ಅಂಬೇಡ್ಕರ್ ಅವರಿಗೆ ಅಪಮಾನ; ಕಠಿಣ ಕ್ರಮಕ್ಕೆ ಡಿಜಿಪಿಗೆ ಮನವಿ 

ಮಣಿಕಂಠ ಜನತಾ ರಾಯಭಾರಿ
2 Min Read

ಚಾಮರಾಜನಗರ: ತಾಲೂಕಿನ ಮಸಣಾಪುರ ಮತ್ತು ಹೊಂಗನೂರು ಗ್ರಾಮಗಳಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಮಹಾನಿರ್ದೇಶಕರಾದ ಡಾ.ಎಂ.ಎ.ಸಲೀಂ ಅವರಿಗೆ ಬಹುಜನ ಸಮಾಜ ಪಕ್ಷದ ವತಿಯಿಂದ ಮನವಿ ಸಲ್ಲಿಸಲಾಯಿತು.

ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಮಸಣಾಪುರ ಮತ್ತು ಹೊಂಗನೂರು ಗ್ರಾಮಗಳಲ್ಲಿ ಪರಮಪೂಜ್ಯ ಬಾಬಾಸಾಹೇಬ್ ಅಂಬೇಡ್ಕರ್ ಅವರ ನಾಮ ಫಲಕಗಳಿಗೆ ಅಪಮಾನ ಮಾಡಿದ ಅಪರಾಧಿಗಳನ್ನು ಹಾಗೂ ಕುಮ್ಮಕ್ಕು ನೀಡಿದ ಕಿಡಿಗೇಡಿಗಳನ್ನು ಪತ್ತೆಹಚ್ಚಿ ಬಂಧಿಸಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಎಚ್ಚರಿಕೆ ತೆಗೆದುಕೊಳ್ಳಬೇಕು. ಜಿಲ್ಲೆಯ ಎಲ್ಲಾ ಸಮುದಾಯಗಳ ನಡುವೆ ಶಾಂತಿ ಮತ್ತು ಸೌಹಾರ್ದತೆ ಕಾಪಾಡಬೇಕು ಎಂದು ಆಗ್ರಹಿಸಲಾಯಿತು.

ರಾಜ್ಯಾದ್ಯಂತ ನಿರಂತರವಾಗಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಫ್ಲೆಕ್ಸ್ ಬೋರ್ಡ್‌ಗಳಿಗೆ ಅಪಮಾನ ಮಾಡುತ್ತಿರುವ ಘಟನೆಗಳು ನಿರಂತರವಾಗಿ ನಡೆಯುತ್ತಿವೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸ್ಥಳೀಯ ಮಟ್ಟದ ಪೊಲೀಸ್ ಅಧಿಕಾರಿಗಳು ವಿಫಲರಾಗುತ್ತಿರುವುದು ಖಂಡನೀಯವಾದ ಸಂಗತಿಯಾಗಿದೆ ಎಂದರು.

ಮಸಣಾಪುರ ಪ್ರಕರಣ ಮಾಸುವ ಮುನ್ನವೇ, ಕೇವಲ 3 ಕಿ.ಮೀ ದೂರದಲ್ಲಿರುವ ಹೊಂಗನೂರು ಎಂಬ ಗ್ರಾಮದಲ್ಲಿ ಜೂ.19 ರಂದು ಮತ್ತೆ ಬಾಬಾಸಾಹೇಬ್ ಅಂಬೇಡ್ಕರ್ ನಾಮಫಲಕಕ್ಕೆ ಅಪಮಾನ ಮಾಡಿರುವ ಘಟನೆ ನಡೆದಿದೆ. ಅಂದರೆ, ಸ್ಥಳೀಯ ಪೊಲೀಸ್ ಅಧಿಕಾರಿಗಳು ಸೂಕ್ತ ಎಚ್ಚರಿಕೆ ವಹಿಸದಿರುವುದರಿಂದ ಘಟನೆ ಮರುಕಳಿಸಲು ಕಾರಣವಾಗಿದೆ. ಇಂತಹ ಘಟನೆಗಳಿಂದ ಸಮಾಜದಲ್ಲಿ ವಿವಿಧ ಸಮುದಾಯಗಳ ನಡುವೆ ಶಾಂತಿ, ಸೌಹಾರ್ದತೆ ಕದಡಿ ಗಲಭೆಗಳಾಗುವ ಸಂಭವ ಹೆಚ್ಚಿದೆ. ಹಾಗಾಗಿ ಇಂತಹ ಘಟನೆಗಳು ಮರುಕಳಿಸುತ್ತಿರುವುದರಿಂದ ಪೊಲೀಸ್ ಇಲಾಖೆಯ ಮೇಲಿರುವ ನಂಬಿಕೆ ಕಳೆದು ಹೋಗುತ್ತಿದೆ ಎಂದು ದೂರಿದರು.

ಇಂತಹ ಘಟನೆಗಳು ಕೇವಲ ಒಬ್ಬ ವ್ಯಕ್ತಿಯಿಂದ ನಡೆಯಲು ಸಾಧ್ಯವಿಲ್ಲ. ಇದರ ಹಿಂದೆ ಸಾಮಾಜಿಕ ಶಾಂತಿಯನ್ನು ಕದಡುವ, ರಾಜಕೀಯ ಲಾಭವನ್ನು ಪಡೆಯುವ ಹುನ್ನಾರ ಕೂಡ ಇರುತ್ತದೆ. ಆದ್ದರಿಂದ ಕೇವಲ ಕೃತ್ಯ ಎಸಗಿದ ಆರೋಪಿಯ ಮೇಲೆ ಮಾತ್ರ ಕ್ರಮ ಕೈಗೊಳ್ಳದೇ ಅವರ ಹಿಂದೆ ಇರುವ ಕಿಡಿಗೇಡಿ ಪಟ್ಟಭದ್ರರನ್ನು ಗುರುತಿಸಿ ಅವರ ಮೇಲೂ ಸಹ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ, ರಾಜ್ಯ ಉಸ್ತುವಾರಿ ಹ.ರಾ.ಮಹೇಶ್, ಎನ್.ನಾಗಯ್ಯ ಹಾಗೂ ಹಲವು ವಕೀಲರು ಹಾಜರಿದ್ದರು.

Share this Article
Leave a comment