ಬೆಂಗಳೂರು: ತಮಗೆ ಸಾಮಾಜಿಕ ಜಾಲತಾಣದಲ್ಲಿ ಕೊಲೆ ಬೆದರಿಕೆ ಹಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ ಬೆನ್ನಲ್ಲೇ, ಕರ್ನಾಟಕ ಸರ್ಕಾರದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರತಿಪಕ್ಷ ಬಿಜೆಪಿ ಮತ್ತು ಆರ್ಎಸ್ಎಸ್ (RSS) ಸಂಘಟನೆಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಮ್ಮ ರಾಜಕೀಯ ಮಾತೃಸಂಸ್ಥೆಯಾದ ಆರ್ಎಸ್ಎಸ್ ಅನ್ನು ಅಧಿಕೃತವಾಗಿ ನೊಂದಣಿ (Registration) ಮಾಡಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳುವಂತೆ ಬಿಜೆಪಿಗೆ ಖಾರವಾಗಿ ಸೂಚಿಸಿದ್ದಾರೆ.
ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಜಾತಿ ನಿಂದನೆ ಹಾಗೂ ಕೊಲೆ ಬೆದರಿಕೆ ಹಾಕಿದ್ದ ಸುಧೀರ್ ಬಂಗೇರ (48) ಎಂಬಾತನನ್ನು ಪೊಲೀಸರು ಬಂಧಿಸಿದ ನಂತರ ಈ ರಾಜಕೀಯ ಜಟಾಪಟಿ ಆರಂಭವಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣ ‘X’ ನಲ್ಲಿ ಪೋಸ್ಟ್ ಮಾಡಿರುವ ಪ್ರಿಯಾಂಕ್ ಖರ್ಗೆ, “ನಾನು ಜವಾಬ್ದಾರಿ ವಹಿಸಿಕೊಂಡು ಇನ್ನು 48 ಗಂಟೆಗಳೂ ಆಗಿಲ್ಲ, ಆಗಲೇ ನಿಮ್ಮಲ್ಲಿ ಇಷ್ಟೊಂದು ಭಯ, ಆತಂಕ ಮತ್ತು ಅಸಮಾಧಾನ ಮೂಡಿದೆ” ಎಂದು ರಾಜ್ಯ ಬಿಜೆಪಿಗೆ ಟಾಂಗ್ ನೀಡಿದ್ದಾರೆ. ತಮ್ಮನ್ನು ನಿಂದಿಸಲು ಮತ್ತು ಬೆದರಿಕೆ ಹಾಕಲು ಬಿಜೆಪಿ ಆರ್ಎಸ್ಎಸ್ ಕಾರ್ಯಕರ್ತರನ್ನು ಬಳಸಿಕೊಳ್ಳುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ಇದೇ ವೇಳೆ ಆರ್ಎಸ್ಎಸ್ ಅನ್ನು ಉದ್ದೇಶಿಸಿ ಮಾತನಾಡಿದ ಅವರು, “ಬಿಜೆಪಿಯವರು ತಮ್ಮ ಮಾತೃಸಂಸ್ಥೆಯಾದ ಆರ್ಎಸ್ಎಸ್ಗೆ ನನ್ನ ಪರವಾಗಿ ನಮಸ್ಕಾರ ತಿಳಿಸಲಿ. ಹಾಗೆಯೇ, ಆ ಸಂಘಟನೆಯನ್ನು ದೇಶದ ಕಾನೂನಿನ ಅಡಿಯಲ್ಲಿ ಅಧಿಕೃತವಾಗಿ ನೋಂದಣಿ ಮಾಡಲು ಬೇಕಾದ ಎಲ್ಲಾ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಲು ಹೇಳಿ” ಎಂದು ಬರೆದಿದ್ದಾರೆ. ಆರ್ಎಸ್ಎಸ್ ಸಂಘಟನೆಯು ಕೇವಲ ‘ವ್ಯಕ್ತಿಗಳ ಒಕ್ಕೂಟ’ (Body of individuals) ಎಂದು ಹೇಳಿಕೊಂಡು ಕಾನೂನಾತ್ಮಕ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ; ಅದನ್ನು ಸಂವಿಧಾನ ಮತ್ತು ಕಾನೂನಿನ ಚೌಕಟ್ಟಿನೊಳಗೆ ತಂದು ಸಾರ್ವಜನಿಕರಿಗೆ ಪಾರದರ್ಶಕ ಹಾಗೂ ಉತ್ತರದಾಯಿಯಾಗಿಸುವ ನಿಟ್ಟಿನಲ್ಲಿ ಗೃಹ ಇಲಾಖೆ ಕಾರ್ಯಪ್ರವೃತ್ತವಾಗಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದ್ದು, ಮುಂಬರುವ ಜಂಟಿ ಅಧಿವೇಶನಕ್ಕೂ ಮುನ್ನ ಇಂತಹ ನೋಂದಣಿ ರಹಿತ ಸಂಘಟನೆಗಳನ್ನು ನಿಯಂತ್ರಿಸಲು ಹೊಸ ನಿಯಮ ಅಥವಾ ಕಾನೂನನ್ನು ಜಾರಿಗೆ ತರಲು ಸರ್ಕಾರ ಯೋಚಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಸದ್ಯ ಮಂಗಳೂರು, ಉಡುಪಿ ಸೇರಿದಂತೆ ರಾಜ್ಯಾದ್ಯಂತ ಈ ವಿವಾದ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ರಾಜಕೀಯ ಸಂಘರ್ಷವನ್ನು ಮತ್ತಷ್ಟು ರೋಚಕಗೊಳಿಸಿದೆ.