ಮೇ 10 ರಂದು ಕೃತಕ ಕೈ-ಕಾಲು ಜೋಡಣಾ ಶಿಬಿರ

ಮಣಿಕಂಠ ಜನತಾ ರಾಯಭಾರಿ
2 Min Read

ಚಾಮರಾಜನಗರ: ರೋಟರಿ ಸಂಸ್ಥೆ ವತಿಯಿಂದ ಮೇ.10 ರಂದು ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ರೋಟರಿ ಸಂಸ್ಥೆಯ ಜಿಲ್ಲಾ ಮಾಜಿ ಗೌವರ್ನರ್ ಡಾ.ನಾಗಾರ್ಜನ್ ತಿಳಿಸಿದರು.

ನಗರದ ಬಿ.ರಾಚಯ್ಯ ಜೋಡಿರಸ್ತೆಯಲ್ಲಿರುವ ರೋಟರಿ ಭವನದಲ್ಲಿ ಬೆಳಗ್ಗೆ 9.30 ಗಂಟೆಗೆ ಶಿಬಿರ ಪ್ರಾರಂಭವಾಗಲಿದ್ದು, ಈಗಾಗಲೇ 100 ಜನರು ನೋಂದಾಯಿಸಿಕೊಂಡಿದ್ದಾರೆ. ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಯ ದಿವ್ಯಾಂಗರು ಶಿಬಿರದ ಸದುಪಯೋಗಪಡಿಸಿಕೊಳ್ಳಬೇಕು ಎಂದು ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ರೋಟರಿ ಸಂಸ್ಥೆಯು ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯಾಗಿದ್ದು, ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿದ್ದು, ಜನರಿಗೆ ನೆರವಾಗುವ ಕಾರ್ಯಕ್ರಮ ಮಾಡುತ್ತಾ ಬರಲಾಗಿದೆ. ಅಂಗವಿಕಲ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ವಿಚಾರಿಸಿದಾಗ ಜಿಲ್ಲೆಯಲ್ಲಿ ಕೈ ಕಾಲು ತೊಂದರೆಯುಳ್ಳ ವಿಕಲಚೇನರು ಇದ್ದಾರೆ ಎಂದು ಮಾಹಿತಿ ನೀಡಿದರು.

ನಮ್ಮ ಸಂಸ್ಥೆಯ ಅಧ್ಯಕ್ಷರಾದ ಕಾಗಲವಾಡಿಚಂದ್ರು ಅವರು ಅಧಿಕಾರ ವಹಿಸಿಕೊಂಡ ಸಂದರ್ಭದಿಂದಲ್ಲೇ ಕೈ-ಕಾಲು ಕಳೆದುಕೊಂಡಿರುವಂತವರಿಗೆ ಕೃತಕ ಕೈ-ಕಾಲು ಶಿಬಿರವನ್ನು ಮಾಡಬೇಕು ಎಂಬ ಆಶಯದಂತೆ ಈ ಮಹತ್ವಾಕಾಂಕ್ಷೆಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು. ಶಿಬಿರದಲ್ಲಿ ಕೈ-ಕಾಲು ಅಳತೆ ಪಡೆದು ಜೂನ್ ತಿಂಗಳ ಮೊದಲ ವಾರದಲ್ಲಿ ಕೃತಕ ಕೈ-ಕಾಲು ಜೋಡಣೆ ಮಾಡಲಾಗುವುದು ಎಂದರು.

ರೋಟರಿ ಅಧ್ಯಕ್ಷ ಕಾಗಲವಾಡಿ ಚಂದ್ರು ಮಾತನಾಡಿ, ನನ್ನ ಒಂದು ವರ್ಷದ ಅವಧಿಯ 300ನೇ ಕಾರ್ಯಕ್ರಮ ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರವಾಗಿದೆ. ಜಿಲ್ಲೆಯಲ್ಲಿ ಕೈ-ಕಾಲು ತೊಂದರೆಯುಳ್ಳುವರು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ರೋಟರಿ ಸಂಸ್ಥಾಪಕ ಸದಸ್ಯ ಜಿ.ಆರ್.ಆಶ್ವಥನಾರಾಯಣ್ ಮಾತನಾಡಿ, ರೋಟರಿ ಸಂಸ್ಥೆಯು ಜಿಲ್ಲೆಯಲ್ಲಿ ಸಾಮಾಜಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡುತ್ತಾ ಬಂದಿದೆ. 10 ಕೃತಕ ಕಾಲು ವೈಯುಕ್ತಿಕವಾಗಿ ನೀಡಲಾಗಿದೆ ಎಂದರು.

ರೋಟರಿ ಸಂಸ್ಥೆ ಸಂಸ್ಥಾಪಕ ಸದಸ್ಯ ಸಿ.ವಿ.ಶ್ರೀನಿವಾಸಶೆಟ್ಟಿ ಮಾತನಾಡಿ, ರೋಟರಿ ಸಂಸ್ಥೆಯು ಪ್ರತಿತಿಂಗಳು ಭಾನುವಾರ ಉಚಿತ ಕಣ್ಣಿನ ತಪಾಸಣಾ ಶಿಬಿರ ಮಾಡಿಕೊಂಡು ಬರಲಾಗಿದ್ದು ಮೇ. 10 ರಂದು ಉಚಿತ ಕೈ-ಕಾಲು ಜೋಡಣಾ ಶಿಬಿರವನ್ನು ಹಮ್ಮಿಕೊಂಡಿದೆ ಎಂದರು.

ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಣಿಗೆ 9620485806, 8088223227, 9538035559, 9449971709 ಸಂಪರ್ಕಿಸಬಹುದು ಎಂದು ಕೋರಿದ್ದಾರೆ. ಗೋಷ್ಠಿಯಲ್ಲಿ ರೋಟರಿ ಮಾಜಿ ಅಧ್ಯಕ್ಷ ಚಂದ್ರಪ್ರಭಜೈನ್, ಸಂಸ್ಥೆಯ ಮುಂದಿನ ಸಾಲಿನ ಅಧ್ಯಕ್ಷ ಅಬ್ದುಲ್‌ಅಜೀಜ್ ದೀನಾ, ಕಾರ್ಯದರ್ಶಿ ಅಂಕಶೆಟ್ಟಿ ಹಾಜರಿದ್ದರು.

Share this Article
Leave a comment