ಜಿಲ್ಲೆಯಲ್ಲಿ ಪೌರಕಾರ್ಮಿಕರಿಗೆ ಹೋಟೆಲ್ ಪ್ರವೇಶವಿಲ್ಲ!

ಮಣಿಕಂಠ ಜನತಾ ರಾಯಭಾರಿ
2 Min Read

ಚಾಮರಾಜನಗರ: ಪ್ರಸ್ತುತ ಜಗತ್ತು ಎಷ್ಟೇ ಮುಂದುವರಿದರೂ, ನಮ್ಮ ದೇಶದ ಜಾತಿ ವ್ಯವಸ್ಥೆ ಮಾತ್ರ ಅಸ್ಪೃಶ್ಯತೆ ಆಚರಣೆಯನ್ನು ಜೀವಂತವಾಗಿ ಇಟ್ಟುಕೊಂಡಿರುವುದನ್ನು ಆಗಾಗ ತೋರ್ಪಡಿಸುತ್ತಲೇ ಇರುತ್ತದೆ.

ಹೌದು ಚಾಮರಾಜನಗರ ಜಿಲ್ಲೆಯ ಹೋಟೆಲ್ ಗಳಲ್ಲಿ ಪೌರಕಾರ್ಮಿಕರಿಗೆ ಪ್ರವೇಶವಿಲ್ಲ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನಲ್ಲಿ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯ ಶಂಕರ ಸಿ.ಅಂಕನಶೆಟ್ಟಿಪುರ ಅವರು ಮಂಗಳವಾರ ಪೌರಕಾರ್ಮಿಕರ ಸಮಸ್ಯೆಗಳನ್ನು ಆಲಿಸುವ ಸಂದರ್ಭದಲ್ಲಿ ಈ ಅಸ್ಪೃಶ್ಯತೆ ಆಚರಣೆ ಬೆಳಕಿಗೆ ಬಂದಿದೆ.

ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯ ಶಂಕರ ಸಿ.ಅಂಕನಶೆಟ್ಟಿಪುರ ಅವರ ಮುಂದೆ ಅಹವಾಲು ತೋಡಿಕೊಂಡ ಪೌರಕಾರ್ಮಿಕರು, ನಮಗೆ ಯಳಂದೂರು ಪಟ್ಟಣದಲ್ಲಿರುವ ಯಾವ ಹೋಟೆಲ್ ಗಳಲ್ಲಿ ಪ್ರವೇಶವಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಇದು ಸ್ವಚ್ಛತಾ ಕಾರ್ಮಿಕರನ್ನು ಸಮಾಜ ಇಂದಿಗೂ ಯಾವ ರೀತಿಯಲ್ಲಿ ನೋಡುತ್ತದೆ ಎಂಬ ಸತ್ಯವನ್ನು ಸಾರುತ್ತದೆ. ಸಂವಿಧಾನ ಬಂದು ಇಷ್ಟು ವರ್ಷಗಳು ಕಳೆದರೂ ಅಸ್ಪೃಶ್ಯತೆ ಆಚರಣೆ ಜೀವಂತವಾಗಿರುವುದಕ್ಕೆ ಇದು ಸಾಕ್ಷಿಯಾಗಿದೆ.

ಯಳಂದೂರು ಪಟ್ಟಣದ ಹೋಟೆಲ್ ಒಂದರಲ್ಲಿ ಪೌರಕಾರ್ಮಿಕರಿಗೆ ಆಯೋಗದ ಅಧ್ಯಕ್ಷ ಶಂಕರ ಸಿ.ಅಂನಶೆಟ್ಟಿಪುರ ನೇತೃತ್ವದಲ್ಲಿ ಪ್ರವೇಶ ನೀಡಿರುವುದು.

ಸದಸ್ಯರಿಂದ ತಕ್ಷಣ ಕ್ರಮ:ಯಳಂದೂರು ಪಟ್ಟಣದ ಹೋಟೆಲ್ ಗಳಲ್ಲಿ ಪೌರಕಾರ್ಮಿಕರಿಗೆ ಪ್ರವೇಶವಿಲ್ಲ ಎಂಬ ಮಾಹಿತಿ ತಿಳಿಯುತ್ತಲೇ, ಅಧಿಕಾರಿಗಳೊಂದಿಗೆ ಪೌರಕಾರ್ಮಿಕರ ಜೊತೆಗೆ ಹೋಟೆಲ್ ಗಳಿಗೆ ಭೇಟಿ ನೀಡಿದ ಆಯೋಗದ ಸದಸ್ಯ ಶಂಕರ ಸಿ.ಅಂಕನಶೆಟ್ಟಿಪುರ ಅವರು ಪೌರಕಾರ್ಮಿಕರೊಂದಿಗೆ ಊಟ ಮಾಡುವ‌ ಮೂಲಕ ತಕ್ಷಣದ ಕ್ರಮ ಕೈಗೊಂಡರು. ಈ ವೇಳೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಕಂಡುಬಂದರೇ ಅಂತವರ ಮೇಲೆ ಪ್ರಕರಣ ದಾಖಲಿಸಿ ಎಂದು ಸೂಚನೆ ನೀಡಿದರು. ಅದಲ್ಲದೇ ಹೋಟೆಲ್ ಮಾಲೀಕರಿಗೂ ಅಸ್ಪೃಶ್ಯತೆ ಆಚರಣೆಯ ಪರಿಣಾಮಗಳನ್ನು ತಿಳಿಸಿ, ಮುಂದಿನ ದಿನಗಳಲ್ಲಿ ಇದು ಪುನರಾವರ್ತನೆಯಾಗದಂತೆ ತಿಳಿಹೇಳಿದರು.

 

 

 

 

 

 

 

 

 

ಯಳಂದೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹೋಟೆಲ್ ಗಳಲ್ಲಿ ಪೌರ ಕಾರ್ಮಿಕರಿಗೆ ಪ್ರವೇಶವಿಲ್ಲ ಎಂಬ ಮಾಹಿತಿ ದೊರೆಯಿತು. ಬಳಿಕ ಅಧಿಕಾರಿಗಳೊಂದಿಗೆ ಪೌರಕಾರ್ಮಿಕರನ್ನು ಕರೆದುಕೊಂಡು ಹೋಟೆಲ್ ಗಳಿಗೆ ತೆರಳಿ ಪ್ರವೇಶ ನೀಡಲಾಯಿತು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. 

|ಶಂಕರ ಸಿ.ಅಂಕನಶೆಟ್ಟಿಪುರ, ಸದಸ್ಯರು, ಸಫಾಯಿ ಕರ್ಮಚಾರಿಗಳ ಆಯೋಗ, ಬೆಂಗಳೂರು 

 

Share this Article
Leave a comment