ಯಳಂದೂರು: ತಾಲೂಕಿನ ಅಂಬಳೆ ಗ್ರಾಮಕ್ಕೆ ಸೇರಿದ ಗೂಳಿಪುರ ನಾಗನಾಯಕ ಎಂಬುವವರ ಜಮೀನಿನಲ್ಲಿ ಮಂಗಳವಾರ ಕೊಳಕು ಮಂಡಲ ಹಾವು ಕಾಣಿಸಿಕೊಂಡಿದ್ದು, ತಕ್ಷಣ ಸ್ನೇಕ್ ಗೋವಿಂದರಾಜು ಮತ್ತು ಸ್ನೇಕ್ ಪ್ರಸಾದ್ ಎಂಬುವವರಿಗೆ ಕರೆ ಮಾಡಿದಾಗ ತಕ್ಷಣ ಆಗಮಿಸಿ ಹುಲ್ಲಿನೊಳಗೆ ಅಡಗಿಕೊಂಡಿದ್ದ ಹಾವನ್ನು ಹಿಡಿದು ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿರುತ್ತಾರೆ.
ಈ ವೇಳೆ ಸ್ನೇಕ್ ಗೋವಿಂದರಾಜು ಮಾತನಾಡಿ, ಯಾವುದೇ ಹಾವು ಕಂಡುಬಂದರೆ, ಅದನ್ನು ಕೊಲ್ಲದೆ ಸುರಕ್ಷಿತವಾಗಿ ರಕ್ಷಿಸುವುದು ಮುಖ್ಯ. ಮಂಡಲ ಹಾವು ಅತ್ಯಂತ ವಿಷಕಾರಿ ಮತ್ತು ಕಚ್ಚಿದರೆ ಅಪಾಯಕಾರಿ. ಈ ಹಾವುಗಳು ಒಣಗಿದ ಎಲೆ, ಹುಲ್ಲು, ಸೌದೆ ಮತ್ತು ಬಿಲಗಳ ಮಧ್ಯೆ ಅಡಗಿಕೊಳ್ಳುತ್ತವೆ. ಹಾವು ಕಂಡುಬಂದ ತಕ್ಷಣ ಅರಣ್ಯ ಇಲಾಖೆ ಅಥವಾ ಪರಿಣಿತ ಸ್ನೇಕ್ ಕ್ಯಾಚರ್‌ಗೆ ಕರೆ ಮಾಡಿ ಎಂದರು.
ಸ್ನೇಕ್ ಪ್ರಸಾದ್ ಮಾತನಾಡಿ, ಜಮೀನಿನಲ್ಲಿ ಹಾವು ರಕ್ಷಣೆ ಮತ್ತು ಎಚ್ಚರಿಕೆ ಕ್ರಮಗಳನ್ನು ರೈತರು ಹಾಗೂ ಕೂಲಿ ಕಾರ್ಮಿಕರು ಅನುಸರಿಸಬೇಕು. ಮಂಡಲ ಹಾವುಗಳು ಸುರುಳಿಯಾಕಾರದಲ್ಲಿರುತ್ತದೆ. ಅದನ್ನು ತುಳಿಯದಂತೆ ಎಚ್ಚರ ವಹಿಸಬೇಕು. ಜಮೀನಿನಲ್ಲಿ ಓಡಾಡುವಾಗ ಯಾವಾಗಲೂ ಗಟ್ಟಿ ಪಾದರಕ್ಷೆ (ಬೂಟುಗಳು) ಧರಿಸಬೇಕು. ಹೊಲದ ಸುತ್ತಲಿನ ಒಣ ಹುಲ್ಲು, ಕಾಯಿ ಮಟ್ಟೆ, ಸೌದೆ ರಾಶಿಗಳನ್ನು ಸ್ವಚ್ಛಗೊಳಿಸಬೇಕು ಎಂದು ಸಲಹೆ ನೀಡಿದರು.