ಚಾಮರಾಜನಗರ: ಮಳವಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಯುವ ಮುಖಂಡ, ಉದ್ಯಮಿ ಎಸ್.ಎಸ್.ಜಿ ಪರಶಿವಮೂರ್ತಿ ಅವರು ಆಗ್ರಹಿಸಿದ್ದಾರೆ.
ಶಾಸಕ ನರೇಂದ್ರಸ್ವಾಮಿ ಅವರು ಮೂರು ಬಾರಿ ಮಳವಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ಒಮ್ಮೆ ಸಚಿವರಾಗಿಯೂ ಆಡಳಿತ ನಡೆಸಿದ ಅನುಭವವಿದೆ. ಶಾಸಕರಾಗಿಯೂ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡಿದರೆ ಇನ್ನಷ್ಟು ಹೆಚ್ಚಿನ ಅಭಿವೃದ್ಧಿ ಹಾಗೂ ಪಕ್ಷ ಸಂಘಟನೆಗೆ ಬೆಂಬಲ ನೀಡಿದಂತಾಗುತ್ತದೆ ಎಂದು ಒತ್ತಾಯಿಸಿದ್ದಾರೆ.
ನರೇಂದ್ರಸ್ವಾಮಿ ಅವರು ದಲಿತ ಸಮುದಾಯದ ವಿಚಾರಗಳು ಬಂದಾಗ ನಿಷ್ಠುರವಾಗಿ ಮಾತನಾಡಿದ್ದಾರೆ. ರಾಜ್ಯದಲ್ಲಿ ದಲಿತರಿಗೆ ಅನ್ಯಾಯವಾದಾಗ ಅದನ್ನು ಪ್ರಶ್ನಿಸುವುದರಲ್ಲಿ ನರೇಂದ್ರಸ್ವಾಮಿ ಅವರು ಮೊದಲಿಗರಾಗಿದ್ದಾರೆ. ಅವರಿಗೆ ಸಚಿವ ಸ್ಥಾನವನ್ನು ನೀಡಿದರೇ, ದಲಿತ ಸಮುದಾಯದ ಶ್ರೇಯೋಭಿವೃದ್ಧಿಗೆ ಸಹಕಾರಿಯಾಗುತ್ತದೆ. ದಲಿತ ಸಮುದಾಯದ ಜನರು ಕೂಡ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲವಾಗಿ ನಿಲ್ಲಲಿದ್ದಾರೆ ಎಂದು ಒತ್ತಾಯಿಸಿದರು.
2013ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಲೇ ಪಿ.ಎಂ.ನರೇಂದ್ರಸ್ವಾಮಿ ಅವರಿಗೆ ಸಚಿವ ಸ್ಥಾನ ಸಿಗಬೇಕಿತ್ತು. ಆದರೆ, ದಲಿತ ಕೋಟಾದಲ್ಲಿ ಅವರಿಗೆ ಸಿಗಲಿಲ್ಲ. 2023ರಲ್ಲಿ ಮತ್ತೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗಲೂ ನಿರೀಕ್ಷೆ ಹುಸಿಯಾಯಿತು. ಈಗ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿದ್ದಾರೆ. ಎಲ್ಲರೊಂದಿಗೂ ಉತ್ತಮ ಒಡನಾಟವಿಟ್ಟುಕೊಂಡು, ಆಡಳಿತದ ಅನುಭವವನ್ನು ಹೊಂದಿರುವ ನರೇಂದ್ರಸ್ವಾಮಿ ಅವರಿಗೆ ಮಂತ್ರಿಸ್ಥಾನ ದೊರಕಿಸಿಕೊಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.