ಚಾಮರಾಜನಗರ: ಕನಕಪುರದ ಶ್ರೀ ದೇಗುಲ ಮಠದ ಪೀಠಾಧ್ಯಕ್ಷರಾಗಿದ್ದ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳ ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ನಗರದ ಶ್ರೀ ಸಿದ್ಧಮಲ್ಲೇಶ್ವರ ವಿರಕ್ತ ಮಠದ ಮುಂಭಾಗ ಶ್ರೀಗಳಿಗೆ ಭಕ್ತಿಪೂರ್ವಕವಾಗಿ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಶ್ರೀ ಮಠದ ಮುಂಭಾಗ ಜಿಲ್ಲಾ ಬಸವ ಬಳಗಗಳ ಒಕ್ಕೂಟ, ವೀರಶೈವ ಲಿಂಗಾಯತ ಸಂಘ ಸಂಸ್ಥೆಗಳು, ಕದಳಿ ಮಹಿಳಾ ವೇದಿಕೆ, ಶರಣ ಸಾಹಿತ್ಯ ಪರಿಷತ್ ಸೇರಿದಂತೆ ಅನೇಕ ಬಸವ ಪರ ಸಂಘಟನೆಗಳ ಮುಖಂಡರು ಶ್ರೀಗಳ ಭಾವಚಿತ್ರವಿಟ್ಟು ಪೂಜೆ ಸಲ್ಲಿಸುವ ಜೊತೆಗೆ ಶ್ರೀಗಳಿಗೆ ಭಕ್ತಿ ಪೂರ್ವಕವಾಗಿ ನುಡಿ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬಸವ ಕೇಂದ್ರದ ಅಧ್ಯಕ್ಷರಾದ ಎನ್ ರಿಚ್ ಮಹದೇವಸ್ವಾಮಿ ಮಾತನಾಡಿ, ಸುಮಾರು 700 ವರ್ಷಗಳ ಐತಿಹಾಸಿಕ ಪರಂಪರೆಯನ್ನು ಹೊಂದಿರುವ ದೇಗಲು ಮಠದ ಅಧ್ಯಕ್ಷರಾಗಿದ್ದ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳು ತ್ರಿವಿಧ ದಾಸೋಹದ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಮಠದ ಸೇವೆಯನ್ನು ತಲುಪಿಸಿದ ಮಹಾನ್ ಸಮಾಜಮುಖಿ ಸಂತರು ಎಂದು ಸ್ಮರಿಸಿದರು. ಬಡ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಉಚಿತ ವಸತಿ ಮತ್ತು ಶಿಕ್ಷಣ ಸೌಲಭ್ಯ ಕಲ್ಪಿಸುವ ಮೂಲಕ ಸಾವಿರಾರು ಕುಟುಂಬಗಳ ಬದುಕಿನಲ್ಲಿ ಬೆಳಕು ಮೂಡಿಸಿದವರು. ಅವರ ಜೀವನವು ಸೇವೆ, ಸರಳತೆ ಮತ್ತು ಸಮಾನತೆಯ ಸಂದೇಶದ ಪ್ರತೀಕವಾಗಿತ್ತು ಎಂದು ನುಡಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಕೆ. ರವಿಕುಮಾರ್ ಮಾತನಾಡಿ, ಪೂಜ್ಯಶ್ರೀಗಳು 1943ರ ಮೇ 20ರಂದು ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲೂಕಿನ ಕುರುಬೂರು ಗ್ರಾಮದಲ್ಲಿ ಜನಿಸಿದರು. ಶ್ರೀಗಳು ಬಾಲ್ಯದಿಂದಲೇ ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳಿಗೆ ಬದ್ಧರಾಗಿದ್ದರು. 1970ರಲ್ಲಿ ಮಳವಳ್ಳಿ ತಾಲೂಕಿನ ನೆಲ್ಲಿಗೆರೆ ಮಠದ ಉತ್ತರಾಧಿಕಾರಿಯಾಗಿ ನೇಮಕಗೊಂಡು, 1977ರಲ್ಲಿ ಕನಕಪುರದ ಐತಿಹಾಸಿಕ ಶ್ರೀ ದೇಗುಲ ಮಠದ 11ನೇ ಪೀಠಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಅನ್ನ, ಅಕ್ಷರ ಮತ್ತು ಅರಿವು ದಾಸೋಹದ ಮೂಲಕ ಸಮಾಜದಲ್ಲಿ ಆಧ್ಯಾತ್ಮಿಕ ಜಾಗೃತಿ ಮೂಡಿಸಿದ ಅಪರೂಪದ ಯತಿಗಳಾಗಿದ್ದರು ಎಂದು ಅವರ ಸೇವೆಯನ್ನು ಗುಣಗಾಣ ಮಾಡಿದರು.
ಜಿಲ್ಲಾಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಕೆ. ವೀರಭದ್ರಸ್ವಾಮಿ ಮಾತನಾಡಿ, ದೇಗಲು ಮಠದ ಶ್ರೀಗಳು ಜಾತಿ, ಮತ, ಪಂಥಗಳ ಭೇದವಿಲ್ಲದೆ ಎಲ್ಲರನ್ನು ಸಮಾನವಾಗಿ ಕಾಣುತ್ತಾ ಸಮಾಜದಲ್ಲಿ ಸೌಹಾರ್ದ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಲು ಶ್ರಮಿಸಿದ ಮಹಾನ್ ಸಂತರು.ಅವರ ಅಗಲಿಕೆಯಿಂದ ನಾಡಿನ ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬಸವ ಸಂಸ್ಕೃತಿ ಅಭಿಯಾನದ ಜಿಲ್ಲಾಧ್ಯಕ್ಷ ಕೋಡಿಮೊಳೆ ರಾಜಶೇಖರ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ನಟೇಶ್, ಶಿವಸ್ವಾಮಿ ಹೆಗ್ಗೋಠಾರ, ಮೂಡ್ಲುಪುರ ಮಂಜೇಶ್, ಬಿಸಲವಾಡಿ ಉಮೇಶ್ ಕಾವುದವಾಡಿ ಗುರು ಸ್ಟೈಲ್ ಮಂಜಣ್ಣ, ಅಂಬಳೆ ಚಂದ್ರಪ್ಪ, ಕದಳಿ ಮಹಿಳಾ ವೇದಿಕೆಯ ಜಿಲ್ಲಾಧ್ಯಕ್ಷೆ ವಸಂತಮ್ಮ, ರತ್ನಮ್ಮ ಬಸವರಾಜು, ಎಂ. ಸುಂದರ್, ಬೂದಂಬಳ್ಳಿ ಶಂಕರ್, ಆರ್.ಎಸ್. ಲಿಂಗಸ್ವಾಮಿ, ತೊರವಳ್ಳಿ ಕುಮಾರ್, ಕೋಣನೂರು ಬಸವಣ್ಣ, ಬಸವರಾಜು ಮೊದಲಾದವರು ಇದ್ದರು.