ಚಾಮರಾಜನಗರ: ತಾಲೂಕಿನ ಮಸಣಾಪುರ ಗ್ರಾಮದಲ್ಲಿ ಯುವಕನೊಬ್ಬ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಸಗಣಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.
ತಾಲೂಕಿನ ಮಸಣಾಪುರ ಮತ್ತು ಚಾಟೀಪುರ ಗ್ರಾಮಗಳ ನಡುವೆ ಇರುವ ಮುಖ್ಯರಸ್ತೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರವಿರುವ ನಾಮಫಲಕಗಳನ್ನು ಅಳವಡಿಸಲಾಗಿದೆ. ಅದರಂತೆ ಭಾನುವಾರ ಮುಂಜಾನೆಯ ವೇಳೆಯಲ್ಲಿ ಮಸಣಾಪುರ ಗ್ರಾಮದ ಉಪ್ಪಾರ ಸಮುದಾಯಕ್ಕೆ ಸೇರಿದ ಶಿವಣ್ಣ ಎಂಬುವವರ ಮಗನಾದ ಚಂದ್ರು ಎಂಬ ಯುವಕ ಅಂಬೇಡ್ಕರ್ ಭಾವಚಿತ್ರವಿರುವ ನಾಮಫಲಕಗಳಿಗೆ ಸಗಣಿ ಬಳಿದು, ನಾಮಫಲದಲ್ಲಿ ಅಳವಡಿಸಿದ್ದ ಲೈಟ್ ಗಳನ್ನು ಹೊಡೆದು ಹಾಕಿದ್ದಾನೆ.
ಈ ಸಂದರ್ಭದಲ್ಲಿ ಶಬ್ಧವನ್ನು ಆಲಿಸಿದ ಕೆಲವು ಸಾರ್ವಜನಿಕರು, ಆತನನ್ನು ಯಾಕೇ ಈಗೇ ಮಾಡುತ್ತಿದ್ದೀಯಾ ಎಂದು ಪ್ರಶ್ನಿಸಿದ್ದಾರೆ. ಯುವಕ ಸಾರ್ವಜನಿಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವುದು ಅಲ್ಲದೇ, ಅಂಬೇಡ್ಕರ್ ನಾಮಫಲಕಕ್ಕೆ ಸಗಣಿಯನ್ನೂ ಬಳಿದಿದ್ದಾನೆ. ಈ ವೇಳೆ ಸಾರ್ವಜನಿಕರು ಮತ್ತು ಯುವಕನ ನಡುವೆ ಮಾತಿನ ಚಕಾಮಕಿ ನಡೆದು, ಸಾರ್ವಜನಿಕರು ಯುವಕನನ್ನು ಕಂಬಕ್ಕೆ ಕಟ್ಟಿಹಾಕಿ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ.
ಈ ವೇಳೆ ಯಳಂದೂರು ಮತ್ತು ಚಾಮರಾಜನಗರ ಮುಖ್ಯರಸ್ತೆಯನ್ನು ಸಂಪೂರ್ಣ ಬಂದ್ ಮಾಡುವ ಮೂಲಕ ಅಂಬೇಡ್ಕರ್ ಅಭಿಮಾನಿಗಳು ರಸ್ತೆಯಲ್ಲೇ ಪ್ರತಿಭಟನೆಯನ್ನು ನಡೆಸಿದರು. ಮಸಣಾಪುರ ಗ್ರಾಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನವಾಗಿದೆ ಎಂಬ ಸುದ್ದಿ ತಿಳಿಯುತ್ತಲೇ, ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಕಡಿಮೆ ಸಂಖ್ಯೆಯಲ್ಲಿ ಇದ್ದ ಪೊಲೀಸರು ಜನರನ್ನು ನಿಯಂತ್ರಿಸಲು ಸಾಕಷ್ಟು ಶ್ರಮವಹಿಸಬೇಕಾಯಿತು.
ಬಳಿಕ ಜನರ ಪ್ರತಿಭಟನೆಯ ನಡುವೆಯೂ ಹರಸಾಹಸ ಮಾಡಿ ಆರೋಪಿಯನ್ನು ಪೊಲೀಸರು ಬಂಧಿಸಿ ಕರೆದೊಯ್ದರು. ತಕ್ಷಣ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಮುತ್ತುರಾಜು ಭೇಟಿ ನೀಡಿ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದರು. ಈ ವೇಳೆ ಗ್ರಾಮಸ್ಥರೊಬ್ಬರು ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಪದೇ ಪದೇ ಇಂತಹ ಕೃತ್ಯಗಳು ನಡೆಯುತ್ತಿದೆ. ನಮ್ಮ ಗ್ರಾಮದಲ್ಲಿ ಎಂದಿಗೂ ಇಂತಹ ಘಟನೆ ಸಂಭವಿಸಿರಲಿಲ್ಲ. ಈ ನಿಟ್ಟಿನಲ್ಲಿ ಆರೋಪಿಯನ್ನು ಕೂಡಲೇ ಗಡಿಪಾರು ಮಾಡಬೇಕು. ಆತನ ಮೇಲೆ ರಾಷ್ಟ್ರ ದ್ರೋಹದ ಕಾಯ್ದೆಯಡಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಎಸ್ಪಿ ಎಂ.ಮುತ್ತರಾಜು ಅವರು ಮಾತನಾಡಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮೇಲಿನ ಇಂತಹ ಕೃತ್ಯ ಅತ್ಯಂತ ಖಂಡನೀಯ. ಈಗಾಗಲೇ ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದೇವೆ. ಆತನಿಗೆ ತಕ್ಕ ಶಿಕ್ಷೆಯನ್ನು ವಿಧಿಸಲು ಕ್ರಮ ವಹಿಸುತ್ತೇವೆ. ಮುಂದುವರಿದು ಆತನನ್ನು ಗಡಿಪಾರು ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಶಾಸಕ ಎ.ಆರ್.ಕೃಷ್ಣಮೂರ್ತಿ ಭೇಟಿ:
ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಭೇಟಿ ನೀಡಿ ಸಮಸ್ಯೆ ಆಲಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ, ದೇಶದಲ್ಲೇ ಅಂಬೇಡ್ಕರ್ ಅವರ ಮೇಲೆ ಇಂತಹ ಅಪಮಾನಗಳು ನಡೆಯುತ್ತಿದೆ. ಹೆಚ್ಚಿನ ಪ್ರಕರಣದಲ್ಲಿ ಆರೋಪಿಗಳು ಪತ್ತೆಯಾಗುವುದೇ ಇಲ್ಲ. ಮಸಣಾಪುರ ಪ್ರಕರಣದಲ್ಲಿ ಆರೋಪಿಯನ್ನು ಗ್ರಾಮಸ್ಥರೇ ಹಿಡಿದಿದ್ದು, ಆತನನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಅದರಲ್ಲೂ ನನ್ನ ಕ್ಷೇತ್ರದಲ್ಲಿ ಇಂತಹ ಕೃತ್ಯ ನಡೆದಿರುವುದು ಅತ್ಯಂತ ಖಂಡನೀಯ. ಆರೋಪಿಯನ್ನು ಗಡಿಪಾರು ಮಾಡುವ ನಿಟ್ಟಿನಲ್ಲಿ ಪೊಲೀಸರು ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು. ಈ ವೇಳೆ ಗ್ರಾಮಸ್ಥರು ಶಾಸಕರ ಭರವಸೆಯನ್ನು ಒಪ್ಪದೇ, ಆರೋಪಿಯನ್ನು ಗಡಿಪಾರು ಮಾಡುವವರೆಗೂ ಪ್ರತಿಭಟನೆ ನಡೆಸಲಾಗುವುದು ಎಂದು ಪಟ್ಟು ಹಿಡಿದರು.
ರಾಷ್ಟ್ರದ್ರೋಹದ ಕೇಸ್ ದಾಖಲಿಸುವಂತೆ ಆಗ್ರಹ:
ಮಸಣಾಪುರ ಗ್ರಾಮದಲ್ಲಿ ನಡೆದ ಅಂಬೇಡ್ಕರ್ ಭಾವಚಿತ್ರಕ್ಕೆ ಸಗಣಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಮೇಲೆ ರಾಷ್ಟ್ರ ದ್ರೋಹದ ಕಾಯ್ದೆಯಡಿ ಕೇಸ್ ದಾಖಲಿಸಬೇಕು ಎಂದು ಶಾಸಕ ಎನ್.ಮಹೇಶ್ ಒತ್ತಾಯಿಸಿದ್ದಾರೆ. ಈ ಸಂಬಂಧ “ಜನತಾ ರಾಯಭಾರಿ” ಯೊಂದಿಗೆ ಅವರು ಮಾತನಾಡಿ, ಇತ್ತೀಚೆಗೆ ನಡೆದ ಹಲವಾರು ಪ್ರಕರಣಗಳಲ್ಲಿ ಪೊಲೀಸರ ವೈಫಲ್ಯ ಎದ್ದು ಕಾಣುತ್ತಿತ್ತು. ಈ ಪ್ರಕರಣದಲ್ಲಿ ಗ್ರಾಮಸ್ಥರೇ ಆರೋಪಿಯನ್ನು ಬಂಧಿಸಿದ್ದಾರೆ. ಆಗಾಗಿ ಆರೋಪಿಯ ಮೇಲೆ ರಾಷ್ಟ್ರದ್ರೋಹ ಪ್ರಕರಣ ದಾಖಲಿಸಿ ಆತನನ್ನು ಕೂಡಲೇ ಗಡಿಪಾರು ಮಾಡಬೇಕು. ಇಂತಹ ಪ್ರಕರಣಗಳು ಮರುಕಳಿಸಬಾರದು ಎಂದು ತಿಳಿಸಿದರು.
ಹಲವಾರು ರಾಜಕಾರಣಿಗಳು, ಹೋರಾಟಗಾರರ ಭೇಟಿ:
ಮಸಣಾಪುರದಲ್ಲಿ ನಡೆದ ಘಟನೆಯನ್ನು ತಿಳಿಯುತ್ತಿದ್ದಂತೆ ಗ್ರಾಮಕ್ಕೆ ಹಲವಾರು ಹೋರಾಟಗಾರರು, ರಾಜಕಾರಣಿಗಳು ಭೇಟಿ ನೀಡಿ ಕೃತ್ಯವನ್ನು ಖಂಡಿಸಿದರು. ಜೊತೆಗೆ ಗ್ರಾಮಸ್ಥರೊಂದಿಗೆ ನಾವು ಇರುವುದಾಗಿ ಭರವಸೆಯನ್ನು ನೀಡಿದರು. ಜೆಡಿಎಸ್ ಪಕ್ಷದ ಪುಟ್ಟಸ್ವಾಮಿ, ಬಹುಜನ ಸಮಾಜ ಪಕ್ಷದ ಎನ್.ನಾಗಯ್ಯ, ಪುಟ್ಟಸ್ವಾಮಿ ರಾಮಸಮುದ್ರ, ಬ.ಮ.ಕೃಷ್ಣಮೂರ್ತಿ, ಅಂಬೇಡ್ಕರ್ ಮಹಾಸಭಾ ಕಾರ್ಯಾಧ್ಯಕ್ಷ ಸಿ.ಕೆ.ಮಂಜುನಾಥ್, ಮುಖಂಡ ಪ್ರಶಾಂತ್ ನಾಗವಳ್ಳಿ, ವಾಸು ಹೊಂಡರಬಾಳು, ಧರಣೇಂದ್ರ ಮಾತನಾಡಿ, ಆರೋಪಿಯ ಮೇಲೆ ಎಫ್ಐಆರ್ ದಾಖಲು ಮಾಡಬೇಕು. ಆತನಿಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕು ಎಂದು ಆಗ್ರಹಿಸಿದರು. ಕೂಡಲೇ ಆತನನ್ನು ಗಡಿಪಾರು ಮಾಡಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದು, ಪ್ರತಿಭಟನೆ ನಡೆಯುತ್ತಲೇ ಇದೆ.