ಚಾಮರಾಜನಗರ: ತಾಲೂಕಿನ ಮಸಣಾಪುರ ಮತ್ತು ಹೊಂಗನೂರು ಗ್ರಾಮಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿರುವುದನ್ನು ಖಂಡಿಸಿ ಹಾಗೂ ಇಂತಹ ಪ್ರಕರಣಗಳಲ್ಲಿ ಕಠಿಣ ಕಾನೂನು ಜಾರಿಯಾಗಬೇಕು ಎಂದು ಒತ್ತಾಯಿಸಿ ಜಿಲ್ಲೆಯ ಅಂಬೇಡ್ಕರ್ ಸಂಘಟನೆಗಳ ಒಕ್ಕೂಟ ಜೂ.23 ರಂದು ಕರೆ ನೀಡಿದ್ದ ಪ್ರತಿಭಟನೆಗೂ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದೆ.
ಜಿಲ್ಲೆಯ ಬಲಗೈ ಸಮುದಾಯದ ಗಡಿ ಕಟ್ಟೆ ಯಜಮಾನರು ಮತ್ತು ಡಾ.ಬಿ.ಆರ್ ಅಂಬೇಡ್ಕರ್ ಸಂಘಸಂಸ್ಥೆಗಳ ಒಕ್ಕೂಟ ಚಾಮರಾಜನಗರ ಜಿಲ್ಲೆ ವತಿಯಿಂದ, ಚಾಮರಾಜನಗರ ಜಿಲ್ಲೆಯಾದ್ಯಂತ ಇತ್ತೀಚಿನ ವರ್ಷಗಳಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರಗಳು ಹಾಗೂ ಪ್ರತಿಮೆಗಳಿಗೆ ಅಪಮಾನ ಎಸಗುವ ದುಷ್ಕೃತ್ಯಗಳು ಆಗಾಗ್ಗೆ ನಡೆಯುತ್ತಿವೆ. ಈ ಸಂಬಂಧ ಕೇಂದ್ರ ಸರ್ಕಾರದ ಯು.ಎ.ಪಿ.ಎ ಕಾಯ್ದೆ ಪ್ರಕಾರ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮತ್ತು ರಾಜ್ಯ ಸರ್ಕಾರ ಕಠಿಣ ಶಿಕ್ಷೆ ವಿಧಿಸುವ ನೂತನ ಕಾಯ್ದೆಯೊಂದನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿ ಜೂ.23 ರಂದು ಬೆಳಗ್ಗೆ 10 ಗಂಟೆಗೆ ಚಾಮರಾಜನಗರ ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ಭವನದಿಂದ ಹೊರಟು ಜಿಲ್ಲಾಧಿಕಾರಿ ಕಚೇರಿವರೆಗೆ ಶಾಂತಿಯುತ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ಸಂಬಂಧ ಅನುಮತಿ ನೀಡಬೇಕೆಂದು ಮನವಿ ಸಲ್ಲಿಸಲಾಗಿತ್ತು.

ಆದರೆ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಜೂ.19 ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿ, ಸಭೆಯಲ್ಲಿ ಜಿಲ್ಲೆಯಾದ್ಯಂತ ಇರುವ ಎಲ್ಲಾ ಮಹನೀಯರ ಪ್ರತಿಮೆಗಳು, ಸ್ಮಾರಕಗಳು, ನಾಮಫಲಕಗಳು, ಪ್ಲೇಕ್ಸ್, ಬ್ಯಾನರ್ಸ್ ಗಳಿಗೆ ಸೂಕ್ತ ರಕ್ಷಣೆ ನೀಡಲು ಸೂಕ್ತ ಕಾನೂನು ರಚಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲು ಕ್ರಮವಹಿಸಲಾಗುವುದೆಂದು ತಿಳಿಸಿದ್ದರು. ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಯಾವುದೆ ಪ್ರತಿಭಟನೆಯನ್ನು ನಡೆಸದಂತೆ ಸೂಕ್ತ ಸಲಹೆ ಸೂಚನೆ ನೀಡಿದ್ದರು. ಅದರಂತೆ ಜೂ.23 ರಂದು ಹಮ್ಮಿಕೊಂಡಿರುವ ಪ್ರತಿಭಟನಾ ಮೆರವಣಿಗೆಗೆ ಪೊಲೀಸ್ ಇಲಾಖೆ ಅನುಮತಿಯನ್ನು ನಿರಾಕರಿಸಿದೆ.