ಚಾಮರಾಜನಗರ: ಜಿಲ್ಲಾ ಮಟ್ಟದ ಬಸವ ಜಯಂತ್ಯುತ್ಸವ ಹಾಗೂ ಪೂಜ್ಯದ್ವಯರ ಸಂಸ್ಮರಣೋತ್ಸವ ಕಾರ್ಯಕ್ರಮವನ್ನು ಮೇ 21 ಮತ್ತು 22 ರಂದು ಎರಡು ದಿನಗಳ ಕಾಲ ಅದ್ಧೂರಿಯಾಗಿ ನಡೆಯಲಿದ್ದು, ಜಿಲ್ಲೆಯ ವ್ಯಾಪ್ತಿಯ ಪ್ರತಿ ಹಳ್ಳಿಹಳ್ಳಿಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಬಸವ ಭಕ್ತರು, ಅನುಯಾಯಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಚಾ.ನಗರ ಸಿದ್ದಮಲ್ಲೇಶ್ವರ ವಿರಕ್ತ ಮಠಾಧ್ಯಕ್ಷರಾದ ಶ್ರೀ ಚನ್ನಬಸವಸ್ವಾಮೀಜಿ ತಿಳಿಸಿದರು.
ನಗರದ ಶ್ರೀ ಮಠದ ಅವರಣದಲ್ಲಿ ಶ್ರೀ ಸಿದ್ದಮಲ್ಲೇಶ್ವರ ವಿರಕ್ತ ಮಠ ಹಾಗೂ ಬಸವ ಬಳಗಗಳ ಒಕ್ಕೂಟದ ವತಿಯಿಂದ ನಡೆಯುತ್ತಿರುವ ಎರಡು ದಿನಗಳ ಬಸವ ಜಯಂತಿ ಕಾರ್ಯಕ್ರಮದ ಪ್ರಚಾರ ರಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿ ವರ್ಷದಂತೆ ಈ ಬಾರಿಯು ಶ್ರೀಮಠದ ವತಿಯಿಂದ ಬಸವ ಜಯಂತಿಯನ್ನು ಆಚರಣೆ ಮಾಡಲಾಗುತ್ತಿದ್ದು, ಈ ಬಾರಿ ಬಸವ ಬಳಗಗಳ ಒಕ್ಕೂಟದವರು ಬಹಳ ವಿಜೃಂಭಣೆಯಿಂದ ಜಿಲ್ಲಾ ಮಟ್ಟದ ಬಸವೇಶ್ವರ ಜಯಂತೋತ್ಸವ -2026 ಅಯೋಜನೆ ಮಾಡಿಕೊಂಡಿದ್ದಾರೆ. ಒಕ್ಕೂಟದ ಅಧ್ಯಕ್ಷರಾಗಿ ಕಾಡಾ ಅಧ್ಯಕ್ಷರಾದ ಪಿ. ಮರಿಸ್ವಾಮಿ ಅವರ ನೇತೃತ್ವದಲ್ಲಿ ಕಳೆದ 20 ದಿನಗಳಿಂದ ಬಹಳ ಅಚ್ಚುಕಟ್ಟಾಗಿ ಪ್ರಚಾರ ಹಾಗೂ ಕಾರ್ಯಕ್ರಮದ ಸಿದ್ದತೆಗಳು ನಡೆಯುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾಡಳಿತ ಭವನದಲ್ಲಿರುವ ಶ್ರೀ ಬಸವೇಶ್ವರ ಪುತ್ಥಳಿಗೆ ಮಾರ್ಲಾಪಣೆ ಮಾಡುವ ಮೂಲಕ ಸುತ್ತೂರುಶ್ರೀಗಳು ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಜಿಲ್ಲೆಯ ಮಠಾಧೀಶರು, ಸಚಿವರು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು ಭಾಗವಹಿಸಲಿದ್ದಾರೆ. ವಿವಿಧ ಜಾನಪದ ಕಲಾತಂಡಗಳೊಂದಿಗೆ ಬಿ. ರಾಚಯ್ಯ ಜೋಡಿ ರಸ್ತೆ ಮಾರ್ಗವಾಗಿ ಶ್ರೀ ಚಾಮರಾಜೇಶ್ವರ ದೇವಸ್ಥಾನದಿಂದ ಮೆರವಣಿಗೆಯಲ್ಲಿ ಸಾಗಿ ವಾಪಸ್ ಶ್ರೀಮಠಕ್ಕೆ ತಲುಪಲಿದೆ ಎಂದರು.
ಈ ಕಾರ್ಯಕ್ರಮ ಬಹಳ ಯಶಸ್ವಿಯಾಗಿ ನಡೆಯಲಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಬೇಕು. ಮೇ 21 ರ ಸಂಜೆ ಶ್ರೀಮಠದ ಅವರಣದಲ್ಲಿ ಪ್ರಭುಲಿಂಗಲೀಲೆ ನಾಟಕ ಪ್ರದರ್ಶನ, ಮೇ 22 ರಂದು ಪೂಜ್ಯರ ಗದ್ದುಗೆಗೆ ಬಿಲ್ವಾರ್ಚನೆ, ಮಹಾಮಂಗಳಾರತಿ, ಷಟ್ಥಲ ಧ್ವಜಾರೋಹಣ, ಇಷ್ಟಲಿಂಗಪೂಜೆ, ಪ್ರವಚನ, ಹಾಗೂ ವಚನ ಗಾಯನ, ಭಕ್ತಿಗೀತೆ ಕಾರ್ಯಕ್ರಮಗಳು ನಡೆಯಲಿದೆ ಎಂದು ಶ್ರೀಗಳು ತಿಳಿಸಿದರು.
ಬಸವ ಬಳಗಗಳ ಒಕ್ಕೂಟದ ಅಧ್ಯಕ್ಷರು ಆದ ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ ಮಾತನಾಡಿ, ಜಿಲ್ಲಾ ಕೇಂದ್ರದಲ್ಲಿ ಒಕ್ಕೂಟದ ವತಿಯಿಂದ ಅದ್ದೂರಿಯಾಗಿ ಬಸವ ಜಯಂತಿ ಆಚರಣೆ ಮಾಡುವ ಸಂಕಲ್ಪದೊಂದಿಗೆ ಕಳೆದ 15 ದಿನಗಳಿಂದ ಎಲ್ಲಾ ಗ್ರಾಮಗಳಿಗೆ ಭೇಟಿ ನೀಡಿ ಆಹ್ವಾನ ಮಾಡಲಾಗುತ್ತಿದೆ. ಇಂದು ಪ್ರಚಾರ ರಥಕ್ಕೂ ಸಹ ಶ್ರೀಗಳು ಚಾಲನೆ ನೀಡಿದ್ದು, ಶ್ರೀ ಚನ್ನಬಸವಸ್ವಾಮೀಜಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ಸುತ್ತೂರು ಶ್ರೀಗಳು ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಹಿರಿಯರಾದ ಕೋಡಿಮೋಳೆ ರಾಜಶೇಖರ್, ಬಸವ ಕೇಂದ್ರದ ಅಧ್ಯಕ್ಷ ಎನ್ರಿಚ್ ಮಹದೇವಸ್ವಾಮಿ, ಒಕ್ಕುಟದ ಪ್ರಚಾರ ಸಮಿತಿಯ ಅಧ್ಯಕ್ಷ ಅಲೂರು ಪ್ರದೀಪ್, ಕಾರ್ಯದರ್ಶಿ ದೊಡ್ಡರಾಯಪೇಟೆ ಗಿರೀಶ್, ಮಹಾಸಭಾದ ತಾಲೂಕು ಅಧ್ಯಕ್ಷ ಬಾಲಚಂದ್ರಮೂರ್ತಿ, ನಿರ್ದೇಶಕರಾದ ಕಾವುದವಾಡಿ ಗುರು, ಅಲೂರು ಬಾಬು, ಪಿ. ಶೇಖರಪ್ಪ, ರಾಮಸಮುದ್ರ ಬಾಬು, ವಕೀಲ ಪ್ರಥ್ವಿರಾಜ್, ಹೊನ್ನಹಳ್ಳಿ ಸಂಪತ್ತು, ಬಸವರಾಜು ಮೊದಲಾದವರು ಇದ್ದರು.