ಚಾಮರಾಜನಗರ: ಜಿಲ್ಲೆಯಲ್ಲಿ ಪ್ರಸಿದ್ಧ ಯಾತ್ರಾಸ್ಥಳ ಮಲೆ ಮಹದೇಶ್ವರ ಬೆಟ್ಟ ಪ್ರದೇಶದಲ್ಲಿ ಚಿರತೆ ದಾಳಿಗೆ ಬಾಲಕ ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿ ಉಪ ಲೋಕಾಯುಕ್ತ ಕೆ.ಎನ್. ಫಣೀಂದ್ರ ಅವರು ಪತ್ರಿಕಾ ವರದಿಗಳನ್ನು ಆಧರಿಸಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ಪಾದಯಾತ್ರೆ ಮೂಲಕ ತೆರಳಿದ್ದ ಭಕ್ತರ ಮೇಲೆ ಇತ್ತೀಚೆಗೆ ಚಿರತೆಯೊಂದು ದಾಳಿ ನಡೆಸಿ ಬೆಂಗಳೂರು ಮೂಲದ ಬಾಲಕ ಮೃತಪಟ್ಟಿದ್ದನು. ಈ ಸಂಬಂಧ ಪತ್ರಿಕಾ ವರದಿಗಳನ್ನು ಆಧರಿಸಿ ಪ್ರಕರಣ ಸಂಬಂಧ ಮರುಕ ವ್ಯಕ್ತಪಡಿಸಿರುವ ಉಪ ಲೋಕಾಯುಕ್ತ ಕೆ.ಎನ್.ಫಣೀಂದ್ರ ಅವರು ಕಾವೇರಿ ವನ್ಯಧಾಮ ಹಾಗೂ ಮಹದೇಶ್ವರ ವನ್ಯಧಾಮ ವ್ಯಾಪ್ತಿಯ ನಾಲ್ವರು ಅರಣ್ಯಾಧಿಕಾರಿಗಳಿಗೆ ನೋಟೀಸ್ ಜಾರಿಗೊಳಿಸಲಾಗಿದೆ. ಎಸಿಎಫ್ಗಳಾದ ಸಂದೀಪ್ ಕುಮಾರ್ ಹಾಗೂ ಮರಿಸ್ವಾಮಿ, ಆರ್ಎಫ್ಒ ವಾಗೀಶ್ ಮತ್ತು ಡಿಆರ್ಎಫ್ಒ ಬಿರಾದಾರ್ ಅವರನ್ನು ಎದುರುದಾರರಾಗಿ ಪರಿಗಣಿಸಿದೆ.

ಪಾದಯಾತ್ರಿಗಳಿಗೆ ತಲಾ ₹200 ಶುಲ್ಕ ವಸೂಲಿ ಮಾಡುತ್ತಿದ್ದರೂ ಸಮರ್ಪಕ ಭದ್ರತೆ ಒದಗಿಸಲಾಗಿಲ್ಲ ಎಂಬ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ನೋಟೀಸ್ ನೀಡಲಾಗಿದೆ. ಪಾದಯಾತ್ರೆ ಮಾರ್ಗದಲ್ಲಿ ಸುರಕ್ಷತಾ ಬೇಲಿ, ಮಾಹಿತಿ ಫಲಕ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದನ್ನು ಗಂಭೀರ ಲೋಪ ಎಂದು ಪರಿಗಣಿಸಲಾಗಿದೆ.
ಸಮಸ್ಯೆಗಳು ಹಾಗೂ ಲೋಪದೋಷಗಳನ್ನು ತಕ್ಷಣ ಸರಿಪಡಿಸುವಂತೆ ಸೂಚಿಸಿರುವ ಉಪ ಲೋಕಾಯುಕ್ತರು, ಕೈಗೊಂಡ ಕ್ರಮಗಳ ಕುರಿತು ನಾಲ್ಕು ವಾರಗಳೊಳಗೆ ವರದಿ ಸಲ್ಲಿಸಲು ಆದೇಶಿಸಿದ್ದಾರೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಜೂ.17 ರಂದು ನಿಗದಿಪಡಿಸಲಾಗಿದೆ.