ಚಾಮರಾಜನಗರ: “ನಾನು ಅಪ್ರಾಪ್ತೆಯಾಗಿದ್ದು, ನನಗೆ ಮದುವೆ ಮಾಡಲಾಗುತ್ತಿದೆ” ಎಂದು ಬಾಲಕಿಯೊಬ್ಬಳು ಮಕ್ಕಳ ಸಹಾಯವಾಣಿಗೆ ಕರೆ ಮಾಡಿದ್ದು, ಆಕೆಯನ್ನು ರಕ್ಷಣೆ ಮಾಡಲಾಗಿದೆ.
ಗುಂಡ್ಲುಪೇಟೆ ತಾಲೂಕಿನ ಮಳವಳ್ಳಿ ಗ್ರಾಮದ ಅಪ್ರಾಪ್ತ ಬಾಲಕಿಯನ್ನು, ಶಿವಪುರ ಗ್ರಾಮದ ಯುವಕನೊಬ್ಬನಿಗೆ ಮದುವೆ ಮಾಡಲು ನಿಶ್ಚಯ ಮಾಡಿಕೊಂಡಿದ್ದರು. ಬಾಲಕಿಯು ಏಳು ದಿನಗಳಿಂದ ಯುವಕನ ತೋಟದ ಮನೆಯಲ್ಲಿ ವಾಸವಿದ್ದಳು. ಈ ವೇಳೆ ಬಾಲಕಿ ಮಕ್ಕಳ ಸಹಾಯವಾಣಿ ಕೇಂದ್ರಕ್ಕೆ ಕರೆ ಮಾಡಿ “ನಾನು ಅಪ್ರಾಪ್ತೆ ಆಗಿದ್ದು, ನನಗೆ ಇಲ್ಲಿ ತೊಂದರೆಯಾಗುತ್ತಿದೆ” ಎಂದು ತಿಳಿಸಿರುತ್ತಾರೆ.
ಅದರಂತೆ ತಾಲೂಕಿನ ಶಿವಪುರ ಗ್ರಾಮ ಪಂಚಾಯಿತಿ ಪಿಡಿಒ ಶಿಲ್ಪಾ ಅವರ ದೂರಿನ ಮೇರೆಗೆ ಪೊಲೀಸರು ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಶಿವಪುರ ಗ್ರಾಮದ ತೋಟದ ಮನೆಗೆ ಹೋಗಿ ಪರಿಶೀಲಿಸಿ ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ಅಪ್ರಾಪ್ತ ಬಾಲಕಿಯನ್ನು ಬಾಲ ಮಂದಿರಕ್ಕೆ ಕಳುಹಿಸಿಕೊಡಲಾಗಿದೆ ಎಂದು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಬಾಲ್ಯ ವಿವಾಹ ಇಂದಿಗೂ ಅವ್ಯಾಹತವಾಗಿ ನಡೆಯುತ್ತಿದೆ ಎಂಬುದಕ್ಕೆ ಈ ಪ್ರಕರಣ ಉದಾಹರಣೆಯಾಗಿದ್ದು, ಬಾಲ್ಯ ವಿವಾಹವನ್ನು ನಿಯಂತ್ರಿಸಲು ಹಾಗೂ ಅಪ್ರಾಪ್ತ ಮಕ್ಕಳಿಗೆ ರಕ್ಷಣೆಯನ್ನು ಒದಗಿಸಲು ಮಕ್ಕಳ ಸಹಾಯವಾಣಿ ಅತ್ಯಂತ ಸಹಕಾರಿಯಾಗಿದೆ.