ಚಾಮರಾಜನಗರ: ಮೈಸೂರು ವಿಶ್ವವಿದ್ಯಾನಿಲಯದ ಮುಂಭಾಗ ನಡೆಯುತ್ತಿರುವ ವಿದ್ಯಾರ್ಥಿಗಳ ಶಿಷ್ಯವೇತನ ಹೋರಾಟದ ಕುರಿತು ಸಂಸದ ಸುನೀಲ್ ಬೋಸ್ ಅವರು ನೀಡಿರುವ ಹೇಳಿಕೆ ಅತ್ಯಂತ ಅಪ್ರಬುದ್ಧತೆಯಿಂದ ಕೂಡಿದೆ ಎಂದು ಬಿಜೆಪಿ ಚಾಮರಾಜನಗರ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಡಾ.ನವೀನ್ ಮೌರ್ಯ ಕಿಡಿಕಾರಿದ್ದಾರೆ.
ಸುನೀಲ್ ಬೋಸ್ ಅವರು ಆಯ್ಕೆಯಾಗಿರುವುದು ಮೀಸಲು ಕ್ಷೇತ್ರವಾದ್ದರಿಂದ, ಅವರ ಮೊದಲ ಕರ್ತವ್ಯ ಶೋಷಿತರ ಧ್ವನಿಯಾಗುವುದು ಹಾಗೂ ಅವರ ಹಿತವನ್ನು ಕಾಪಾಡುವುದಾಗಿದೆ. ಇಂದು ಪ್ರತಿಭಟನೆಯಲ್ಲಿ ಭಾಗವಹಿಸಿರುವವರಲ್ಲಿ ಹೆಚ್ಚಿನವರು ಮೊದಲ ತಲೆಮಾರಿನ ವಿದ್ಯಾರ್ಥಿಗಳು. ಅವರ ಉನ್ನತ ಶಿಕ್ಷಣಕ್ಕಾಗಿ ಬೀದಿಯಲ್ಲಿ ನಿಲ್ಲುವ ಪರಿಸ್ಥಿತಿಯನ್ನು ನಿರ್ಮಿಸಿರುವ ನಿಮ್ಮ ಸರ್ಕಾರದ ವ್ಯವಸ್ಥೆಗೂ, ಅದನ್ನು ಸಮರ್ಥಿಸುವ ನಿಮ್ಮ ಅಸಹಾಯಕ ಮಾತುಗಳಿಗೂ ನನ್ನ ತೀವ್ರ ಧಿಕ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಶ್ವವಿದ್ಯಾನಿಲಯದಲ್ಲಿ ನಿಮಗೆ ಸಂಬಂಧಪಟ್ಟವರು ಇದ್ದಾರೆ ಎಂದು ಅವರ ಮಾತನ್ನು ಮಾತ್ರ ಕೇಳುವ ಬದಲು, ನೀವು ಪ್ರತಿನಿಧಿಸುತ್ತಿರುವ ಸಮುದಾಯದ ಮಕ್ಕಳು ಬೀದಿಗೆ ಇಳಿದಿರುವುದನ್ನು ಮಾನವೀಯ ಮನಸ್ಸಿನಿಂದ ನೋಡಬೇಕು. ಎಸ್ಸಿಪಿ/ಟಿಎಸ್ಪಿ (SCP/TSP) ಯೋಜನೆಯ ಸುಮಾರು ₹40,000 ಕೋಟಿ ಹಣವನ್ನು ಅಕ್ರಮವಾಗಿ ವಿವಿಧ ಭಾಗ್ಯ ಯೋಜನೆಗಳಿಗೆ ವರ್ಗಾಯಿಸಿದಾಗ ಮೌನವಾಗಿದ್ದ ನೀವು, ಇಂದು ನಿಮ್ಮ ಗೆಲುವಿಗೆ ಹಾಗೂ ನಿಮ್ಮ ತಂದೆಯ ಗೆಲುವಿಗೆ ಶ್ರಮಿಸಿ ಮತ ಹಾಕಿದವರ ಹಕ್ಕುಗಳ ಪ್ರಶ್ನೆ ಬಂದಾಗ ಇಂತಹ ಅಸಡ್ಡೆಯ ಮಾತುಗಳನ್ನು ಆಡುತ್ತಿರುವುದು ಬೇಸರದ ಸಂಗತಿ. ನಿಮ್ಮ ಈ ನಿಲುವುಗಳು ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೋರಾಟದ ಆಶಯಗಳಿಗೆ ವಿರುದ್ಧವಾಗದಿರಲಿ ಎಂದು ಹೇಳಿದ್ದಾರೆ.
ಅದಾಗ್ಯೂ, ನಿಮಗೆ ವಿಶ್ವವಿದ್ಯಾನಿಲಯದ ಮೇಲೆ ನಿಜವಾದ ಕಾಳಜಿ ಇದ್ದರೆ, ನೂರು ವರ್ಷಗಳ ಇತಿಹಾಸ ಹೊಂದಿರುವ ಈ ವಿಶ್ವವಿದ್ಯಾನಿಲಯಕ್ಕೆ ಅಗತ್ಯ ಅನುದಾನವನ್ನು ದೊರಕಿಸಿಕೊಡಿ. ಇಲ್ಲವೇ, ಎಸ್ಸಿಪಿ/ಟಿಎಸ್ಪಿ ಅನುದಾನದಲ್ಲಿ ಕನಿಷ್ಠ ₹100 ಕೋಟಿಯನ್ನು ಪರಿಶಿಷ್ಟರ ಅಭಿವೃದ್ಧಿಗಾಗಿ ವಿಶ್ವವಿದ್ಯಾನಿಲಯಗಳಲ್ಲಿ ಸ್ಥಿರ ಠೇವಣಿಯಾಗಿ (Fixed Deposit) ಇರಿಸಿ, ಅದರಿಂದ ಬರುವ ಬಡ್ಡಿಯಿಂದ ಪ್ರತಿಯೊಬ್ಬ ಅರ್ಹ ವಿದ್ಯಾರ್ಥಿಗೂ ಶಿಷ್ಯವೇತನ ದೊರೆಯುವಂತಹ ದೂರದೃಷ್ಟಿಯ ಯೋಜನೆಗಳನ್ನು ರೂಪಿಸಿ, ಕಾರ್ಯಪ್ರವೃತ್ತರಾಗಿ ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದರು.