ನಗು-ಮಗು ಆಂಬುಲೆನ್ಸ್ ಅನ್ಯ ಸೇವೆಗೆ ಬಳಕೆ- ಸಾರ್ವಜನಿಕರ ಪರದಾಟ 

ಮಣಿಕಂಠ ಜನತಾ ರಾಯಭಾರಿ
1 Min Read

ಚಾಮರಾಜನಗರ:ತಾಯಿ ಮಗುವನ್ನು ಸುರಕ್ಷಿತವಾಗಿ ಮನೆಗೆ ಸೇರಿಸಬೇಕೆಂಬ ಉದ್ದೇಶದಿಂದ ಪ್ರಾರಂಭವಾದ “ನಗು-ಮಗು” ಆಂಬುಲೆನ್ಸ್ ಜನರಿಂದ ದೂರ ಉಳಿದಿದ್ದು, ಇತ್ತ ಆಸ್ಪತ್ರೆಯಲ್ಲಿ ಸಾರ್ವಜನಿಕರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಎನ್ಎಎಸ್ ಯೋಜನೆಯಡಿಯಲ್ಲಿ ಗರ್ಭಿಣಿಯರು ಮತ್ತು ರೋಗಗ್ರಸ್ಥ ಮಕ್ಕಳಿಗೆ ಉಚಿತ ಸೇವೆ ನೀಡುವ ಉದ್ದೇಶದಿಂದ “ನಗು-ಮಗು” ಆಂಬುಲೆನ್ಸ್ ಸೇವೆ ಪ್ರಾರಂಭಿಸಲಾಗಿತ್ತು. ಈ ಆಂಬುಲೆನ್ಸ್ ಸಿಮ್ಸ್ ಆಸ್ಪತ್ರೆಯ ತಾಯಿ ಮತ್ತು ಮಕ್ಕಳ ವಿಭಾಗದಲ್ಲಿ ಇದ್ದು, ಬಡ ಮತ್ತು ಮಧ್ಯಮ ವರ್ಗದ ಜನರಿಗೆ ನೆರವಾಗಬೇಕಿತ್ತು. ಆದರೆ ಕಳೆದ ಒಂದು ತಿಂಗಳಿಂದಲೂ ನಗು-ಮಗು ಆಂಬುಲೆನ್ಸ್ ಸೇವೆ ದೊರೆಯದೇ ಸಾರ್ವಜನಿಕರು ಸಮಸ್ಯೆ ಅನುಭವಿಸುವಂತಾಗಿದೆ.

ಕಾರಾಗೃಹದ ತುರ್ತುಸೇವೆಗೆ ಬಳಕೆ:

ಆಸ್ಪತ್ರೆಯಲ್ಲಿ ಬಾಣಂತಿ ಮತ್ತು ನವಜಾತ ಶಿಶುವನ್ನು ಮನೆಗೆ ತಲುಪಿಸಬೇಕಿದ್ದ ನಗು-ಮಗು ಆಂಬುಲೆನ್ಸ್ ಜಿಲ್ಲಾ ಕಾರಾಗೃಹದ ತುರ್ತು ಸೇವೆಗೆ ಬಳಕೆ ಮಾಡಿಕೊಂಡಿರುವುದು ನಿಜಕ್ಕೂ ಹಾಸ್ಯಾಸ್ಪದವಾಗಿದೆ. ನಿತ್ಯವೂ ಹೆರಿಗೆ ಆಗುವ ಆಸ್ಪತ್ರೆಯ ಮುಂಭಾಗ ಇರಬೇಕಾದ ಆಂಬುಲೆನ್ಸ್ ಅನ್ನು ಕಾರಾಗೃಹದ ತುರ್ತು ಸೇವೆಗೆ ಬಳಕೆ ಮಾಡಿರುವುದನ್ನು ಸಾರ್ವಜನಿಕರು ಖಂಡಿಸಿದ್ದಾರೆ. ಕೂಡಲೇ ತಾಯಿ-ಮಗು ಆಸ್ಪತ್ರೆಯ ಮುಂಭಾಗ ನಗು-ಮಗು ಆಂಬುಲೆನ್ಸ್ ಸೇವೆ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪೊನ್ನಾಚಿಗೆ ಹೋಗಲು ಪರದಾಟ:

ಹನೂರು ತಾಲೂಕಿನ ಪೊನ್ನಾಚಿ ಗ್ರಾಮದ ಶಿವಕುಮಾರ್ ಎಂಬುವವರ ಪತ್ನಿಗೆ ಹೆರಿಗೆಯಾಗಿದ್ದು, ನವಜಾತ ಶಿಶು ಮತ್ತು ಬಾಣಂತಿಯನ್ನು ಪೊನ್ನಾಚಿ ಗ್ರಾಮಕ್ಕೆ ಕರೆದೊಯ್ಯಲು ನಗು-ಮಗು ಆಂಬುಲೆನ್ಸ್ ಸೇವೆ ಇಲ್ಲದೆ ಶುಕ್ರವಾರ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದಲ್ಲದೇ ಅಮ್ಮನಪುರ ಗ್ರಾಮದ ಮತ್ತೊಂದು ಕುಟುಂಬವೂ ಆಂಬುಲೆನ್ಸ್ ಸೇವೆ ಇಲ್ಲದೆ ಪರಿತಪಿಸುತ್ತಿತ್ತು. ಈ ಸಂದರ್ಭದಲ್ಲಿ ಶಿವಕುಮಾರ್ ಅವರು “ಜನತಾ ರಾಯಭಾರಿ” ಯೊಂದಿಗೆ ಮಾತನಾಡಿ, ಪೊನ್ನಾಚಿ ಗ್ರಾಮಕ್ಕೆ ಬಾಡಿಗೆ ವಾಹನದಲ್ಲಿ ತಾಯಿ-ಮಗುವನ್ನು ಕರೆದುಕೊಂಡು ಹೋಗಲು ಹಣದ ಸಮಸ್ಯೆ ಎದುರಾಗಿದೆ. ದಯಮಾಡಿ ನಮಗೆ ಆಂಬುಲೆನ್ಸ್ ಸೇವೆ ಒದಗಿಸಿಕೊಡಬೇಕು ಎಂದು ಮನವಿ ಮಾಡಿಕೊಂಡರು.

ಕೋಟ್:

ನಾವು ಹನೂರು ತಾಲೂಕಿನ ಪೊನ್ನಾಚಿ ಗ್ರಾಮದವರಾಗಿದ್ದು, ಅಷ್ಟು ದೂರ ಬಾಡಿಗೆ ವಾಹನದಲ್ಲಿ ತಾಯಿ-ಮಗುವನ್ನು ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ಆಂಬುಲೆನ್ಸ್ ಸೇವೆ ಒದಗಿಸಿದರೇ ಅನುಕೂಲವಾಗುತ್ತದೆ.

|ಶಿವಕುಮಾರ್, ಪೊನ್ನಾಚಿ, ಹನೂರು

Share this Article
Leave a comment