ಚಾಮರಾಜನಗರ: ಜಿಲ್ಲಾ ಕೇಂದ್ರದಲ್ಲಿ ನಿರ್ಮಾಣವಾಗಿರುವ ನೂತನ ಗ್ರಂಥಾಲಯ ಬಳಕೆಗೆ ಶೀಘ್ರದಲ್ಲೇ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಎಐಡಿವೈಒ ಸಂಘಟನೆ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಮೀಪದಲ್ಲಿರುವ ಜಿಲ್ಲಾ ಕೇಂದ್ರ ಗ್ರಂಥಾಲಯದ ಹಳೆ ಕಟ್ಟಡದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಕೆಲಕಾಲ ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಡಿಸಿ ಶ್ರೀರೂಪಾ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಐಡಿವೈಒ ಸಂಘಟನೆಯ ವಿದ್ಯಾರ್ಥಿ ನಾಯಕ ಟಿ.ಆರ್.ಸುನಿಲ್ ಮಾತನಾಡಿ, ರಾಜ್ಯಸರ್ಕಾರ ಹೇಳಿದಂತೆ ಈ ಕೂಡಲೇ 56,432 ಹುದ್ದೆಗಳಿಗೆ ಅಧಿಸೂಚನೆಯನ್ನು ಹೊರಡಿಸಬೇಕು. ಉದ್ಯೋಗಾಕಾಂಕ್ಷಿ ಯುವಜನರ ಸತತ ಹೋರಾಟಗಳ ಫಲವಾಗಿ ಕಳೆದ ಡಿಸೆಂಬರ್ ಚಳಿಗಾಲದ ಅಧಿವೇಶನದಲ್ಲಿ 56,432 ಹುದ್ದೆಗಳಿಗೆ ಅನುಮೋದನೆ ನೀಡಿದ್ದು, ಆರು ತಿಂಗಳಾದರೂ ಕೇವಲ ಕೆಲವೇ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ವಿವಿಧ ನೆಪಗಳನ್ನು ನೀಡುತ್ತಾ ನೇಮಕಾತಿ ಪ್ರಕ್ರಿಯೆಯನ್ನು ಮುಂದೂಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರದ ಸಚಿವರು ಅತೀ ಶೀಘ್ರದಲ್ಲಿ ನೇಮಕಾತಿ ಮಾಡುತ್ತೇವೆ ಎಂದು ದಿನಕ್ಕೊಂದು ಹೇಳಿಕೆಗಳನ್ನು ನೀಡುತ್ತಿರುವುದು ಉದ್ಯೋಗಾಕಾಂಕ್ಷಿಗಳಲ್ಲಿ ಭ್ರಮನಿರಸನ ಉಂಟುಮಾಡಿದೆ. ಎಷ್ಟೋ ಉದ್ಯೋಗಾಕಾಂಕ್ಷಿಗಳು ವಯೋಮಿತಿಯನ್ನು ಮೀರುತ್ತಿದ್ದು, ಇದೇ ರೀತಿ ಮುಂದುವರೆದರೆ ಹೋರಾಟಗಳ ಪ್ರತಿಫಲವಾಗಿ ರಾಜ್ಯ ಸರ್ಕಾರವು ನೇಮಕಾತಿಗಳಿಗೆ ನೀಡಿರುವ ಐದು ವರ್ಷಗಳ ವಯೋಮಿತಿ ಸಡಿಲಿಕೆಯು ಉಪಯೋಗಕ್ಕೆ ಬಾರದಂತಾಗುತ್ತದೆ. ಇದರಿಂದ ಉದ್ಯೋಗಾಕಾಂಕ್ಷಿಗಳು ಸರ್ಕಾರದ ಘೋಷಣೆಗಳನ್ನು ನಂಬದೆ, ವಿಶ್ವಾಸ ಕಳೆದುಕೊಂಡು ಮತ್ತೆ ಹೋರಾಟಕ್ಕಿಳಿಯಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯಸರ್ಕಾರ ತಾನು ನುಡಿದಂತೆ 56,432 ಹುದ್ದೆಗಳಿಗೆ ಈ ಕೂಡಲೇ ಅಧಿಸೂಚನೆಯನ್ನು ಹೊರಡಿಸಬೇಕು. ಇತ್ತೀಚೆಗೆ ಪೊಲೀಸ್ ನೇಮಕಾತಿಗೆ ಹೊರಡಿಸಿರುವ ಅಧಿಸೂಚನೆಯಲ್ಲಿ ದುಬಾರಿ ಪರೀಕ್ಷಾ ಶುಲ್ಕವನ್ನು ರೂ.750ಕ್ಕೆ ನಿಗದಿಗೊಳಿಸಲಾಗಿದೆ. ಈ ಮೊದಲು ರೂ. 400 ಮಾತ್ರ ಇತ್ತು. ಏಕಾಏಕಿ ಪರೀಕ್ಷಾ ಶುಲ್ಕವನ್ನು ದುಪ್ಪಟ್ಟುಗೊಳಿಸಲಾಗಿದೆ. ಕಲ್ಯಾಣ ಕರ್ನಾಟಕ ವಿಭಾಗಕ್ಕೆ ಮತ್ತು ರಾಜ್ಯದ ಇತರ ಜಿಲ್ಲೆಗಳ ಹುದ್ದೆಗೆಂದು ಎರಡೂ ಕಡೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವೇ ರೂ.1500 ಆಗುತ್ತದೆ. ಈಗಾಗಲೇ ನಿರುದ್ಯೋಗದಿಂದ ಬಳಲಿರುವ ಯುವಜನರಿಂದ ಅರ್ಜಿ ಶುಲ್ಕದ ಹೆಸರಿನಲ್ಲಿ ಈ ರೀತಿ ಹಣ ವಸೂಲಿ ಮಾಡುವುದು ಯಾವ ರೀತಿಯಿಂದಲೂ ಸೂಕ್ತವಲ್ಲ. ಆದ್ದರಿಂದ ಪೊಲೀಸ್ ನೇಮಕಾತಿ ಅರ್ಜಿ ಶುಲ್ಕವನ್ನು ಸಂಪೂರ್ಣವಾಗಿ ಕೈಬಿಡಬೇಕು ಎಂದು ಒತ್ತಾಯಿಸಿದರು.
ಈ ಮಧ್ಯೆ ಕೆ.ಪಿ.ಎಸ್.ಸಿ. ನಡೆಸಿದ ಕೆಎಎಸ್ ಪರೀಕ್ಷೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿರುವ ಬಗ್ಗೆಯೂ ವರದಿಗಳು ಬಂದಿದ್ದು ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು. ಈ ಹಿಂದೆ ಕೂಡ ಕೆ.ಪಿ.ಎಸ್.ಸಿ. ನಡೆಸಿದ ಹಲವಾರು ನೇಮಕಾತಿ ಪ್ರಕ್ರಿಯೆಗಳಲ್ಲಿ ಭ್ರಷ್ಟಾಚಾರಗಳು ನಡೆದಿವೆ. ಕೆಇಎ ನಡೆಸುವ ಪರೀಕ್ಷೆಗಳಲ್ಲೂ ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟಿ ಪಾರದರ್ಶಕ ನೇಮಕಾತಿಗೆ ಸೂಕ್ತವಾದ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಉದ್ಯೋಗಕಾಂಕ್ಷಿಗಳ ಹೋರಾಟ ಸಮಿತಿಯ ಸಂಚಾಲಕ, ದೇವರಾಜ್, ಮನೋಜ್ ಸದಸ್ಯರುಗಳಾದ ಮಲ್ಲಿಕಾರ್ಜುನ್, ಮೋಹನ್, ಚಂದು, ಜಗದೀಶ್, ಮಹೇಂದ್ರ, ನವೀನ್, ಪ್ರಜ್ವಲ್, ಪ್ರಸಾದ್, ರೋಹಿತ್, ಸುಹಾಸ್, ಸುರೇಶ್, ವಿಜಯ್ ಹಾಗೂ ಇತರರು ಭಾಗವಹಿಸಿದ್ದರು.

ವಿದ್ಯಾರ್ಥಿಗಳಿಂದ ಜಿಲ್ಲಾಧಿಕಾರಿ ಭೇಟಿ: ಪ್ರತಿಭಟನೆಯ ಬಳಿಕ ಚಾಮರಾಜನಗರದ ಉದ್ಯೋಗ ಆಕಾಂಕ್ಷಿಗಳು ಎಐಡಿವೈಒ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮನವಿ ಸ್ವೀಕರಿಸಿ ಜಿಲ್ಲಾಧಿಕಾರಿ ಶ್ರೀ ರೂಪಾ ಮಾತನಾಡಿ, ಶೀಘ್ರದಲ್ಲೇ ಹೊಸ ಗ್ರಂಥಾಲಯದ ಕಟ್ಟಡವನ್ನು ಬಳಕೆಗೆ ಅವಕಾಶ ನೀಡಬೇಕು ರಜಾ ದಿನಗಳಲ್ಲೂ ಗ್ರಂಥಾಲಯ ತೆರೆಯಲು ಗ್ರಂಥಾಲಯದ ನಿರ್ದೇಶಕರಿಗೆ ಕರೆ ಮಾಡಿ ಸೂಚಿಸಿದರು.