ಮುಂಬೈ: ದೇಶದಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಇಂದು (ಜೂ.28) ನಡೆಯಬೇಕಿದ್ದ ಮಹಾರಾಷ್ಟ್ರ ಶಿಕ್ಷಕರ ಅರ್ಹತಾ ಪರೀಕ್ಷೆ (TET-2026) ಪ್ರಶ್ನೆ ಪತ್ರಿಕೆ ಲೀಕ್ ಆಗಿರುವುದು ದೃಢಪಟ್ಟಿದ್ದು, ಪರೀಕ್ಷೆಯನ್ನು ಮುಂದೂಡಲಾಗಿದೆ.
ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಂಡಿಯ ಡೈಮಂಡ್ ಹೋಟೆಲ್ ಮತ್ತು ಕೊಂಗಾಂವ್ ಪ್ರದೇಶದಲ್ಲಿ ಜೂ.27 ರಂದು ಡಿಸಿಪಿ ಪವನ್ ಬನ್ಸೋಡ್ ನೇತೃತ್ವದ ಭಿವಂಡಿ ಪೊಲೀಸ್ ತಂಡದವರು, ಗೌಪ್ಯ ಮಾಹಿತಿ ಆಧರಿಸಿ ದಾಳಿ ನಡೆಸಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ 3 ಆರೋಪಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳು ಬಿಹಾರ ಮತ್ತು ಹರಿಯಾಣ ಮೂಲದವರಾದ ಧೀರಜ್ ಬಲ್ರಾಜ್ ಸಿಂಗ್ (28 ವರ್ಷ), ರಾಜೀವ್ ಶಾ (45 ವರ್ಷ) ಹಾಗೂ ಆಕಾಶ್ ಕುಮಾರ್ (30 ವರ್ಷ) ಎಂದು ತಿಳಿದುಬಂದಿದೆ.
ಈ ಮೇಲ್ಕಂಡ ಆರೋಪಿಗಳ ಬಳಿ 4 ಸೆಟ್ Maha TET-2026 ಪ್ರಶ್ನೆ ಪತ್ರಿಕೆಗಳು ಪತ್ತೆಯಾಗಿವೆ. ಜೊತೆಗೆ ಮೊಬೈಲ್, ಡೆಬಿಟ್/ಕ್ರೆಡಿಟ್ ಕಾರ್ಡ್, ನಗದು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು MSCE ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ವಶಪಡಿಸಿಕೊಂಡ ಪ್ರಶ್ನೆ ಪತ್ರಿಕೆ ಪರಿಶೀಲಿಸಿದ್ದು, ಆರೋಪಿಗಳ ಬಳಿ ಇದ್ದ ಹಲವು ಪ್ರಶ್ನೆಗಳು ಅಸಲಿ TET ಜೂನ್ 2026 ಪ್ರಶ್ನೆ ಪತ್ರಿಕೆಗೆ ಹೊಂದಿಕೆಯಾಗುತ್ತಿವೆ ಎಂದು ದೃಢಪಟ್ಟಿದೆ. ತಕ್ಷಣ ಭಿವಂಡಿ ಪೊಲೀಸ್ ಠಾಣೆಯಲ್ಲಿ FIR ದಾಖಲು ಮಾಡಲಾಗಿದೆ.
ಆರೋಪಿಗಳು ದೆಹಲಿಯಿಂದ ಪ್ರಶ್ನೆ ಪತ್ರಿಕೆ ತಂದು ₹1.5 ಕೋಟಿಗೆ ಮಾರಾಟ ಮಾಡಲು ಯೋಜಿಸಿದ್ದರು. ಈಗಾಗಲೇ ಮುಂಗಡ ಹಣ ಪಡೆದಿದ್ದರು. ಒಬ್ಬ ಆರೋಪಿ ಈ ಹಿಂದೆ ಕೇಂದ್ರೀಯ ವಿದ್ಯಾಲಯ ನೇಮಕಾತಿ ಪರೀಕ್ಷೆಗೆ ಹಾಜರಾಗಿ ಅನುತ್ತೀರ್ಣನಾಗಿದ್ದ. NEET 2026 ಪರೀಕ್ಷೆಯಲ್ಲಿ ನಡೆದ ಅಕ್ರಮಗಳ ನಂತರ MSCE ಎಲ್ಲಾ ಭದ್ರತಾ ಕ್ರಮ ಕೈಗೊಂಡಿದ್ದರೂ ಲೀಕ್ ಆಗಿದೆ. ಇದು ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.
ಪರೀಕ್ಷೆ ಮುಂದೂಡಿಕೆ:
28 ಜೂನ್ 2026ರಂದು 1,028 ಕೇಂದ್ರಗಳಲ್ಲಿ ನಡೆಯಬೇಕಿದ್ದ ಪರೀಕ್ಷೆಯನ್ನು ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನಲೆಯಲ್ಲಿ ಮುಂದೂಡಲಾಗಿದೆ. ಪರೀಕ್ಷೆಗೆ 6 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಬೇಕಿತ್ತು. ಈ ಸಂಬಂಧ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಥಾಣೆ ಜಂಟಿ ಪೊಲೀಸ್ ಆಯುಕ್ತ ಪಂಜಾಬ್ರಾವ್ ಉಗಲೆ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (SIT) ರಚನೆಗೆ ಆದೇಶಿಸಿದ್ದಾರೆ. ಶಾಲಾ ಶಿಕ್ಷಣ ಸಚಿವ ದಾದಾ ಭೂಸೆ ಮತ್ತು DGP ಸದಾನಂದ್ ದಾಟೆ ಅವರಿಗೆ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಸದ್ಯ DCP ಪವನ್ ಬನ್ಸೋಡ್ ನೇತೃತ್ವದಲ್ಲಿ 2 ACP, 9 ಇನ್ಸ್ಪೆಕ್ಟರ್ ಸೇರಿ 20 ಸದಸ್ಯರ SIT ತಂಡ ಮಹಾರಾಷ್ಟ್ರ ಮತ್ತು ಇತರೆ ರಾಜ್ಯಗಳಲ್ಲಿ ದಾಳಿ ಮುಂದುವರಿಸಿದೆ.