ಚಾಮರಾಜನಗರ: ತಾಲೂಕಿನ ಮಸಣಾಪುರದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ನಡೆದ ಘಟನೆಗೆ ಸಂಬಂಧಿಸಿದಂತೆ ಎರಡು ಸಮುದಾಯಗಳ ನಡುವೆ ಶುಕ್ರವಾರ ನಡೆದ ಶಾಂತಿಸಭೆ ಯಶಸ್ವಿಯಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಶ್ರೀ ರೂಪಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಮುತ್ತುರಾಜು ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಎರಡು ಸಮುದಾಯಗಳ ಮುಖಂಡರಿಂದ ಅಭಿಪ್ರಾಯಗಳನ್ನು ಪಡೆದುಕೊಂಡ ಅಧಿಕಾರಿಗಳು, ಎರಡು ಸಮುದಾಯಗಳು ಯಾವುದೇ ಗಲಭೆಗಳಿಗೆ ಆಸ್ಪದವನ್ನು ನೀಡದೇ ಕೋಮುಸೌಹಾರ್ದತೆಯನ್ನು ಕಾಪಾಡುಕೊಳ್ಳುವಂತೆ ಮನವಿ ಮಾಡಿದರು. ಅಧಿಕಾರಿಗಳ ಮನವಿಯಂತೆ ಎರಡು ಸಮುದಾಯಗಳು ಸೌಹಾರ್ದತೆಯನ್ನು ಕಾಪಾಡಿಕೊಳ್ಳುವಂತೆ ಭರವಸೆ ನೀಡಿದರು. ಈ ಮೂಲಕ ಎರಡು ಸಮುದಾಯಗಳ ನಡುವೆ ಆಯೋಜಿಸಿದ್ದ ಶಾಂತಿ ಸಭೆ ಯಶಸ್ವಿಯಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶ್ರೀರೂಪಾ ಅವರು ಮಾತನಾಡಿ, ನಾನು ಜಿಲ್ಲೆಯಲ್ಲಿ ಅಧಿಕಾರವಹಿಸಿಕೊಂಡ ನಂತರ ಇದು ಮೂರನೇ ಶಾಂತಿ ಸಭೆಯಾಗಿದೆ. ಮಸಣಾಪುರ ಗ್ರಾಮದ ಘಟನೆಗೆ ಸಂಬಂಧಿಸಿದಂತೆ ಎರಡು ಸಮುದಾಯಗಳ ಮುಖಂಡರು ಕೂಡ ಇಷ್ಟೊಂದು ಸೌಹಾರ್ದತೆಯಿಂದ ಮಾತನಾಡುತ್ತಾರೆ ಎಂದು ನಾನು ಭಾವಿಸಿರಲಿಲ್ಲ ಎಂದು ತಿಳಿಸಿದರು.
ಪ್ರಸ್ತುತ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಯಾವುದೇ ಕೋಮುಗಲಭೆಗಳು ಸಂಭವಿಸಿಲ್ಲ, ಅಂತೆಯೇ ಮಸಣಾಪುರ ಗ್ರಾಮದ ಘಟನೆಗೂ ಸಂಬಂಧಿಸಿದಂತೆ ಯಾವುದೇ ಗಲಭೆಗಳು ಉಂಟಾಗಬಾರದು. ಜಿಲ್ಲೆಯ ಅಭಿವೃದ್ಧಿಯ ಮತ್ತು ಪ್ರತಿಯೊಬ್ಬ ಸಾರ್ವಜನಿಕರ ಹಿತದೃಷ್ಟಿಯಿಂದ ಎರಡು ಸಮುದಾಯಗಳು ಸೌಹಾರ್ದತೆಯನ್ನು ಕಾಪಾಡಿಕೊಳ್ಳಿ ಎಂದು ಮನವಿ ಮಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಮುತ್ತುರಾಜು ಮಾತನಾಡಿ, ಮಾನವ ಕೇಂದ್ರಿತ ಧರ್ಮವನ್ನು ಬುದ್ಧ ಜಗತ್ತಿಗೆ ಪರಿಚಯಿಸಿಕೊಟ್ಟಿದ್ದಾರೆ. ಅಂತಹ ಬುದ್ಧರ ಕುರಿತು ಎರಡು ಸಮುದಾಯಗಳ ಮುಖಂಡರಲ್ಲೂ ತಿಳುವಳಿಕೆ ಇರುವುದು ಉತ್ತಮ ಬೆಳವಣಿಗೆಯಾಗಿದೆ. ಯಾವ ಪುಣ್ಯಾತ್ಮ ನಮಗೆ ಹಕ್ಕುಗಳನ್ನು ಕೊಟ್ಟಿದ್ದಾರೋ, ಅವರೇ ನಮಗೆ ಕಾನೂನು ಕೊಟ್ಟಿದ್ದಾರೆ. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅಪಮಾನ ಮಾಡುವುದು ಖಂಡನೀಯ ಎಂದರು.
ಮಸಣಾಪುರ ಮತ್ತು ಹೊಂಗನೂರು ಗ್ರಾಮಗಳಲ್ಲಿ ನಡೆದ ಪ್ರಕರಣಗಳನ್ನು ನಿಷ್ಪಕ್ಷಪಾತವಾಗಿ ತನಿಖೆ ಮಾಡುತ್ತೇವೆ. ಎರಡು ಸಮುದಾಯಗಳಿಗೆ ಭಯ ಪಟ್ಟಿಕೊಂಡು ನಾವು ಪ್ರತಿಭಟನೆಯನ್ನು ತಡೆಯುತ್ತಿಲ್ಲ. ಆದರೆ ಪ್ರತಿಭಟನೆಯ ಸಂದರ್ಭದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ಉಂಟಾಗಬಾರದು ಎಂಬುದು ನಮ್ಮ ಆಶಯವಾಗಿದೆ. ಜಿಲ್ಲೆಯಲ್ಲಿ ಇತ್ತೀಚೆಗೆ ತುಂಬಾ ಅಭಿವೃದ್ಧಿ ಕಾಣುತ್ತಿದೆ. ಆದರೆ ಕೋಮುಗಲಭೆಗಳು ಸಂಭವಿಸಿದರೇ, ಅಭಿವೃದ್ಧಿಗೂ ಹೊಡೆತ ಬೀಳುತ್ತದೆ. ಈ ನಿಟ್ಟಿನಲ್ಲಿ ಸೌಹಾರ್ದತೆಯನ್ನು ಕಾಪಾಡಿಕೊಳ್ಳಲು ಎರಡು ಸಮುದಾಯಗಳ ಮುಖಂಡರು ಒಪ್ಪಿಗೆ ನೀಡಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಸಭೆಯಲ್ಲಿ ಅಂಬೇಡ್ಕರ್ ಮಹಾಸಭಾ ಕಾರ್ಯಾಧ್ಯಕ್ಷ ಸಿ.ಕೆ.ಮಂಜುನಾಥ್ ಮಾತನಾಡಿ, ನಮ್ಮ ಸಮಾಜ ಅಂಬೇಡ್ಕರ್ ಅವರನ್ನು ತಂದೆ-ತಾಯಿಗಿಂತಲೂ ಹೆಚ್ಚಾಗಿ ನೋಡುತ್ತಾರೆ. ಮಸಣಾಪುರದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅಪಮಾನ ಮಾಡಿದ ವ್ಯಕ್ತಿಯನ್ನು ವ್ಯಕ್ತಿಯಾಗಿಯೇ ನೋಡಬೇಕು. ಆತನನ್ನು ಯಾವುದೋ ಸಮುದಾಯದ ದೃಷ್ಟಿಯಿಂದ ನೋಡಬಾರದು ಎಂದು ಹೇಳಿದರು.
ನಾವು ಯಾವ ಸಮುದಾಯದ ವಿರುದ್ಧವೂ ಪ್ರತಿಭಟನೆ ನಡೆಸಲು ಮುಂದಾಗಿರಲಿಲ್ಲ. ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದಾಗ ಕಠಿಣ ಕಾನೂನು ರೂಪಿಸಬೇಕು ಎಂಬ ಉದ್ದೇಶದಿಂದ ಜೂ.23 ರಂದು ಪ್ರತಿಭಟನೆಗೆ ಕರೆ ನೀಡಿದ್ದೇವು. ಈ ಪ್ರತಿಭಟನೆಗೆ ಅವಕಾಶವನ್ನು ನೀಡಬೇಕು ಎಂದು ಮನವಿ ಮಾಡಿದರು.
ಉಪ್ಪಾರ ಸಮುದಾಯ ಮುಖಂಡ ಮಾದೇಶ್ ಉಪ್ಪಾರ್ ಮಾತನಾಡಿ, ನಾವು ಡಾ.ಬಿ.ಆರ್.ಅಂಬೇಡ್ಕರ್ ಮೇಲಿನ ಅಪಮಾನವನ್ನು ಖಂಡಿಸಿದ್ದೇವೆ. ಈ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆಯಾಗಲಿ ಎಂದು ನಾವು ಕೂಡ ಒತ್ತಾಯ ಮಾಡಿದ್ದೇವೆ. ಆದರೆ ಪ್ರಕರಣದಲ್ಲಿ ಆರೋಪಿ ಚಂದ್ರು ಅವರ ಮೇಲೆ ಹಲ್ಲೆ ಮಾಡಿ, ಆತನನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ. ಈ ಸಂಬಂಧ ಸೂಕ್ತ ರೀತಿಯಲ್ಲಿ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಮಹಾಸಭಾ ಅಧ್ಯಕ್ಷ ಉಮೇಶ್ ಕುದರ್ ಮಾತನಾಡಿ, ಈ ಹಿಂದೆ ಮಂಗಲ ಮತ್ತು ಹರದನಹಳ್ಳಿ ಗ್ರಾಮಗಳಲ್ಲಿ ಅಂಬೇಡ್ಕರ್ ಅವರಿಗೆ ಅಪಮಾನ ಎಸಗಿದ ಘಟನೆಗಳು ನಡೆದಾಗ, ಎರಡು ಸಮುದಾಯಗಳ ಮುಖಂಡರು ಕುಳಿತು ಮಾತನಾಡಿ ಬಗೆಹರಿಸಿದ್ದೇವು. ಎರಡು ಸಮುದಾಯಗಳು ಅನ್ಯೋನ್ಯತೆಯಿಂದ ಇದ್ದು, ಇದನ್ನು ಮುಂದುವರಿಸಿಕೊಂಡು ಹೋದರೆ ಪರಿಸ್ಥಿತಿ ಸರಿಯಾಗುವುದಿಲ್ಲ ಎಂದು ಹೇಳಿದರು.
ಮುಖಂಡ ಬಾಗಳಿ ರೇವಣ್ಣ ಮಾತನಾಡಿ, ನಾವು ಯಾವುದೇ ಕಾರಣಕ್ಕೂ ಅಂಬೇಡ್ಕರ್ ಅವರ ಮೇಲಿನ ಅಪಮಾನವನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ ಆರೋಪಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡುವುದಲ್ಲದೇ, ಅಮಾನವೀಯವಾಗಿ ನಡೆಸಿಕೊಂಡಿರುವುದು ಸರಿಯಲ್ಲ. ಈ ವಿಚಾರದಲ್ಲಿ ಸೂಕ್ತ ರೀತಿಯಲ್ಲಿ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಮುಖಂಡ ಆರ್.ಮಹದೇವ್ ಮಾತನಾಡಿ, ಮಸಣಾಪುರದಲ್ಲಿ ನಡೆದ ಅಂಬೇಡ್ಕರ್ ಭಾವಚಿತ್ರ ಅಪಮಾನ ಮಾಡಿದ ಪ್ರಕರಣದಲ್ಲಿ ಆರೋಪಿ ಮಾನಸಿಕ ಅಸ್ವಸ್ಥನಾಗಿದ್ದರೇ, ಅಂಬೇಡ್ಕರ್ ಭಾವಚಿತ್ರಕ್ಕೆ ಮಾತ್ರ ಯಾಕೇ ಈ ಕೃತ್ಯ ಮಾಡಿದ್ದಾನೆ. ಇದರ ಹಿಂದೆ ದೊಡ್ಡ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.
ಇನ್ನು ಹಲವಾರು ಮುಖಂಡರು ಮಾತನಾಡಿ, ಮಸಣಾಪುರ ಘಟನೆಯಲ್ಲದೇ ಹೊಂಗನೂರು ಗ್ರಾಮದಲ್ಲಿ ನಡೆದ ಘಟನೆಯನ್ನು ಖಂಡಿಸಿದರು. ಬಳಿಕ ಜಿಲ್ಲಾಧಿಕಾರಿ ಮತ್ತು ಎಸ್ಪಿ ಅವರ ಮನವಿಯಂತೆ ಪ್ರತಿಭಟನೆಗಳನ್ನು ಕೈಬಿಡಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಓ ಮೋನಾರೋತ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಶಿಧರ್, ತಹಸೀಲ್ದಾರ್ ಗಿರಿಜಾ, ಡಿವೈಎಸ್ಪಿ ಸ್ನೇಹಾ ರಾಜ್ ಹಾಗೂ ಎರಡು ಸಮುದಾಯಗಳ ಮುಖಂಡರು ಹಾಜರಿದ್ದರು.