ಪ್ರಿಯಾಂಕ್ ಖರ್ಗೆಗೆ ಡಿಸಿಎಂ ಸ್ಥಾನಕ್ಕಾಗಿ ಆಗ್ರಹ 

ಮಣಿಕಂಠ ಜನತಾ ರಾಯಭಾರಿ
2 Min Read

ಮೈಸೂರು: ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ನೂತನ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಕಾಂಗ್ರೆಸ್ ಹೈಕಮಾಂಡ್ ಒತ್ತಾಯಿಸಿ ಪ್ರತಿಭಟನೆ ನಡೆಯಿತು.

ನಗರದ ಪುರಭವನದ ಅಂಬೇಡ್ಕರ್ ಪ್ರತಿಮೆ ಎದುರು ಅಖಿಲ ಕರ್ನಾಟಕ ಪ್ರಿಯಾಂಕ ಖರ್ಗೆ ಅಭಿಮಾನಿ ಬಳಗ ಮತ್ತು ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಪ್ರತಿಭಟನೆ ಮಾಡಲಾಯಿತು. ಪ್ರಿಯಾಂಕ್ ಖರ್ಗೆ ಪರ ವಿವಿಧ ಘೋಷಣೆಗಳನ್ನು ಕೂಗಿದ ಹೋರಾಟಗಾರರು, ಡಿಸಿಎಂ ಸ್ಥಾನ ನೀಡುವಂತೆ ಕಾಂಗ್ರೆಸ್ ಪಕ್ಷöವನ್ನು ಆಗ್ರಹಿಸಿದರು.

ಪ್ರಿಯಾಂಕ ಖರ್ಗೆ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಇಂತಹ ಸಮರ್ಥ ಆಡಳಿತಗಾರರಿಗೆ  ಉಪಮುಖ್ಯಮಂತ್ರಿ ಸ್ಥಾನ ಕೊಡದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಪಿಸಿಸಿ ಸಂಯೋಜಕ ವಿಜಯಕುಮಾರ್ ಬಂಡಿಪಾಳ್ಯ ಮಾತನಾಡಿ, ಪ್ರಿಯಾಂಕ್ ಖರ್ಗೆ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎನ್ನುವುದು ಕೇವಲ ಒಂದು ಜಿಲ್ಲೆಯ ಜನರ ಆಶಯವಲ್ಲ; ಇಡೀ ರಾಜ್ಯದ ಜನರ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಒಕ್ಕೊರಲ ಆಗ್ರಹವಾಗಿದೆ.

ಯುವ ಸಮುದಾಯದ ಧ್ವನಿಯಾಗಿ ಗುರುತಿಸಿಕೊಂಡಿರುವ ಪ್ರಿಯಾಂಕ್ ಖರ್ಗೆಯವರು ಅಭಿವೃದ್ಧಿ ಪರ ಚಿಂತನೆ, ಆಡಳಿತಾತ್ಮಕ ದಕ್ಷತೆ ಹಾಗೂ ಜನಸಾಮಾನ್ಯರೊಂದಿಗೆ ಹೊಂದಿರುವ ನಿಕಟ ಸಂಪರ್ಕದಿಂದ ರಾಜ್ಯಾದ್ಯಂತ ಅಪಾರ ಜನಮನ್ನಣೆ ಗಳಿಸದ್ದಾರೆ. ಆಡಳಿತದಲ್ಲಿ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದ್ದಾರೆ ಎಂದರು.

ಸಮಾಜವಾದಿ, ಜಾತ್ಯಾತೀತ ಚಿಂತನೆಯ ಪ್ರಿಯಾಂಕ್ ಖರ್ಗೆ ಅವರು ಅಂಬೇಡ್ಕರ್, ಬುದ್ಧ, ಬಸವಣ್ಣರ ಆಶಯ ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಕೊಲೆ ಬೆದರಿಕೆ ಬಂದಾಗ, ನಿಮ್ಮ ಕುಟುಂಬವನ್ನು ಮುಗಿಸುತ್ತೇವೆ ಎಂದಾಗಲೂ ಯಾವುದಕ್ಕೂ ಕೇರ್ ಮಾಡದೇ ಪಕ್ಷ ಮತ್ತು ಸರ್ಕಾರಕ್ಕೆ ಹೆಸರು ಬರುವಂತೆ ಕೆಲಸ ಮಾಡಿದರು.

ಉಪ ಮುಖ್ಯಮಂತ್ರಿ ಸ್ಥಾನವನ್ನು ಎಲ್ಲರೂ ಕೇಳುತ್ತಾರೆ. ಪ್ರತಿಭೆ, ಶಕ್ತಿ ಸಾಮರ್ಥ್ಯ, ಪಕ್ಷದ ಸ್ಥಾನಕ್ಕೆ ಗೌರವ ತರುವ ಕೆಲಸ, ಮುಂದಿನ ಪೀಳಿಗೆಗೆ ಮಾರ್ಗದರ್ಶಕರಾಗಿ ದುಡಿಯುವ ನಾಯಕ ಪ್ರಿಯಾಂಕ್ ಖರ್ಗೆ ಅವರಿಗೆ ನಾವು ಡಿಸಿಎಂ ಸ್ಥಾನ ಕೊಡುವಂತೆ ಹೋರಾಟ ಮಾಡುತ್ತಿದ್ದೇವೆ ಎಂದರು.

ಕೆಪಿಸಿಸಿ ಐನ್‌ಟಿಸಿಯು ರಾಜ್ಯ ಉಪಾಧ್ಯಕ್ಷ ನಾಗರಾಜು, ಕೆಪಿಸಿಸಿ ಕಾರ್ಮಿಕ ವಿಭಾಗದ ಕಾರ್ಯದರ್ಶಿ ಸುರೇಶ್ ಕೋಟೆ, ದಸಂಸ ಜಿಲ್ಲಾ ಸಂಚಾಲಕ ಸ್ವಾಮಿ ಬಿಳಿಕೆರೆ, ಕೆಪಿಸಿಸಿ ಸಂಯೋಜಕ ಸಂತೋಷ್ ಚಿಕ್ಕನಹಳ್ಳಿ, ಐಎನ್‌ಟಿಸಿಯು ಪ್ರಧಾನ ಕಾರ್ಯದರ್ಶಿ ಪುಟ್ಟರಾಜ್ ಯಾದವ್, ಜಿಲ್ಲಾಧ್ಯಕ್ಷ ಸಿಂಧುವಳ್ಳಿ ಮಧು, ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ಚಲುವರಾಜು ಇಲವಾಲ, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕುಮಾರ್, ಮುಖಂಡರಾದ ಪುಟ್ಟರಾಜು, ಚಿಕ್ಕಳ್ಳಿ ಸಂತೋಷ್ಬಿ, ಬಿಳಿಕೆರೆ ಸ್ವಾಮಿ, ಶಿವರಾಜ್ ಸೇರಿದಂತೆ ವಿವಿಧ ದಲಿತ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

Share this Article
Leave a comment