ಜನಾಂಗದ ಯಜಮಾನರು ಹಾಜರಿದ್ದರು.