*ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಶಿವಸ್ವಾಮಿ ಸಲಹೆ
*ಕಾಗಲವಾಡಿ ಜೈ ಭೀಮರಾವ್ ಗಾರೆ ಕೆಲಸ ಸ್ವಸಹಾಯ ಸಂಘದಿಂದ ಅಂಬೇಡ್ಕರ್ ಜಯಂತಿ
ಚಾಮರಾಜನಗರ: ತಾಲೂಕಿನ ಜೈ ಭೀಮರಾವ್ ಗಾರೆ ಕೆಲಸ ಸ್ವಸಹಾಯ ಸಂಘದಿಂದ ಬಾಬಾ ಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಅವರ ೧೩೫ನೇ ಜಯಂತಿಯನ್ನು ಆಚರಣೆ ಮಾಡಲಾಯಿತು.
ಕಾಗಲವಾಡಿ ಗ್ರಾಮದ ಮುಂಭಾಗದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ನಾಮಫಲಕಕ್ಕೆ ಹೂವಿನ ಅಲಂಕಾರ ಮಾಡಿ, ಸಿಹಿ ವಿತರಣೆ ಮಾಡಿದರು. ಬಳಿಕ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ತಾ.ಪಂ.ಮಾಜಿ ಸದಸ್ಯ ಶಿವಸ್ವಾಮಿ ಮಾತನಾಡಿ, ಅಂಬೇಡ್ಕರ್ ಅವರು ವಿಶ್ವ ಮಾನವ, ಅಪಾರವಾದ ಪಾಂಡಿತ್ಯವನ್ನು ಪಡೆದು ಸಂವಿಧಾನ ರಚನೆ ಮಾಡಿ ದೀನ, ದಲಿತರು, ಹಿಂದುಳಿದ ವರ್ಗದವರು ಹಾಗೂ ಸರ್ವರಿಗೂ ಸಾಮಾಜಿಕ ನ್ಯಾಯವನ್ನು ನೀಡಿದ್ದಾರೆ ಎಂದರು.

ಬುದ್ದ, ಬಸವ ಅಂಬೇಡ್ಕರ್ ಅವರ ಹಾದಿಯಲ್ಲಿ ಸಾಗುವ ಮೂಲಕ ಪ್ರತಿಯೊಬ್ಬರು ಸ್ವಾಭಿಮಾನದ ಬದುಕುನ್ನು ಕಟ್ಟಿಕೊಳ್ಳಬೇಕಿದೆ. ಅವರ ತತ್ವ ಚಿಂತನೆಗಳು ಪ್ರತಿಯೊಬ್ಬರಿಗೂ ಆದರ್ಶವಾಗಬೇಕಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜೈ ಭೀಮರಾವ್ ಗಾರೆ ಕಾರ್ಮಿಕರ ಪುರುಷರ ಸ್ವಸಹಾಯ ಸಂಘದ ಅಧ್ತಕ್ಷ ಮಹದೇವಸ್ವಾಮಿ, ಉಪಾಧ್ಯಕ್ಷ ರಾಜೇಶ್, ಕಾರ್ಯದರ್ಶಿ ಸಿದ್ದೇಶ್, ಮಾಜಿ ಅಧ್ಯಕ್ಷ ನರಸಿಂಹಯ್ಯ, ಸದಸ್ಯರಾದ ನಂಜಯ್ಯ, ವೀರಭದ್ರ( ಕೊಟ್ಟೂರು), ರಮೇಶ್, ಮಲ್ಲು, ಸಿದ್ದರಾಜು, ಪುಟ್ಟಮಾದಯ್ಯ, ನಂದೀಶ್, ಬಸವರಾಜು, ಚಂದ್ರ, ಬಸವಣ್ಣ, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಮರಿಸ್ವಾಮಿ, ಯಜಮಾನರು ಹಾಗೂ ಗ್ರಾಮಸ್ಥರು ಇದ್ದರು.