ಪುಟ್ಟರಂಗಶೆಟ್ಟಿ ಅವರಿಗೆ ಈ ಬಾರಿ ಮಂತ್ರಿಗಿರಿ ಒಲಿಯುತ್ತಾ?

ಮಣಿಕಂಠ ಜನತಾ ರಾಯಭಾರಿ
2 Min Read

ಚಾಮರಾಜನಗರ: ಸತತ ನಾಲ್ಕು ಬಾರಿ ಗೆಲುವು ಸಾಧಿಸಿರುವ ನಿಷ್ಠಾವಂತ, ಘಟಾನುಘಟಿ ನಾಯಕರನ್ನು ಸೋಲಿಸಿರುವ ಸರದಾರ, ರಾಜ್ಯದ ಉಪ್ಪಾರ ಸಮುದಾಯದ ಏಕೈಕ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಈ ಬಾರಿ ಮಂತ್ರಿಗಿರಿ ಒಲಿಯುತ್ತಾ ಎನ್ನುವ ಚರ್ಚೆ ಎಲ್ಲೆಡೆ ಮನೆಮಾಡಿದೆ.

ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಕಾಂಗ್ರೆಸ್‌ನ ಹಿರಿಯ ಹಾಗೂ ನಿಷ್ಠಾವಂತ ನಾಯಕರಲ್ಲಿ ಒಬ್ಬರು. ಸತತ 4ನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಉಪ್ಪಾರ ಸಮುದಾಯದ ಪ್ರಬಲ ಮುಖಂಡರಾಗಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಇವರಿಗಿದೆ.

ಪ್ರಸ್ತುತ ರಾಜ್ಯದಲ್ಲಿ ಸಂಪುಟ ಪುನರ್‌ ರಚನೆ ಮತ್ತು ಖಾಲಿ ಸ್ಥಾನ ಭರ್ತಿಶಮಾಡುವ ಚರ್ಚೆಗಳು ಜೋರಾಗಿರುವ ಬೆನ್ನಲ್ಲೇ, ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಕೂಗು ಹೆಚ್ಚಾಗಿ ಕೇಳಿಬರುತ್ತಿದೆ. ಚಾಮರಾಜನಗರ ಜಿಲ್ಲೆಗೆ ದಿವಂಗತ ಎಚ್.ಎಸ್. ಮಹಾದೇವ ಪ್ರಸಾದ್ ಅವರ ನಂತರ ಯಾರಿಗೂ ಮಂತ್ರಿ ಸ್ಥಾನ ಸಿಕ್ಕಿಲ್ಲ. ಹಿಂದುಳಿದ ಉಪ್ಪಾರ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಬೇಕು ಎಂಬುದು ಕಾರ್ಯಕರ್ತರ ಆಗ್ರಹವಾಗಿದೆ. 4 ಬಾರಿ ಗೆದ್ದರೂ, ಪಕ್ಷ ಸಂಘಟನೆಗೆ ದುಡಿದರೂ ಇನ್ನೂ ಸಂಪುಟದಲ್ಲಿ ಅವಕಾಶ ಸಿಕ್ಕಿಲ್ಲ. ನಿಷ್ಠಾವಂತನಿಗೆ ಸ್ಥಾನಮಾನ ನೀಡಬೇಕು ಎಂಬುದು ಹಲವಾರು ಮುಖಂಡರ ಒತ್ತಾಯವಾಗಿದೆ.

ಚಾಮರಾಜನಗರ ಜಿಲ್ಲೆ ಸದ್ಯ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಕಳೆದುಕೊಂಡಿದೆ. ಆಡಳಿತಾತ್ಮಕವಾಗಿ ಜಿಲ್ಲೆಗೆ ಅನ್ಯಾಯ ಆಗುತ್ತಿದೆ ಎಂಬ ಭಾವನೆ ಇದೆ. ಆದರೆ ಮೇ-ಜೂನ್ 2026 ರಲ್ಲಿ ಸಂಪುಟ ಪುನರ್‌ರಚನೆ ಚರ್ಚೆ ನಡೆಯುತ್ತಿದೆ. ಪುಟ್ಟರಂಗಶೆಟ್ಟಿ ಅವರು ಸಿಎಂ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದು, ಜಿಲ್ಲಾ ಮಟ್ಟದಲ್ಲಿ ಅಹಿಂದ ನಾಯಕತ್ವ ಬಲಪಡಿಸಲು ಇವರಿಗೆ ಅವಕಾಶ ನೀಡಬಹುದು ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ.

ಈ ಹಿಂದೆ ಸಚಿವರಾಗಿ ಕೆಲಸ ಮಾಡಿದ ಅನುಭವ, ವಿವಾದರಹಿತ ವ್ಯಕ್ತಿತ್ವ ಇವರ ಪ್ಲಸ್ ಪಾಯಿಂಟ್ ಆಗುವ ಸಾಧ್ಯತೆಗಳು ಇದೆ. 2028ರ ವಿಧಾನಸಭಾ ಚುನಾವಣೆ ಗುರಿಯಿಟ್ಟು ಹಿಂದುಳಿದ ವರ್ಗಗಳನ್ನು ಓಲೈಸಲು ಕಾಂಗ್ರೆಸ್‌ಗೆ ಉಪ್ಪಾರ ಸಮುದಾಯದ ನಾಯಕ ಬೇಕು. ಈ ನಿಟ್ಟಿನಲ್ಲಿ ಪುಟ್ಟರಂಗಶೆಟ್ಟಿ ಅವರ ಹೆಸರು ಹೆಚ್ಚಾಗಿ ಕೇಳಿಬರುತ್ತಿದೆ.

ಜೂನ್‌ನಲ್ಲಿ ನಡೆಯುವ ರಾಜ್ಯಸಭಾ-ವಿಧಾನ ಪರಿಷತ್ ಚುನಾವಣೆ ಮುಗಿದ ಕೂಡಲೇ ಸಂಪುಟ ಪುನರ್‌ರಚನೆ ಆಗಲಿದೆ. ಅಲ್ಲಿಯವರೆಗೆ ಪುಟ್ಟರಂಗಶೆಟ್ಟಿ ಅಭಿಮಾನಿಗಳು ಡೆಲ್ಲಿ ದರ್ಬಾರ್ ಮೇಲೆ ಕಣ್ಣಿಟ್ಟಿದ್ದಾರೆ.

Share this Article
Leave a comment