ಬೆಂಗಳೂರು: ಆರ್.ಎಸ್.ಎಸ್ ದಾಖಲೆ ಕೊಡದಿದ್ದರೆ, ಕಾನೂನು ಇದೆ. ಆ ಕಾನೂನು ಚೌಕಟ್ಟು ಮೀರಲು ನಾವು ಬಿಡುವುದಿಲ್ಲ ಎಂದು ಹೇಳುವ ಮೂಲಕ ಗೃಹ ಸಚಿವ ಪ್ರಿಯಾಂಕ ಖರ್ಗೆ ಅವರು ಆರ್.ಎಸ್.ಎಸ್ ವಿರುದ್ಧ ಕಾನೂನು ಸಮರ ನಡೆಸುವ ಸುಳಿವು ನೀಡಿದ್ದಾರೆ.
ನಗರದಲ್ಲಿ ಮಂಗಳವಾರ ಆರ್ಎಸ್ಎಸ್ ಬಗ್ಗೆ ಸಂಸದ ರಮೇಶ್ ಜಿಗಜಿಗಣಿ ಆಡಿಯೋ ವಿಚಾರದ ಬಗ್ಗೆ ಸುದ್ದಿಗಾರರ ಜೊತೆಗೆ ಮಾತನಾಡಿ, ದಾಖಲೆಗಳನ್ನು ಯಾರೋ ಸರಸಂಚಾಲಕ ಅಥವಾ ಇನ್ಯಾರೋ ಕಾರ್ಯಕರ್ತರ ಮನೆಯಲ್ಲಿ ಇಟ್ಟಿರುತ್ತಾರೆ. ತರುತ್ತಾರೆ ಅಥವಾ ಸೃಷ್ಟಿ ಮಾಡಿಸಬೇಕಲ್ಲವೇ? ಅದಕ್ಕೆ ಸಮಯ ಕೊಡೋಣ. ಅವರು ದಾಖಲೆ ಕೊಡದಿದ್ದರೆ ಕಾನೂನು ಇದೆ. ಅವರು ಕಾನೂನು ಚೌಕಟ್ಟು ಮೀರಲು ನಾನು ಬಿಡುವುದಿಲ್ಲ. ಅವರ ಬಳಿ ದಾಖಲೆ ಇದ್ದಿದ್ದರೆ ನನ್ನ ಮುಖಕ್ಕೆ ಎಸೆಯುತ್ತಿದ್ದರು ಎಂದು ಹೇಳಿದರು.
ಕಾನೂನಾತ್ಮಕ ಪ್ರಶ್ನೆ ಕೇಳಿದ್ದಕ್ಕೆ ಬಿಜೆಪಿ ನಾಯಕರು ಬೆದರಿಕೆ ಹಾಕುತ್ತಿದ್ದಾರೆ. ಆರ್.ಎಸ್.ಎಸ್ ಬೆಂಬಲಿಗರು ಗೃಹ ಸಚಿವ ಆಗಿರುವ ನನಗೇ ಬೆದರಿಕೆ ಹಾಕುತ್ತಾರೆ. ಅದು ಯಾವ ಮಟ್ಟಕ್ಕೆ ಬೇರು ಬಿಟ್ಟಿದೆ ಅಂತ ಇದರಿಂದಲೇ ನಾವೆಲ್ಲ ಅರ್ಥ ಮಾಡಿಕೊಳ್ಳಬೇಕು ಎಂದು ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.

ನಾನು ಗೃಹ ಸಚಿವ ಆಗಿಲ್ಲದಿದ್ದಾಗಲೇ ಹೆದರಿಲ್ಲ. ಅಷ್ಟಕ್ಕೂ ಬೆದರಿಕೆ ಹಾಕುತ್ತಿರುವುದು ಇದೇ ಮೊದಲಲ್ಲ. ಇಂತಹ ಬೆದರಿಕೆಗಳಿಗೆ ಹೆದರುವುದೂ ಇಲ್ಲ. ಈ ಹಿಂದೆ ಬೆದರಿಕೆ ಹಾಕಿದ್ದ ಹುಡುಗ ಅರೆಸ್ಟ್ ಆದ. ಆಗ ಅವರ ತಾಯಿ ಮನವಿ ಮಾಡಿದ್ದಕ್ಕೆ ಸುಮ್ಮನಾದೆ. ತಾಯಿಯ ಕಣ್ಣೀರ ಕಥೆ ಕೇಳಿ ಸುಮ್ಮನಾದೆ. ಇಲ್ಲವಾದರೆ ಕಾನೂನು ಮೂಲಕ ಹೋರಾಟ ಮಾಡುತ್ತಿದ್ದೆ. ಆರ್.ಎಸ್.ಎಸ್ ಪರ ನಿಲ್ಲುವವರು ಜೈಲಿಗೆ ಹೋದಾಗ, ಒಬ್ಬ ವಕೀಲರನ್ನೂ ಅವರ ಪರ ವಾದಕ್ಕೆ ಆರ್.ಎಸ್.ಎಸ್ ನೇಮಿಸುವುದಿಲ್ಲ ಎಂದು ಟೀಕಿಸಿದರು.
ಒಟ್ಟಾರೆ ಆರ್.ಎಸ್.ಎಸ್ ಗೆ ಯಾರೂ ಪ್ರಶ್ನೆ ಮಾಡಬಾರದು, ಮನುಸ್ಮೃತಿ, ಚಾತುರ್ವರ್ಣದಲ್ಲಿ ಅವರಿಗೆ ನಂಬಿಕೆ, ಬಿಜೆಪಿಯಲ್ಲಿ ದಲಿತರು ಆಳು ಮಕ್ಕಳಾಗಿದ್ದಾರೆ. ಛಲವಾದಿ ನಾರಾಯಣಸ್ವಾಮಿ ಅವರು ವಿಪಕ್ಷ ನಾಯಕನ ಸ್ಥಾನ ಪಡೆಯಲು ಬುಟ್ಟಿಯಲ್ಲಿ ಆರ್.ಎಸ್.ಎಸ್ ನವರ ಚಡ್ಡಿಗಳನ್ನು ಹೊತ್ತರು. ಅಲ್ಲಿ ಆಳು ಮನಃಸ್ಥಿತಿ ಇದೆ. ಈ ದೇಶಕ್ಕೂ ಸಮಾಜಕ್ಕೂ ಆರೆಸ್ಸೆಸ್ ಅಗತ್ಯವೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಮೇಲ್ನೋಟಕ್ಕೆ ಅದು ಜಿಗಜಿಣಗಿ ಅವರ ಧ್ವನಿ ತರಹ ಕಾಣಿಸುತ್ತಿದೆ. ಜಿಗಜಿಣಗಿ ಅವರು ಯಾಕೆ ಹೀಗೆ ಮಾತನಾಡಿದ್ದಾರೋ ಗೊತ್ತಿಲ್ಲ. ಅವರು ಹೇಳಿರುವುದನ್ನು ನೋಡಿದರೆ ಆರ್.ಎಸ್.ಎಸ್ ನಿಂದ ನಾವೆಲ್ಲ ಹೆದರಬೇಕು. ಆರ್.ಎಸ್.ಎಸ್ ನವರು ಯಾವ ಹಂತಕ್ಕೆ ಬೇಕಾದರೂ ಹೋಗುತ್ತಾರೆ ಅಂತ ಹೇಳಿದ್ದಾರೆ. ಅವಾಚ್ಯ ಶಬ್ದಗಳಲ್ಲಿ ಆರ್ಎಸ್ಎಸ್ಗೆ ಬೈದಿದ್ದಾರೆ. ಅದರ ಬಗ್ಗೆ ಅವರು ಬಿಜೆಪಿಗೆ ಸ್ಪಷ್ಟೀಕರಣ ಕೊಡಲಿ ಎಂದು ಹೇಳಿದರು.