ಚಾಮರಾಜನಗರ: ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಪದ ಬಳಕೆ, ಪ್ರಚೋದನಕಾರಿ ಹೇಳಿಕೆ ನಿಡುವವರೇ ಎಚ್ಚರ, ಜಿಲ್ಲಾ ಪೊಲೀಸ್ ನಿಮ್ಮ ಮೇಲೆ ನಿರಂತರವಾಗಿ ಕಣ್ಣಿಟ್ಟಿದೆ.
ಚಾಮರಾಜನಗರ ತಾಲೂಕಿನ ಮಸಣಾಪುರ ಗ್ರಾಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿದ ವಿಚಾರವಾಗಿ ಕೆಲವು ವ್ಯಕ್ತಿಗಳು ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಪದಬಳಸಿ ಹಾಗೂ ಪ್ರಚೋದನಕಾರಿಯಾಗಿ ಪೋಸ್ಟ್ಗಳನ್ನು ಮಾಡಿರುತ್ತಾರೆ. ಅದಕ್ಕೆ ಸಂಬಂಧಿಸಿದಂತೆ ಈಗಾಗಲೇ ಒಂದು ಪ್ರಕರಣವನ್ನು ದಾಖಲಿಸಿಕೊಂಡು ಪೊಲೀಸರು ತನಿಖಾ ಕ್ರಮ ಕೈಗೊಂಡಿರುತ್ತದೆ.
ಅದಲ್ಲದೇ ಮೇಲ್ಕಂಡ ಘಟನೆಗೆ ಸಂಬಂಧಪಟ್ಟಂತೆ ಕೊಳ್ಳೇಗಾಲ ಪಟ್ಟಣ ಠಾಣಾ ವ್ಯಾಪ್ತಿಯ ವ್ಯಕ್ತಿಯೊಬ್ಬರು ಫೇಸ್ ಬುಕ್ನಲ್ಲಿ ಪ್ರಚೋದನಕಾರಿ ಪೋಸ್ಟ್ ಮಾಡಿದ್ದರ ಸಂಬಂಧ ಕೊಳ್ಳೇಗಾಲ ಪಟ್ಟಣ ಠಾಣಾ ಮೊ.ಸಂ:86/2026ರಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ.
ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿರುವ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ (Police Station Social Media Monitoring Cell) ಮತ್ತು ಜಿಲ್ಲಾ ಪೊಲೀಸ್ ಕಛೇರಿಯ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ (District Social Media Monitoring Cell) ನಲ್ಲಿ ಸತತವಾಗಿ ಸಾಮಾಜಿಕ ಜಾಲತಾಣಗಳ ಮಾನಿಟರಿಂಗ್ ಮಾಡುತ್ತಿರುತ್ತಾರೆ.
ಜಿಲ್ಲಾ ಪೊಲೀಸ್ ಕಛೇರಿ ಮತ್ತು ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ನಿರಂತರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮಾಡುವ ಪೋಸ್ಟ್ಗಳ ಬಗ್ಗೆ ನಿಗಾವಣೆ ಮಾಡುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಅಶ್ಲೀಲ ಪದಬಳಕೆ, ಕೋಮು ಸೌಹಾರ್ದ, ಕಾನೂನು ಸುವ್ಯವಸ್ಥೆ, ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆವುಂಟುಮಾಡುವಂತಹ ಪದಬಳಕೆ ಹಾಗೂ ಪೋಸ್ಟ್ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಲ್ಲಿ ಸಂಬಂಧಪಟ್ಟ ಪೊಲೀಸ್ ಠಾಣೆಗಳಲ್ಲಿ ಸುಮೋಟೊ ಕೇಸ್ ದಾಖಲಿಸಿ ಕಾನೂನು ರೀತ್ಯಾ ಕ್ರಮ ಕೈಗೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿರಿ ಎಂ.ಮುತ್ತುರಾಜು ಸಾರ್ವಜನಿಕವಾಗಿ ಎಚ್ಚರಿಕೆ ನೀಡಿರುತ್ತಾರೆ.