ಚಾಮರಾಜನಗರ: ಶಿಕ್ಷಕರು ಮತ್ತು ಮಕ್ಕಳ ಪರವಲ್ಲದ ಹಾಗೂ ತಾರತಮ್ಯಗಳಿಂದ ಕೂಡಿರುವ ಶಿಕ್ಷಣ ನೀತಿಗಳು ದೇಶಕ್ಕೆ ಮಾರಕವಾಗಿದೆ ಎಂದು ಭೋಗಾಪುರ ವಸತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಪಿ.ದೇವರಾಜ್ ಆತಂಕ ವ್ಯಕ್ತಪಡಿಸಿದರು.
ನಗರದ ಪರಿವರ್ತನಾ ಅಧ್ಯಯನ ಕೇಂದ್ರದಲ್ಲಿ ಸೇವಾ ನಿರತ ಶಿಕ್ಷಕರಿಗಾಗಿ ಮಂಗಳವಾರ ಆಯೋಜಿಸಿದ್ದ ಟಿಇಟಿ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಸ್ತುತ ಸಂದರ್ಭದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ಹಲವಾರು ಒತ್ತಡಗಳನ್ನು ಅನುಭವಿಸುತ್ತಿದ್ದಾರೆ. ಕಾಲಕಾಲಕ್ಕೆ ಬದಲಾದ ಶಿಕ್ಷಣ ನೀತಿಗಳಿಂದ ಶಿಕ್ಷಕರು ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಶಿಕ್ಷಣ ನೀತಿಗಳ ಹುನ್ನಾರಗಳನ್ನು ಶಿಕ್ಷಕರು ಅರಿತುಕೊಳ್ಳದಿದ್ದರೇ ಭವಿಷ್ಯದಲ್ಲಿ ಶಿಕ್ಷಕರು ಅಪಾಯವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ದೇಶದಲ್ಲಿ ಕೇವಲ ಶೇ.೧೪ ಜನರಿಗಷ್ಟೇ ಶಿಕ್ಷಣವಿತ್ತು. ಆದರೆ ನಮ್ಮ ಸಂವಿಧಾನ ರಚನಾಕಾರರು ಪ್ರತಿಯೊಬ್ಬರಿಗೂ ಶಿಕ್ಷಣದ ಅವಕಾಶ ಕಲ್ಪಿಸಿಕೊಡುತ್ತಾರೆ. ಸಾವಿರಾರು ಭಾಷೆ ಮತ್ತು ಸಂಸ್ಕೃತಿಯನ್ನು ಒಳಗೊಂಡಿರುವ ದೇಶದಲ್ಲಿ ಪ್ರತಿಯೊಬ್ಬರಿಗೂ ಅತ್ಯುತ್ತಮ ಶಿಕ್ಷಣವನ್ನು ನೀಡಬೇಕಿದೆ. ಆದರೆ ಸರ್ಕಾರಗಳು ಮ್ಯಾಗ್ನೆಟಿಕ್ ಶಾಲೆಗಳ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿರುವುದು ಆತಂಕವನ್ನು ಸೃಷ್ಟಿಸುತ್ತಿದೆ. 10-20 ಶಾಲೆಗಳನ್ನು ವಿಲೀನಗೊಳಿಸಿ ಒಂದು ಶಾಲೆ ಮಾಡಿದರೇ, ಅಲ್ಲಿಗೆ ಮೂಲಸೌಕರ್ಯವನ್ನು ಹೇಗೆ ಕಲ್ಪಿಸುತ್ತಾರೆ ಎಂಬ ಪ್ರಶ್ನೆ ಎದುರಾಗಿದೆ. ಶಿಕ್ಷಕರ ಜೊತೆಗೆ ಚರ್ಚಿಸದೇ ಶಿಕ್ಷಕರ ನೀತಿಗಳನ್ನು ಜಾರಿ ಮಾಡುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.
ಹನೂರು ಜಿ.ವಿ.ಗೌಡ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ನಂಜುಂಡಯ್ಯ ಮಾತನಾಡಿ, ನಾವು ರಾಜ್ಯ ಪಠ್ಯಕ್ರಮಗಳ ಜೊತೆಗೆ ಕೇಂದ್ರಿಯ ಪಠ್ಯಕ್ರಮಗಳನ್ನು ಅಧ್ಯಯನ ಮಾಡುವ ಮೂಲಕ ಟಿಇಟಿಯಂತಹ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಬಹುದಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಸಿದ್ಧತೆ ನಡೆಸಬೇಕಿದೆ ಎಂದು ಸಲಹೆ ನೀಡಿದರು.
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಉಪನ್ಯಾಸಕ ಪ್ರೊ.ರಮೇಶ್ ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ಪ್ರತಿಯೊಬ್ಬರಲ್ಲೂ ಅಧ್ಯಯನ ಶೀಲತೆ ಕಡಿಮೆಯಾಗುತ್ತಿದೆ. ಪ್ರತಿಯೊಬ್ಬರ ಮನೆಯಲ್ಲಿ ದೇವರ ಮನೆ ಇರುತ್ತದೆಯೇ ಹೊರತು ಅಧ್ಯಯನ ಕೋಣೆ ಇರುವುದಿಲ್ಲ. ಸ್ಪರ್ಧಾತ್ಮಕ ಯುಗದಲ್ಲಿ ನಿರಂತರ ಅಧ್ಯಯನ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಚಾಮರಾಜನಗರ ವಿಶ್ವವಿದ್ಯಾಲಯ ಕನ್ನಡ ಪ್ರಾಧ್ಯಾಪಕ ಪ್ರೊ.ಬಸವಣ್ಣ ಮೂಕಹಳ್ಳಿ, ಎಸ್ಸಿ, ಎಸ್ಟಿ ನೌಕರರ ಸಂಘದ ಕಾರ್ಯಾಧ್ಯಕ್ಷ ಸಿ.ಎನ್.ಶಿವಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ, ಶಿಕ್ಷಕರಾದ ಶಶಿಕಲಾ, ನಂದಿನಿ, ನಟರಾಜ್, ಕುಮಾರ್, ಶಿವಕುಮಾರ್ ಹಾಗೂ ಇತರರು ಹಾಜರಿದ್ದರು.