ಗುಂಡ್ಲುಪೇಟೆ: ಬಸವಣ್ಣನವರು ಕಾಯಕವೇ ಕೈಲಾಸ ಎಂಬ ಮಹಾಮಂತ್ರ ನೀಡಿದರು, ಅದರ ಅನುಷ್ಠಾನ ಮಾಡಿದವರು ಕೃಷಿಕರು; ಪರಿಣಾಮವಾಗಿ ಕೃಷಿ ಕಾಮಧೇನುವಾಯಿತು. ಕೃಷಿಕರು ಗ್ರಾಮಗಳನ್ನು ಕಟ್ಟಿ ಬೆಳೆಸಿದರು, ಕೃಷಿ ಅವಲಂಭಿಸಿಕೊಂಡು ಉಳಿದಂತಹ ಕಾಯಕ ಸಮಾಜಗಳು ಬೆಳೆದು ನಾಡಿಗೆ ಬೆಳಕಾದರು ಎಂದು ಮೂಡುಗೂರಿನ ವಿರಕ್ತಮಠದ ಇಮ್ಮಡಿ ಉದ್ದಾನ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಮೂಡುಗೂರು ಗ್ರಾಮದಲ್ಲಿ ಆಯೋಜಿಸಿದ್ದ “ತಿಂಗಳ ಬೆಳಕು” ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀಗಳು ಮಾತನಾಡಿದರು. ಪ್ರಸ್ತುತ ಬೆರಟಹಳ್ಳಿ ಗ್ರಾಮ ತಮ್ಮ ಮೂಲ ಗುಣಗಳನ್ನು ಉಳಿಸಿಕೊಂಡಿರುವುದಕ್ಕೆ ಕಾರಣ, ಪೂಜ್ಯ ಸಿದ್ಧಮಲ್ಲಿಕಾರ್ಜುನ ಸ್ವಾಮಿಗಳು ಇಲ್ಲಿ ಸ್ಥಾಪಿಸಿದ ಬಿಕ್ಷದ ಮಠ ಹಾಗೂ ಇಲ್ಲಿ ಕಾಯಕ ನಡೆಸಿದ ಸ್ವಾಮಿಗಳ ಸಮಾಜ ಸೇವಾ ಕಾಯಕದ ಫಲವಾಗಿದೆ ಎಂದರು.
ಅಗಸ್ಟ್ ೨೫-೨೬ ರಂದು ಮೂಡಗೂರಿನಲ್ಲಿ ಲೋಕಾರ್ಪಣೆಗೊಳ್ಳುತ್ತಿರುವ “ಚಿನ್ಮಯ ಜ್ಞಾನಿ” ಚೆನ್ನಬಸವಣ್ಣನವರ ದಾಸೋಹ ಭವನದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ನಮ್ಮ ಗ್ರಾಮ ಸಂಪೂರ್ಣವಾಗಿ ಬದ್ಧವಾಗಿದೆ. ಎಲ್ಲಾ ರೀತಿಯ ಸಹಕಾರಕ್ಕೂ ನಾವು ಸಿದ್ಧ ಎಂದು ಗ್ರಾಮದ ಪ್ರಮುಖರಾದ ಶಿವರಾಮಪ್ಪ ಹಾಗೂ ವಿರೂಪಾಕ್ಷಪ್ಪ ಘೋಷಿಸಿದರು. ಗ್ರಾಮಸ್ಥರು ಒಕ್ಕೊರಲಿನಿಂದ ಅನುಮೋದಿಸಿದರು.
ಮೂಲಗುರುಗಳಾದ ಉದ್ದಾನ ಸ್ವಾಮಿಗಳ ಗದ್ದುಗೆ ನಿರ್ಮಾಣದ ಕಾರ್ಯದಲ್ಲಿ ಸ್ವಪ್ರೇರಣೆಯಿಂದ ಪಾಲ್ಗೊಂಡ ಹತ್ತಾರು ಗ್ರಾಮಗಳೊಂದಿಗೆ ನಮ್ಮ ಗ್ರಾಮವೂ ಭಾಗವಹಿಸಿತ್ತು. ಈಗಿರುವ ಸ್ವಾಮಿಗಳ ಪಟ್ಟಾಧಿಕಾರದಲ್ಲೂ ಸಂಭ್ರಮದಿಂದ ಭಾಗವಹಿಸಿದ್ದನ್ನು ಗ್ರಾಮಸ್ಥರು ನೆನಸಿಕೊಂಡರು.
ಮಾಸಿಕ ಸಭೆಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಶೈಲಕುಮಾರ್ ಎಂ. ಹೂರದಹಳ್ಳಿಯ ಪಟೇಲರು, ಹೆಚ್ಎಂ.ಪ್ರಸಾದ್, ಮೂಡಗೂರಿನ ಗೌಡಿಕೆ ಮಲ್ಲಣ್ಣ, ಮಹದೇವಸ್ವಾಮಿ ಕುಲಗಾಣ ಭಾಗವಹಿಸಿದ್ದರು.