ಮ‌ಹದೇಶ್ವರ ಬೆಟ್ಟದಲ್ಲೂ ಅಕ್ಕ ಕೆಫೆ ತೆರೆಯಲು ಚಿಂತನೆ

ಮಣಿಕಂಠ ಜನತಾ ರಾಯಭಾರಿ
2 Min Read

ಚಾಮರಾಜನಗರ: ಮಹಿಳೆಯರೇ ತಿಂಡಿ ಊಟ ತಯಾರಿಸಿ ವಿಶೇಷ ದರದಲ್ಲಿ ಗ್ರಾಹಕರಿಗೆ ನೀಡುವ ಅಕ್ಕ ಕೆಫೆಯಿಂದ ಮಹಿಳಾ ಸಬಲೀಕರಣ ಮತ್ತು ಹಣಕಾಸು ಬಲವರ್ಧನೆಗೆ ಸಹಾಯಕವಾಗಲಿದ್ದು, ಪ್ರಸಿದ್ಧ ಯಾತ್ರಾ ಸ್ಥಳ ಮಲೆ ಮಹದೇಶ್ವರ ಬೆಟ್ಟದಲ್ಲೂ ಅಕ್ಕ ಕೆಫೆಯನ್ನು ತೆರೆಯಲು ಚಿಂತನೆ ನಡೆಸಲಾಗಿದೆ ಎಂದು ಲೋಕಸಭಾ ಸದಸ್ಯ ಸುನೀಲ್ ಬೋಸ್ ತಿಳಿಸಿದರು.

ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿಯಲ್ಲಿ ಅಕ್ಕ ಕೆಫೆ ಹಾಗೂ ತೆರಕಣಾಂಬಿ ಹೊರವಲಯ ಹಾಗೂ ಕೊಳ್ಳೇಗಾಲ ತಾಲೂಕಿನ ಕೊಂಗರಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಿರ್ಮಿಸಲಾಗಿರುವ 176.89 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಮಲತ್ಯಾಜ್ಯ ನಿರ್ವಹಣಾ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರವು ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ರಾಷ್ಟ್ರೀಯ ಜೀವನೋಪಾಯ ಮಿಷನ್ (ಎನ್.ಆರ್.ಎಲ್.ಎಂ) ಅಡಿಯಲ್ಲಿ ಮಹಿಳೆಯರೇ ಸಂಪೂರ್ಣವಾಗಿ ನಿರ್ವಹಿಸುವ ಅಕ್ಕ ಕೆಫೆಗಳನ್ನು ಪ್ರಾರಂಭಿಸುವ ಯೋಜನೆ ರೂಪಿಸಿದೆ. ಮಹಿಳೆಯರೇ ಸಂಪೂರ್ಣವಾಗಿ ಅಡುಗೆ ತಯಾರಿಸಿ ಗ್ರಾಹಕರಿಗೆ ಮಾರಾಟ ಮಾಡುವ ಅಕ್ಕ ಕೆಫೆ ಉದ್ದೇಶ ಮಹಿಳೆಯರನ್ನು ಆರ್ಥಿಕವಾಗಿ ಸಧೃಡಗೊಳಿಸುವುದಾಗಿದೆ ಎಂದು ಹೇಳಿದರು.

ಪ್ರಸ್ತುತ ತೆರಕಣಾಂಬಿಯಲ್ಲಿ ಆರಂಭವಾಗಿರುವ ಅಕ್ಕ ಕೆಫೆಯನ್ನು ಮಲೆ ಮಹದೇಶ್ವರಬೆಟ್ಟದಲ್ಲಿಯೂ ತೆರೆಯುವ ಉದ್ದೇಶವಿದ್ದು, ತಾಲೂಕುಗಳಲ್ಲಿಯೂ ಆರಂಭವಾದರೆ ಹೆಚ್ಚಿನ ವಹಿವಾಟು ನಡೆಯಲಿದೆ. ಅನ್ನ ಹಾಕುವ ಕಾಯಕ ಶ್ರೇಷ್ಠವಾದದ್ದು, ಮಹಿಳೆಯರಿಂದಲೇ ಎಲ್ಲವು ನಿರ್ವಹಣೆಯಾಗುವ ಅಕ್ಕ ಕೆಫೆಯಲ್ಲಿ ಶುಚಿ ರುಚಿಗೆ ಹೆಚ್ಚಿನ ಆದ್ಯತೆ ನೀಡುವ ಜೊತೆಗೆ ಸ್ವಚ್ಚತೆ ಕಾಪಾಡಿಕೊಳ್ಳಬೇಕು. ಉತ್ತಮ ಸೇವೆ ನೀಡುವ ಮೂಲಕ ಮಾದರಿಯಾಗಿ ಅಕ್ಕ ಕೆಫೆಯನ್ನು ನಡೆಸಿಕೊಂಡು ಹೋಗಬೇಕು ಎಂದರು.

ಮಲತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣದಿಂದ ಸುತ್ತಮುತ್ತಲ ಗ್ರಾಮಗಳ ಜನರ ಆರೋಗ್ಯ ಮತ್ತು ಸುಸ್ಥಿರ ನೈರ್ಮಲ್ಯಕ್ಕೆ ಉತ್ತೇಜನ ಸಿಗಲಿದೆ. ಗ್ರಾಮೀಣ ಭಾಗದ ಸ್ವಚ್ಚತೆಯನ್ನು ಕಾಪಾಡುವ ನಿಟ್ಟಿನಲ್ಲಿ ಘಟಕ ನಿರ್ಮಾಣ ಸ್ಥಾಪನೆಯಾಗಿದೆ. ಗ್ರಾಮಗಳಲ್ಲಿ ಮಳೆ ನೀರು, ಚರಂಡಿಗಳಲ್ಲಿ ಸುಗಮವಾಗಿ ಹರಿಯುವ ಕೆಲಸವಾಗಬೇಕಿದೆ. ಈ ನಿಟ್ಟಿನಲ್ಲಿಯೂ ಹೆಚ್ಚು ಗಮನ ನೀಡಬೇಕೆಂದು ತಿಳಿಸಿದರು.

ಶಾಸಕರಾದ ಎಚ್.ಎಂ. ಗಣೇಶ್ ಪ್ರಸಾದ್ ಮಾತನಾಡಿ, ಅಕ್ಕ ಕೆಫೆ ಮಹಿಳೆಯರ ಸ್ವಾವಲಂಬಿ ಬದುಕಿಗೆ ನೆರವಾಗಲಿದೆ. ಮೂರು ತಿಂಗಳಿಗೊಮ್ಮೆ ಕೆಫೆ ನಿರ್ವಹಣೆಯನ್ನು ಪರಿಶೀಲಿಸಲಾಗುತ್ತದೆ. ಉತ್ತಮವಾಗಿ ಮುಂದುವರೆಸಿಕೊಂಡು ಹೋಗಲು ಸೂಕ್ತ ಕ್ರಮ ವಹಿಸಲಾಗುತ್ತದೆ. ತಾಲೂಕು ಕೇಂದ್ರಗಳಲ್ಲಿಯೂ ಯಶಸ್ವಿಯಾಗಿ ಅಕ್ಕ ಕೆಫೆ ಪ್ರಾರಂಭಿಸಿದರೆ ಇನ್ನಷ್ಟು ಅನುಕೂಲವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ತಾಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಉಮಾಪತಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಉಪ ಕಾರ್ಯದರ್ಶಿ ಡಿ.ಸಿ.ಶೃತಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಎ.ಷಣ್ಮುಗಂ, ಗುರುಶಾಂತಪ್ಪ ಬೆಳ್ಳುಂಡಿ, ಮುಖಂಡರಾದ ನಂಜುಂಡಪ್ರಸಾದ್, ನಂಜಪ್ಪ, ಬಸವರಾಜು, ಬೊಮ್ಮಯ್ಯ ಹಾಗೂ ಇತರರು ಹಾಜರಿದ್ದರು.

Share this Article
Leave a comment