ದೇಮಹಳ್ಳಿ ಗ್ರಾಮದ ದಲಿತ ಕಾಲೋನಿಗಳಲ್ಲಿ ಅವ್ಯವಸ್ಥೆ ತಾಂಡವ 

ಮಣಿಕಂಠ ಜನತಾ ರಾಯಭಾರಿ
1 Min Read

ಚಾಮರಾಜನಗರ: ತಾಲೂಕಿನ ದೇಮಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಲಿತ ಕಾಲೋನಿಗಳಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸದೇ ಅವ್ಯವಸ್ಥೆ ತಾಂಡವವಾಡುತ್ತಿದೆ.

ದೇಮಹಳ್ಳಿ ‌ಗ್ರಾಮದಲ್ಲಿ ಸುಮಾರು 100 ಕ್ಕೂ ಹೆಚ್ಚು ದಲಿತ ಕುಟುಂಬದವರು ವಾಸ ಮಾಡುತ್ತಿದ್ದು, 500 ಕ್ಕೂ ಹೆಚ್ಚಿನ ಜನಸಂಖ್ಯೆ ಇದೆ. ಈ ದಲಿತರ ಬಡಾವಣೆಯಲ್ಲಿ ಸೂಕ್ತ ಚರಂಡಿ ವ್ಯವಸ್ಥೆ, ರಸ್ತೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೇ ಸಾರ್ವಜನಿಕರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇನ್ನೂ ದಲಿತರ ಬಡಾವಣೆಯಲ್ಲಿ ಇರುವ ಚರಂಡಿಗಳು ಚರಂಡಿಗಳನ್ನು ಸ್ವಚ್ಛಗೊಳಿಸಿ ಸುಮಾರು ಒಂದು ವರ್ಷವೇ ಕಳೆದಿದ್ದು, ಚರಿಂಡಿ ನೀರು ನಿಂತು ಗಬ್ಬು ನಾರುವಂತಾಗಿದೆ. ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದಾಗಿ ಎಲ್ಲೆಲ್ಲೂ ಅಶುಚಿತ್ವ ತಾಂಡವವಾಡುತ್ತಿದೆ. ಮಹಿಳೆಯರು, ಮಕ್ಕಳು, ಹಿರಿಯ ನಾಗರೀಕರ ಆರೋಗ್ಯದ ಮೇಲೆ ಇದು ದುಷ್ಪರಿಣಾಮವನ್ನು ಬೀರುವ ಸಾಧ್ಯತೆ ಇದೆ.

ಈ ಸಂಬಂಧ ಸ್ಥಳೀಯ ಶಾಸಕರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಆಡಳಿತಾಧಿಕಾರಿಗಳಿಗೂ ಸಾಕಷ್ಟು ಬಾರಿ ಮನವಿ ಮಾಡಿದರೂ ಈವರೆಗೂ ಯಾರು ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿಲ್ಲ ಎಂದು ಗ್ರಾಮಸ್ಥರು “ಜನತಾ ರಾಯಭಾರಿ” ಯೊಂದಿಗೆ ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದರು.

ಜನಪ್ರತಿನಿಧಿಗಳು ಇಲ್ಲದೇ ಸಮಸ್ಯೆ: ಗ್ರಾಮ ಪಂಚಾಯಿತಿಯಲ್ಲಿ ಜನಪ್ರತಿನಿಧಿಗಳು ಇಲ್ಲದೇ ಇರುವುದು ಕೂಡ ಇಂತಹ ಸಮಸ್ಯೆಗಳು ಉದ್ಭವಿಸಲು ಕಾರಣವಾಗಿದೆ. ಸ್ಥಳೀಯ ಜನಪ್ರತಿನಿಧಿಗಳು ಇದ್ದರೇ ಅವರು ಗಮನಕ್ಕೆ ತಂದು ಕೆಲಸ ಕಾರ್ಯಗಳನ್ನು ಮಾಡಬಹುದಿತ್ತು. ಆದರೆ ಅಧಿಕಾರಿಗಳು ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡಲು ಬೇಜವಾಬ್ದಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದರು.

ಕೋಟ್: 

ನಮ್ಮ ಬಡಾವಣೆಯ ಚರಂಡಿಗಳನ್ನು ಸ್ವಚ್ಛಗೊಳಿಸಿ ಒಂದು ವರ್ಷವೇ ಕಳೆದಿದ್ದು, ಇತ್ತೀಚೆಗೆ ತುಂಬಾ ಸಮಸ್ಯೆ ಎದುರಾಗಿದೆ. ಈ ಸಂಬಂಧ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. 

|ಮನು, ನಿವಾಸಿ, ದೇಮಹಳ್ಳಿ 

 

ದೇಮಹಳ್ಳಿ ದಲಿತ ಬಡಾವಣೆಯ ಸಮಸ್ಯೆ ನನ್ನ ಗಮನಕ್ಕೆ ಬಂದಿದೆ. ಆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪೌರಕಾರ್ಮಿಕರು ಇಲ್ಲದೇ ಸಮಸ್ಯೆಯಾಗಿತ್ತು. ಶೀಘ್ರದಲ್ಲೇ ಸಮಸ್ಯೆ ಬಗೆಹರಿಸಲಾಗುವುದು. 

|ಶಶಿಧರ್, ತಾಲೂಕು ಪಂಚಾಯಿತಿ ಇಓ, ಚಾಮರಾಜನಗರ 

 

Share this Article
Leave a comment