ಜಿಲ್ಲೆಯ ಬರಪೀಡಿತ ಪ್ರದೇಶಗಳಿಗೆ ಉಪಮುಖ್ಯಮಂತ್ರಿ ಭೇಟಿ; ರೈತರ ಕಷ್ಟ ಆಲಿಸಿದ ಡಿಸಿಎಂ ಪರಮೇಶ್ವರ್ 

ಮಣಿಕಂಠ ಜನತಾ ರಾಯಭಾರಿ
1 Min Read

ಗುಂಡ್ಲುಪೇಟೆ, ಸೆ.2: ಚಾಮರಾಜನಗರ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಪರಿಶೀಲನೆ ನಡೆಸಿದ ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಅವರು ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ರೈತರ ಸಂಕಷ್ಟವನ್ನು ಆಲಿಸಿದರು.

ಗುಂಡ್ಲುಪೇಟೆ ತಾಲೂಕಿನ ರಂಗನಾಥಪುರ, ನಿಟ್ರೆ, ಸೋಮಹಳ್ಳಿ, ಶೀಗೆವಾಡಿ ಹಾಗೂ ಚಾಮರಾಜನಗರ ತಾಲೂಕಿನ ಮುಕ್ಕಡಹಳ್ಳಿ, ಹೆಗ್ಗೋಠಾರ ಗ್ರಾಮಗಳಲ್ಲಿ ಬರ ಪರಿಶೀಲನೆ ನಡೆಸಿದ ಅವರು, ಕೃಷಿ ಮತ್ತು ತೋಟಗಾರಿಕೆ ಬೆಳೆಹಾನಿಯನ್ನು ಖುದ್ದಾಗಿ ವೀಕ್ಷಿಸಿದರು. ಇದೇ ವೇಳೆ ಜಾನುವಾರುಗಳಿಗೆ ಎದುರಾಗಿರುವ ಮೇವಿನ ಕೊರತೆ, ಬರದಿಂದ ರೈತರು ಅನುಭವಿಸುತ್ತಿರುವ ಸಮಸ್ಯೆಗಳು ಹಾಗೂ ವಿಬಿ-ಜಿ ರಾಮ್-ಜಿ ಯೋಜನೆಯಡಿ ಜನರಿಗೆ ಉದ್ಯೋಗ ಕಲ್ಪಿಸಿ ಕೈಗೊಂಡಿರುವ ಕಾಮಗಾರಿಗಳನ್ನೂ ಪರಿಶೀಲಿಸಿದರು.

ಸೋಮಹಳ್ಳಿಯಲ್ಲಿ ರೈತ ನಾಗರಾಜು ತಮ್ಮ ಸಂಕಷ್ಟವನ್ನು ಡಿಸಿಎಂ ಮುಂದೆ ತೋಡಿಕೊಂಡಿದ್ದು, “ಮಳೆ ಇಲ್ಲದೆ ಮೇವು ಸಿಗಲಿಲ್ಲ. ಹಸು ಸಾಕಲಾಗದೆ ಮಾರಿಬಿಟ್ಟೆ. ಸೂರ್ಯಕಾಂತಿ ಬೆಳೆಗೆ ₹10 ಸಾವಿರ ಖರ್ಚು ಮಾಡಿದ್ದರೂ, ಮೊಳಕೆಯಲ್ಲೇ ಬೆಳೆ ಒಣಗಿ ಹೋಯಿತು” ಎಂದು ಅಳಲು ತೋಡಿಕೊಂಡಿದ್ದಾರೆ. ಬರ ಪರಿಸ್ಥಿತಿಯಿಂದ ಬೆಳೆ ಹಾಗೂ ಜಾನುವಾರು ಸಾಕಾಣಿಕೆಯಲ್ಲಿ ಎದುರಾಗಿರುವ ಸಮಸ್ಯೆಗಳನ್ನು ರೈತರಿಂದಲೇ ಆಲಿಸಿದ ಡಿಸಿಎಂ ಪರಮೇಶ್ವರ್, ಸ್ಥಳೀಯ ಪರಿಸ್ಥಿತಿಯನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗ ಶೆಟ್ಟಿ, ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್, ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ್, ಚಾಮರಾಜನಗರ ಜಿಲ್ಲಾಧಿಕಾರಿ ಶ್ರೀರೂಪ ಸೇರಿದಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

Share this Article
Leave a comment