ಚಾಮರಾಜನಗರ: ನಗರಸಭೆ ವ್ಯಾಪ್ತಿಯ ಪೌರಕಾರ್ಮಿಕರಿಗೆ ಸುರಕ್ಷತಾ ಪರಿಕರಗಳನ್ನು ನೀಡದೇ ಚರಂಡಿಯನ್ನು ಬರಿಗೈನಿಂದ ಸ್ವಚ್ಛ ಮಾಡುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ನಗರಸಭೆ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿದೆ.
ಚಾಮರಾಜನಗರ ನಗರಸಭೆಯಲ್ಲಿ ಜೂ. 17 ರಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯರಾದ ಶಂಕರ್ ಸಿ.ಅಂಕನಶೆಟ್ಟಿಪುರ ಅವರ ಅಧ್ಯಕ್ಷತೆಯಲ್ಲಿ ನಡೆದ ಪೌರಕಾರ್ಮಿಕರ ಕುಂದುಕೊರತೆ ಮತ್ತು ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪೌರಕಾರ್ಮಿಕರಿಗೆ ಗಂಬೂಟ್, ಗೌಸ್, ಸಮವಸ್ತ್ರ ಮುಂತಾದ ಸುರಕ್ಷತಾ ಪರಿಕರಗಳನ್ನು ಕಾರ್ಮಿಕರಿಗೆ ಕೆಲಸವನ್ನು ನಿರ್ವಹಿಸುವಂತೆ ಸೂಚಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿತ್ತು.

ಆದರೆ ಸಂಬಂಧಪಟ್ಟ ನಗರಸಭೆ ಅಧಿಕಾರಿಗಳು ಯಾವುದೇ ಪರಿಕರಗಳನ್ನು ನೀಡದೇ ಮುಖ್ಯರಸ್ತೆಯ ಬದಿಗಳಲ್ಲಿ ಮರಳನ್ನು ತೆಗೆಸಿರುತ್ತಾರೆ. ಮುಖ್ಯರಸ್ತೆಯಾಗಿರುವುದರಿಂದ ಈ ಸ್ಥಳದಲ್ಲಿ ಬ್ಯಾರಿಕೇಡ್ ಅಳವಡಿಸಬೇಕಾಗಿತ್ತು. ಈ ಕುರಿತು ಸಭೆಯಲ್ಲಿ ನಿರ್ದೇಶಿಸಲಾಗಿದ್ದರೂ ಸಹ ಅಧಿಕಾರಿಗಳು ಯಾವುದೇ ಕ್ರಮವನ್ನು ತೆಗೆದುಕೊಳ್ಳದೇ ಇರುವುದು ವಿಷಾಧನೀಯ ಹಾಗೂ ಆಯೋಗಕ್ಕೆ ಅಗೌರವವನ್ನು ತೋರಿಸಲಾಗಿರುತ್ತದೆ ಎಂದು ವಾಯ್ಸ್ ಮೆಸೇಜ್ ಮೂಲಕ ಆಯೋಗಕ್ಕೆ ದೂರು ಸ್ವೀಕೃತವಾಗಿತ್ತು.
ದೂರಿನಲ್ಲಿರುವ ಅಂಶಗಳನ್ನು ಪರಿಶೀಲಿಸಿ ನಿಯಮಾನುಸಾರ ಕ್ರಮಕೈಗೊಂಡು ವರದಿಯನ್ನು ಆಯೋಗಕ್ಕೆ ಸಲ್ಲಿಸುವುದು. ತಪ್ಪಿದಲ್ಲಿ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಅಧಿನಿಯಮ 2012ರ ಸೆಕ್ಷನ್-9 ರನ್ವಯ ಸಿವಿಲ್ ನ್ಯಾಯಾಲಯದ ಅಧಿಕಾರವನ್ನು ಬಳಸಿ ಆಯೋಗದಲ್ಲಿ ಪ್ರಕರಣ ದಾಖಲಿಸಿ ವಿಚಾರಣೆಗೆ ಒಳಪಡಿಸಲಾಗುವುದೆಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.