ನಗರದಲ್ಲಿ ಎಸ್ಐಆರ್ ವಿರೋಧಿ ಜನಜಾಗೃತಿ ಜಾಥಾ

ಮಣಿಕಂಠ ಜನತಾ ರಾಯಭಾರಿ
2 Min Read

ಚಾಮರಾಜನಗರ: ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್ ಐ ಆರ್) ವಿರೋಧಿ ಜಾಗೃತಿ ಜಾಥಾ ಬುಧವಾರ ಬೆಳಿಗ್ಗೆ 11ಗಂಟೆಗೆ ನಂಜನಗೂಡು ಮಾರ್ಗ ಪಟ್ಟಣ ಪ್ರವೇಶಿಸಿ, ಐದು ಕಡೆ ಬೀದಿ ಬದಿ ಜಾಗೃತಿ ಸಭೆಗಳನ್ನು ನಡೆಸಿತು.

ಮೊದಲಿಗೆ ಪಟ್ಟಣದ ಪ್ರವೇಶ ಕಮಾನಿನ ಬಳಿ ಸ್ವಾಗತಿಸಲಾಯಿತು. ರಾಜ್ಯದ ಐದು ಭಾಗಗಳಿಂದ ಹೊರಟು ಇಡೀ ರಾಜ್ಯದಲ್ಲಿ ಜನಜಾಗೃತಿ ಮೂಡಿಸಿ 20ರಂದು ಬೆಂಗಳೂರಿನ ಫ್ರೀಡಮ್ ಪಾರ್ಕ್ ನಲ್ಲಿ ಎಸ್ಐಆರ್ ವಿರೋಧಿ ಬೃಹತ್ ಪ್ರತಿರೋಧ ಸಮಾವೇಶದಲ್ಲಿ ಪಾಲ್ಗೊಳ್ಳುವ ಜಾಥಾಗಳ ಪೈಕಿ ಉಡುಪಿಯಿಂದ ಹೊರಟು, ಕೊಡಗು,ಮೈಸೂರು ಜಿಲ್ಲೆಗಳಲ್ಲಿ ಜಾಗೃತಿ ಮೂಡಿಸಿ ಬಂದ ವಿ.ಎಸ್ . ಶ್ರೀಧರ್ ನೇತೃತ್ವದ ಜಾಥಾ ಇಲ್ಲಿಗೆ ಆಗಮಿಸಿತು. ಮೊದಲಿಗೆ ಶ್ರೀ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗ ಕ್ರಾಂತಿ ಗೀತೆ ಹಾಡಿ, ಎಸ್ಐಆರ್ ವಿರುದ್ಧ ಘೋಷಣೆ ಮೊಳಗಿಸಲಾಯಿತು.

ಕೇಂದ್ರ ಬಿಜೆಪಿ ಷಡ್ಯಂತ್ರ: ಪ್ರೋ.ವಿ.ಎಸ್. ಶ್ರೀಧರ್ ಸಭಿಕರನ್ನು ಉದ್ದೇಶಿಸಿ ಮಾತನಾಡಿ,ಈ ಹಿಂದೆ ಚುನಾವಣಾ ಅಯೋಗ ಯಾವುದೇ ಅರ್ಹ ಮತದಾರ ಪಟ್ಟಿಯಿಂದ ಬಿಟ್ಟು ಹೋಗದಂತೆ ಅಭಿಯಾನ ನಡೆಸುತ್ತಿತ್ತು. ಆದರೆ ಈಗಿನ ಕೇಂದ್ರ ಬಿಜೆಪಿ ಸರ್ಕಾರದ ಬಾಲಬಡುಕ ಚುನಾವಣಾ ಅಯೋಗ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕುವ ಷಡ್ಯಂತ್ರ ರೂಪಿಸಿದೆ.ಅದರ ಮುಖ್ಯ ಗುರಿ ಅಲ್ಪಸಂಖ್ಯಾತರು, ಆದಿವಾಸಿಗಳು, ಅಲೆಮಾರಿಗಳು ಮಹಿಳೆಯರು ಹಾಗೂ ಹಿಂದುಳಿದ ವರ್ಗಗಳು. ಎಲ್ಲರ ಬಳಿ ಇರುವ ಆಧಾರ್,ಬಿಪಿಎಲ್ ಕಾರ್ಡು,ಮತದಾರರ ಗುರುತಿನ ಚೀಟಿ ಪೂರಕ ದಾಖಲೆ ಅಲ್ಲ. ಬದಲಿಗೆ ಯಾರ ಬಳಿಯು ಇಲ್ಲದ 11 ದಾಖಲೆಗಳನ್ನು ಒದಗಿಸಲು ಹೇಳಲಾಗಿದೆ ಎಂದರು.

2002 ಮತ್ತು 2025 ರ ಮತದಾರರ ಪಟ್ಟಿಯಲ್ಲಿ ಒಂದೇ ಹೆಸರಿದ್ದು ಹೊಂದಾಣಿಕೆ ಆಗಬೇಕು. ಆನಂತರ ಎನ್ಯೂಮರೆಷನ್ ಫಾರಂ ತುಂಬಿಸಬೇಕು. ಸ್ವಲ್ಪ ವ್ಯತ್ಯಾಸ ಕಂಡು ಬಂದರೂ ಲಾಜಿಕಲ್ ಡಿಸ್ಕ್ರಿಪೆನ್ಸಿ ಎಂಬ ಎಐ ಆಧಾರಿತ ಕಂಪ್ಯೂಟರ್ ಅನುಮಾನಿತ ವ್ಯಕ್ತಿ ಎಂದು ಪಟ್ಟಿಯಿಂದ ಹೊರಗಿಡುತ್ತದೆ. ಈ ರೀತಿ ಬಿಹಾರ್ ಪಶ್ಚಿಮ ಬಂಗಾಳಗಳಲ್ಲಿ ಲಕ್ಷಾಂತರ ಜನರನ್ನು ಮತದಾರರ ಪಟ್ಟಿಯಿಂದ ಹೊರಗೆ ಹಾಕಲಾಗಿದೆ. ಇವರಿಗೆ ಮುಂದಿನ ದಿನಗಳಲ್ಲಿ ಯಾವುದೇ ಸರ್ಕಾರಿ ಸೌಲಭ್ಯಗಳು ಸಿಗುವುದಿಲ್ಲ. ಆದ್ದರಿಂದ ಕಟ್ಟೆಚ್ಚರ ವಹಿಸಿ ನಿಮ್ಮ ಹೆಸರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಜಾಗೃತೆ ವಹಿಸಿ ಎಂದು ಕರೆ ನೀಡಿದರು.

ಉಳಿದಂತೆ ಶ್ರೀ ಭುವನೇಶ್ವರಿ ವೃತ್ತ, ಗುಂಡ್ಲುಪೇಟೆ ವೃತ್ತ, ಟಿಪ್ಪು ವೃತ್ತದಲ್ಲಿ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ  ಉಮೇಶ್, ಸಂಘಟನೆಯ ಕೆ.ವೆಂಕಟರಾಜು, ಎಸ್ಡಿ ಪಿಐ ನ ಅಬ್ರಾರ್ ಅಹಮ್ಮದ್ ಜಾಗೃತಿ ಮೂಡಿಸಿದರು. ಭೀಮಸಮುದ್ರ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಜಾಥಾಗೆ ವಿದಾಯ ಹೇಳಲಾಯಿತು.

ಜಾಥಾದಲ್ಲಿ ಹೇಮಂತ್, ಮಮತಾ, ಸವಿತಾ, ಮಂಜುಳ, ರಮೇಶ್, ಸೋಲಿಗ ಸಂಘದ ಮುತ್ತಯ್ಯ, ಗಿರೀಶ್ ಕುಮಾರ್,  ಪರಿಸರವಾದಿ ಪುಣಜನೂರು ದೊರೆಸ್ವಾಮಿ, ದಲಿತ ಸಂಘಟನೆಗಳ ಸಂಘಸೇನಾ, ಬಂಗಾರಸ್ವಾಮಿ, ಎಸ್ ಡಿಪಿಐನ ಆರೀಫ್, ಇರ್ಫಾನ್ ಖಲೀಲ್,ನಸ್ರುಲ್ಲಾ, ಖಲೀಮುಲ್ಲಾ, ಅಮೀಖ್, ಮಹೇಶ್, ಪುನರ್ಚಿತ್ ಫ್ಯಾಕಲ್ಟಿ ಯ ಡಾ.ವೀರಭದ್ರನಾಯಕ್, ರಾಜೇಶ್ವರಿ, ಸಾಕಮ್ಮ, ಕಾವ್ಯ, ಭಾಗ್ಯ ಚಂದ್ರು, ಮಹೇಂದ್ರ, ಕವಿತಾ,ಮನುಜಪ್ರಿಯ ಭಾಗವಹಿಸಿದ್ದರು.

ಜಾಥಾ ನಾಗವಳ್ಳಿ,ಅಮೃತಭೂಮಿ ಗೆ ಹೋಗಿ ನಾಳೆ ಕೊಳ್ಳೇಗಾಲ, ಮಂಡ್ಯ ಮದ್ದೂರು ಮೂಲಕ ಬೆಂಗಳೂರು ತಲುಪಲಿದೆ.

Share this Article
Leave a comment