ಅಖಂಡ ಮೈಸೂರಿಗೆ ಶ್ರಮಿಸಿದ ನಾಲ್ವಡಿ: ಎಸ್‌ಬಿಎಂ ಮಂಜು  

ಮಣಿಕಂಠ ಜನತಾ ರಾಯಭಾರಿ
1 Min Read

ಮೈಸೂರು: ಮೈಸೂರಿನ ಅಖಂಡ ಅಭಿವೃದ್ದಿಗೆ ಶ್ರಮಿಸಿದ ಮಹಾಚೇತನ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದು ಜೆಡಿಎಸ್ ನಗರಾಧ್ಯಕ್ಷ ಎಸ್‌ಬಿಎಂ ಮಂಜು ತಿಳಿಸಿದರು.

ಲಯನ್ಸ್ ಕ್ಲಬ್ ಆಫ್ ಮೈಸೂರು ಪರಿವರ್ತನ ವತಿಯಿಂದ ಗೋಕುಲಂ ಬಯಲು ರಂಗಮಂದಿರದಲ್ಲಿ ಆಯೋಜಿಸಿದ್ದ ಗಾನಯಾನ-೧೧, ನಾಲ್ವಡಿ-ಎಸ್‌ಪಿಬಿ ಹುಟ್ಟುಹಬ್ಬ-ಹಾಡುಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಾಲ್ವಡಿಯವರು ಕೃಷಿ, ನೀರಾವರಿ, ಆಸ್ಪತ್ರೆ ಮಾತ್ರವಲ್ಲದೆ ಸಹಕಾರ ಕ್ಷೇತ್ರಕ್ಕೂ ಅಪಾರವಾದ ಕೊಡುಗೆ ನೀಡಿದ್ದಾರೆ. ನಾಲ್ವಡಿಯವರ ಶ್ರಮದಿಂದ ಇಂದು ಇಡೀ ಕರ್ನಾಟಕ ಮಾತ್ರವಲ್ಲ ಇತರೆ ರಾಜ್ಯಗಳೂ ಸಹ ನೀರು ಕುಡಿಯುತ್ತಿವೆ. ಅವರು ದೂರದೃಷ್ಟಿ ಹೊಂದಿದ್ದ ಮಹಾರಾಜ. ಅವರಿಗೆ ತಾಯಿ ಕೆಂಪುನಂಜಮ್ಮಣ್ಣಿಯವರು ಬೆನ್ನೆಲುಬಾಗಿದ್ದರು ಎಂದರು.

ಲಯನ್ಸ್ ಕ್ಲಬ್ ಮಾಜಿ ಜಿಲ್ಲಾ ರಾಜ್ಯಪಾಲ ಕೆ.ದೇವೇಗೌಡ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜನರು ಸಿನಿಮಾ ನಟ-ನಟಿಯರನ್ನು ಇಷ್ಟಪಡುವಷ್ಟು ನಮ್ಮ ಜೀವನವನ್ನು ರೂಪಿಸಿದ ಮಹಾನ್ ವ್ಯಕ್ತಿಗಳ ಬಗ್ಗೆ ತಿಳಿದುಕೊಳ್ಳಲು ಇಚ್ಚಿಸುತ್ತಿಲ್ಲ. ನಾವು ಎಂದಿಗೂ ನಮ್ಮ ಬದುಕನ್ನು ಕಟ್ಟಿಕೊಳ್ಳಲು ಕಾರಣಕರ್ತರಾದ ಮಹನೀಯರನ್ನು ಸ್ಮರಿಸಬೇಕು ಎಂದು ಹೇಳಿದರು.

ಸಾಮಾಜಿಕ ಹೋರಾಟಗಾರ ಅಹಿಂದ ಜವರಪ್ಪ ಮಾತನಾಡಿ, ಇಂದು ನಾಡಿನಾದ್ಯಂತ ನಾಲ್ವಡಿಯವರ ಸಾಧನೆಗಳನ್ನು ನೆನಪು ಮಾಡಿಕೊಳ್ಳಲಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ಮೇರು ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯ ಅವರ ಜನ್ಮದಿನವನ್ನು ಆಚರಿಸುತ್ತಿರುವುದು ಬಹಳ ವಿಶೇಷವಾದುದು. ತಮ್ಮ ಕಂಠಸಿರಿಯ ಮೂಲಕ ಜಗತ್ತಿನ ಜನರ ಮನಸನ್ನು ಹೊಕ್ಕಿರುವ ಅವರ ಸಾಧನೆ ಅಪಾರವಾದುದು. ಅವರನ್ನು ಈ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳುತ್ತಿರುವುದು ಔಚಿತ್ಯಪೂರ್ಣವಾದುದು ಎಂದು ತಿಳಿಸಿದರು.

ಲಯನ್ಸ್ ಕ್ಲಬ್ ಆಫ್ ಮೈಸೂರು ಪರಿವರ್ತನ ಅಧ್ಯಕ್ಷ ಡಾ.ಕೃಷ್ಣಮೂರ್ತಿ ಚಮರಂ, ಕಾರ್ಯದರ್ಶಿ ಸತೀಶ್ ಹೆಗ್ಗೂರು, ಖಜಾಂಚಿ ಸವಿತ ಎಸ್.ಗೌಡ, ಉಮಾಶಂಕರ್ ಪಿ, ಕವಿ ಮಹೇಶ್ ಇರಸವಾಡಿ ಮುಂತಾದವರಿದ್ದರು.

ಗಾಯಕರಾದ ಆರ್.ಮಹೇಂದ್ರ, ಆರ್.ರವಿಕುಮಾರ್, ಡಾ.ಕೃಷ್ಣಮೂರ್ತಿ ಚಮರಂ, ಗಾನಾ ಸುಮಾ ಪಟ್ಟಸೋಮಹಳ್ಳಿ, ಸರ್ವಮಂಗಳ, ಜಾಯ್ಸ್ ವಿಶಾಖ್, ಕ್ಯಾತಾಯಿನಿ ಎಚ್.ಎಸ್, ಶ್ರೀಕಂಠ ಎಸ್‌ಬಿಪಿ ಅವರ ಗೀತೆಗಳನ್ನು ಹಾಡಿ ರಂಜಿಸಿದರು.

Share this Article
Leave a comment