ಚಾಮರಾಜನಗರ: ಬಹುತ್ವ,ಬಂಧುತ್ವ ಭಾರತದ ಮೇಲೆ ದಿನನಿತ್ಯ ದಾಳಿ ನಡೆಯುತ್ತಿದ್ದು,ನಾವು ಅತ್ಯಂತ ಕೆಟ್ಟ ಕಾಲಘಟ್ಟದಲ್ಲಿದ್ದೇವೆ ಎಂದು ಚಿಂತಕ, ಹಿರಿಯ ಪತ್ರಕರ್ತ, ಅಂಕಣಕಾರ,ಹಾಗೂ ಸಾಮಾಜಿಕ ಕಾರ್ಯಕರ್ತ ಶಿವಸುಂದರ್ ಪ್ರತಿಪಾದಿಸಿದರು.
ಪಟ್ಟಣದ ಜೋಡಿರಸ್ತೆಯ ವರ್ತಕರ ಭವನದಲ್ಲಿ ಭಾನುವಾರ ಜಮಾತೆ ಇಸ್ಲಾಮಿ ಹಿಂದ್ ಹಾಗೂ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಈದ್ ಸೌಹಾರ್ದ ಕೂಟ ಹಾಗೂ ಬಹುಭಾಷಾ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಅವರು ದಾಳಿಗಳ ಸ್ವರೂಪವನ್ನು ವಿಶ್ಲೇಷಿಸಿದರು.
ಅಂಬೇಡ್ಕರ್ ರಚಿಸಿದ ಸಂವಿಧಾನದ ಮೇಲೆ ಸಾವರ್ಕರ್ ಮನುವಾದ ಹೇರಲಾಗುತ್ತಿದೆ. ಹಿಂದುಗಳೇತರ ಜಾತಿಗಳವರನ್ನು ಎರಡನೇ ದರ್ಜೆಯ ಪ್ರಜೆಗಳಾಗಿ ಕಾಣಲಾಗುತ್ತದೆ. ಹಿಂದೂಗಳಲ್ಲೇ ಮಹಿಳೆ ಗಂಡಸಿನ ಅಡಿಯಾಳಾಗಿರಬೇಕು. ಬಾಯಲ್ಲಿ ‘ಹಿಂದು ನಾವೆಲ್ಲಾ ಒಂದು’ ಎನ್ನಲಾಗುತ್ತಿದ್ದರು ಬ್ರಾಹ್ಮಣರು ಶ್ರೇಣೀಕೃತ ವ್ಯವಸ್ಥೆಯಲ್ಲಿ ಉನ್ನತ ಸ್ಥಾನ,ಪದವಿ ಹೊಂದಿರಬೇಕು. ಉಳಿದವರು ಅವರ ಮಾತಿನಂತೆ ನಡೆಯಬೇಕು ಎಂದು ದೂರಿದರು.

ಸಮತೆ,ಮಮತೆ,ಘನತೆ: ಬೌದ್ಧ ಧರ್ಮದಿಂದ ಹಿಡಿದು ದಲಿತ,ಶೂದ್ರ ಸಮುದಾಯಗಳ ಸಮಾಜ ಸುಧಾರಕರು ಸಮತೆ,ಮಮತೆ ಹಾಗೂ ಘನತೆಯ ಬದುಕನ್ನು ಪ್ರತಿಪಾದಿಸುತ್ತಾ ಬಂದಿದ್ದಾರೆ. ಎಲ್ಲಾ ಜಾತಿಗಳ ಮಧ್ಯೆ ಬಂಧುತ್ವ ಬೆಸೆಯುವ ಕೆಲಸ ಮಾಡಿದ್ದಾರೆ. ಚಪ್ಪಲಿ ಹೊಲಿಯುವ, ಮಲದ ಗುಂಡಿಗೆ ಇಳಿಯುವ ದಲಿತರನ್ನು ಮನುಷ್ಯರು ಎಂದು ಪರಿಗಣಿಸದಿರುವ ಮೇಲು-ಕೀಳು ಜಾತಿ ಎಂದು ಪರಿಗಣಿಸುವ ಧರ್ಮವನ್ನು ಧರ್ಮ ಎಂದು ಕರೆಯಲು ಸಾಧ್ಯವೇ ಇಲ್ಲ. ನಾವು ಬಯಸುವುದು ಮೃಗತ್ವವಲ್ಲ. ಮನುಷ್ಯತ್ವ ಎಂದರು.
ಸಾವರ್ಕರ್ ಸಿದ್ಧಾಂತಗಳನ್ನು ವ್ಯವಸ್ಥಿತವಾಗಿ ಜಾರಿಗೊಳಿಸಲಾಗುತ್ತಿದೆ. ಮುಸ್ಲಿಮರು,ಕ್ರಿಶ್ಚಿಯನ್ನರನ್ನು ಈ ದೇಶದ ಪ್ರಜೆಗಳಲ್ಲ ಎಂದು ಸಾಬೀತು ಪಡಿಸುವ ಷಡ್ಯಂತ್ರಗಳು ನಡೆಯುತ್ತಿವೆ. ಸಾವರ್ಕರ್ ಸಿದ್ದಾಂತದ ವಿರುದ್ದ ಪ್ರತಿರೋಧ ತೋರುವ ಗಟ್ಟಿತನ ಪ್ರತಿಪಕ್ಷಗಳು ತೋರುತ್ತಿಲ್ಲ. ನ್ಯಾಯಾಲಯಗಳು ಸಂವಿಧಾನಕ್ಕೆ ವಿರೋಧವಾಗಿ ನಡೆದುಕೊಂಡರೆ ಚಾಟಿ ಬೀಸುವುದನ್ನು ಬಿಟ್ಟು ತೇಪೆ ಸಾರಿಸುವ ಕೆಲಸ ಮಾಡುತ್ತಿವೆ. ಪ್ರಬಲ ಪ್ರತಿರೋಧ ತೋರಿದರೆ ಕೇಂದ್ರ ಸರ್ಕಾರ ಮಣಿಯಲೇ ಬೇಕಾಗುತ್ತದೆ ಎಂಬುದನ್ನು ಮಹಿಳೆಯರು ಮತ್ತು ರೈತರು ಅನೇಕರ ಪ್ರಾಣಾರ್ಪಣೆಯ ನಡುವೆಯು ಛಲಬಿಡದೆ ಸಾಧಿಸಿ ತೋರಿಸಿದ್ದಾರೆ.ಅಂತಹ ಪ್ರತಿರೋಧ ಒಂದೇ ಈಗ ನಮ್ಮ ಮುಂದಿರುವ ಆಯ್ಕೆ. ಅದು ಸಾಧ್ಯವಾಗದಿದ್ದರೆ ಬದಲಾವಣೆ ಸಾಧ್ಯವಿಲ್ಲ ಎಂದರು.
ಎಸ್ಐಆರ್ ಅನ್ಯಾಯದ ಪರಮಾವಧಿ: ಮತದಾರರ ಪರಿಷ್ಕರಣೆ ಎಂಬುದು ಅನ್ಯಾಯದ ಪರಮಾವಧಿ. ಚುನಾವಣಾ ಅಯೋಗಕ್ಕೆ ನಾಗರಿಕತ್ವವನ್ನು ಪ್ರಶ್ನಿಸುವ ಅಧಿಕಾರ ಇಲ್ಲ. ಚುನಾವಣಾ ಅಯೋಗ ಮತದಾರರ ಪಟ್ಟಿಗೆ ಹೆಸರು ಸೇರಿಸುವ ಕೆಲಸ ಸ್ವಾತಂತ್ರ್ಯ ಬಂದ ಕಾಲದಿಂದ ನಡೆಸಿಕೊಂಡು ಬರುತ್ತಿದೆ. ಈಗ ಮತದಾರರ ಪಟ್ಟಿಯಿಂದ ಹೊರಹಾಕುವ ಕೆಲಸ ನಡೆಯುತ್ತಿದೆ. ದಲಿತರು,ಆದಿವಾಸಿಗಳು, ಅಸಂಘಟಿತ ಕಾರ್ಮಿಕರು,ಎಲ್ಲಾ ಜಾತಿಯ ಮಹಿಳೆಯರನ್ನು ಮತದಾರರ ಪಟ್ಟಿಯಿಂದ ಹೊರಗಿಡುವ ಷಡ್ಯಂತ್ರ ನಡೆಯುತ್ತಿದೆ. ಮುಸಲ್ಮಾನರನ್ನು ಬಾಂಗ್ಲಾ ವಲಸಿಗರು ಎಂದು ಬಿಂಬಿಸುವ ಕೆಲಸ ಮಾಡಲಾಗುತ್ತಿದೆ. ಇನಿಷಿಯಲ್ ನಲ್ಲಿ ವ್ಯತ್ಯಾಸವಾದರೆ ಸಂಶಯಾಸ್ಪದ ಮತದಾರರು ಮತ ಹಾಕುವ ಸಾಂವಿಧಾನಿಕ ಹಕ್ಕಿನಿಂದ ಹೊರಗಿಡಲಾಗುತ್ತಿದೆ. ಇವರಿಗೆ ಮುಂದೆ ಯಾವುದೇ ಸೌಲಭ್ಯಗಳು ದೊರಕುವುದಿಲ್ಲ. ಇವರು ಎರಡನೇ ದರ್ಜೆ ಪ್ರಜೆಗಳಾಗಿ ಅತಂತ್ರರಾಗಿ ಬದುಕಬೇಕಾಗುತ್ತದೆ. ಈಗಾಗಲೇ ಮತದಾನ ನಡೆದ ರಾಜ್ಯಗಳಲ್ಲಿ 7.5 ಕೋಟಿ ಜನರನ್ನು ಹೊರಗೆ ಹಾಕಲಾಗಿದೆ. ದೇಶದಲ್ಲಿ ಎಸ್ಐಆರ್ ಪೂರ್ಣ ಪ್ರಮಾಣದಲ್ಲಿ ಜಾರಿಯಾದರೆ 12 ಕೋಟಿ ಜನ ಹೊರಗುಳಿಯುತ್ತಾರೆ. ಆದ್ದರಿಂದ ಎಚ್ಚರ ವಹಿಸಬೇಕಾದ್ದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದರು
ಮಸೀದಿ ದರ್ಶನ: ಜಮಾತೆ ಇಸ್ಲಾಮಿ ಹಿಂದ್ ನ ರಾಜ್ಯ ಕಾರ್ಯದರ್ಶಿ ಅಕ್ಬರ್ ಆಲಿ ಉಡುಪಿ ಮಾತನಾಡಿ, ಮುಸ್ಲಿಮರು ಭಯೋತ್ಪಾದಕರು,ಮಸೀದಿಗಳು ಚಾಕು ಚೂರಿಗಳನ್ನು ಬಚ್ಚಿಡುವ ಜಾಗ ಎಂಬ ಅಪಪ್ರಚಾರ ತೊಡೆದುಹಾಕಲು ಮಸೀದಿ ದರ್ಶನ ಎಂಬ ಕಾರ್ಯಕ್ರಮ ಎಲ್ಲೆಡೆ ನಡೆಸಲಾಗುತ್ತದೆ. ಮುಸ್ಲಿಂ ಧರ್ಮ, ಆಚರಣೆ, ನಮಾಜ್ ಮಸೀದಿಗಳ ಬಗ್ಗೆ ಅಪನಂಬಿಕೆ ಅನುಮಾನಗಳನ್ನು ಹೊಗಲಾಡಿಸುವ ಕೆಲಸವನ್ನು ಜಮಾತೆ ಹಿಂದ್ ಹಮ್ಮಿಕೊಂಡು ನಡೆಸಿಕೊಂಡು ಬರುತ್ತಿದೆ ಎಂದರು
ಜಮಾತೆ ಇಸ್ಲಾಮಿ ಹಿಂದ್ ವಲಯ ಸಂಚಾಲಕ ಯು.ಅಬ್ದುಸ್ಸಲಾಮ್ ಪ್ರಾಸ್ತಾವಿಕ ಮಾತನಾಡಿದರು. ಕೆ.ವೆಂಕಟರಾಜು ಅಧ್ಯಕ್ಷತೆ ವಹಿಸಿದ್ದರು. ಚಾಮರಾಜನಗರದಲ್ಲಿ ಸಾಲು ಮರಗಳನ್ನು ನೆಟ್ಟು ಪೋಷಿಸುತ್ತಿರುವ ಪರಿಸರ ಪ್ರೇಮಿ ಸಿ.ಎಂ.ವೆಂಕಟೇಶ್ ಅವರನ್ನು ಆತ್ಮೀಯವಾಗಿ ಗೌರವಿಸಲಾಯಿತು.
ಇದೇ ವೇಳೆ ಬಹುಭಾಷಾ ಕವಿಗೋಷ್ಠಿ ನಡೆಯಿತು.ಶಿವಸುಂದರ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಇಲ್ಲಿನ ಮದೀನ ಮಸೀದಿಯ ಅಧ್ಯಕ್ಷ ನಯೀಮ್ ಉಲ್ ಹಕ್ ಕಾರ್ಯದರ್ಶಿ ವಸಿಂಪಾಶಾ, ಪರಿಸರವಾದಿ ಪುಣಜನೂರು ದೊರೆಸ್ವಾಮಿ, ವರ್ತಕರ ಸಂಘದ ಅಧ್ಯಕ್ಷ ಎನ್.ಶಂಕರ್. ಡಾ.ಪಿ.ವೀರಭದ್ರ ನಾಯಕ, ವಕೀಲ ಕೆ.ಎಂ.ಶ್ರೀನಿವಾಸ ಮೂರ್ತಿ, ಹಿರಿಯ ಪತ್ರಕರ್ತ ಎ.ಡಿ’ಸಿಲ್ವ, ಜಮಾತೆ ಇಸ್ಲಾಮಿ ಹಿಂದ್ ನ ಸಂಚಾಲಕ ಝೈನುಲ್ ಅಬೀದಿನ್,ಮುಹಮ್ಮದ್ ಅಲಿ ಇದ್ದರು.