ಚಾಮರಾಜನಗರ: ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜಿಂಕೆ ಬೇಟೆಯಾಡುತ್ತಿದ್ದವನನ್ನು ಅರಣ್ಯ ಇಲಾಖೆಯವರು ಬಂಧಿಸಿದ್ದಾರೆ.
ಕೋಟಂಬಳ್ಳಿ ಗ್ರಾಮದ ಉಮೇಶ್ (25) ಬಂಧನಕ್ಕೆ ಒಳಗಾದವನು. ಈತ ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶದ ಚಾಮರಾಜನಗರ ಪ್ರಾದೇಶಿಕ ವಲಯದಲ್ಲಿ ಕಳೆದ ವರ್ಷ ಸೆ.24 ರಂದು ಚನ್ನಪ್ಪನಪುರ ವ್ಯಾಪ್ತಿಯಲ್ಲಿ ಅಕ್ರಮವಾಗಿ ಒಂದು ಜಿಂಕೆಯನ್ನು ಬೇಟೆ ಮಾಡಿದ್ದನು. ಈ ಸಂದರ್ಭದಲ್ಲಿ ಒಂದು ಜಿಂಕೆ, ಒಂದು ಬೈಕ್ ಹಾಗೂ ಒಂದು ಚೂರಿಯನ್ನು ವಶಪಡಿಸಿಕೊಳ್ಳಲಾಗಿತ್ತು.

ಈ ವೇಳೆ ಸದರಿ ಆರೋಪಿಯು ತಪ್ಪಿಸಿಕೊಂಡು, ತಲೆಮರೆಸಿಕೊಂಡಿದ್ದನು. ಆರೋಪಿಯನ್ನು ಅರಣ್ಯ ಇಲಾಖೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಉಳಿದ ಆರೋಪಿಗಳ ಪತ್ತೆಗೂ ಪೊಲೀಸರು ಬಲೆ ಬೀಸಿದ್ದಾರೆ.